ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ; ಸಿಎಂ 'ಕೈ' ಬಲಪಡಿಸುವ ಪ್ರಯತ್ನ

ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ, ಜಾತಿ ಗಣತಿ ವಿರೋಧಿಗಳಿಗೆ ಪ್ರತ್ಯುತ್ತರ
Published 27 ಜನವರಿ 2024, 23:22 IST
Last Updated 27 ಜನವರಿ 2024, 23:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾತಿ ಗಣತಿ ವಿಚಾರದಲ್ಲಿ ನಡೆಯುತ್ತಿರುವ ಪರ–ವಿರೋಧ ಚರ್ಚೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಕೈ’ ಬಲಪಡಿಸುವ ಉದ್ದೇಶದಿಂದ ಶೋಷಿತ ಸಮುದಾಯಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಸಮಾವೇಶ ರಾಜಕೀಯ ಸಂದೇಶವನ್ನು ರವಾನಿಸುವ ಸಾಧ್ಯತೆ ಇದೆ.

ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ದಾವಣ ಗೆರೆಯಲ್ಲಿ ನಡೆಸಿದ ಮಹಾ ಅಧಿವೇಶನಕ್ಕೆ ಸಂವಾದಿಯಾಗಿ ಶೋಷಿತ ಸಮುದಾಯದ 30ಕ್ಕೂ ಅಧಿಕ ಜಾತಿಗಳು ಈ ಸಮಾವೇಶ ಆಯೋಜಿಸಿವೆ. ದಲಿತ, ಹಿಂದುಳಿದ, ಆದಿವಾಸಿ, ಅಲೆಮಾರಿ ಹಾಗೂ ಅಲ್ಪಸಂಖ್ಯಾತರು ಸಮಾವೇಶದ ಭಾಗವಾಗಿದ್ದಾರೆ. ಜಾತಿ ಗಣತಿ ವಿರೋಧಿಸುವ ಶಕ್ತಿಗಳಿಗೆ ಪ್ರತ್ಯುತ್ತರ ನೀಡಲು ಸಜ್ಜಾಗಿದ್ದಾರೆ.

‘ಶೋಷಿತ ಸಮುದಾಯವನ್ನು ಜಾಗೃತಗೊಳಿಸುವ ಉದ್ದೇಶದಿಂದ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಸಮುದಾಯದ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ರಾಗಿದ್ದ ಎಚ್‌.ಕಾಂತರಾಜ ವರದಿ ಜಾರಿಗೆ ವಿರೋಧ ಏಕೆ ಎಂಬುದು ಅರ್ಥವಾಗುತ್ತಿಲ್ಲ. ದಾವಣಗೆರೆ, ಬೆಂಗಳೂರು ಸೇರಿ ಹಲವೆಡೆಯಿಂದ ರವಾನೆಯಾಗಿರುವ ಕೆರಳಿಸುವ ಸಂದೇಶಕ್ಕೆ ತಕ್ಕ ಉತ್ತರ ನೀಡುವುದು ನಿಶ್ಚಿತ’ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಎಚ್‌.ಕಾಂತರಾಜ ವರದಿಗೆ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ದಲ್ಲಿಯೇ ಪರ–ವಿರೋಧದ ನಿಲುವುಗಳಿವೆ. ಸಚಿವ ಸಂಪುಟದ ಸದಸ್ಯರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಜಾತಿ ಗಣತಿ ವರದಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿವೆ. ವರದಿ ಜಾರಿಗೆ ಒತ್ತಾಯಿಸುವ ಮೂಲಕ ಶೋಷಿತ ಸಮುದಾಯವು ಸಿದ್ದರಾಮಯ್ಯ ಅವರ ಬೆನ್ನಿಗಿದೆ ಎಂಬುದನ್ನು ಸಾಬೀತುಪಡಿಸುವ ಉದ್ದೇಶವನ್ನು ಸಮಾವೇಶ ಹೊಂದಿದೆ.

‘ಕಾಂತರಾಜ ವರದಿಯನ್ನು ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಾಗಿದ್ದಾರೆ. ಆದರೆ, ಸಚಿವ ಸಂಪುಟದ ಸಹೋದ್ಯೋಗಿಗಳು ಸಹಮತ ವ್ಯಕ್ತಪಡಿ ಸುತ್ತಿಲ್ಲ. ಇಂತಹವರಿಗೆ ಎದುರುತ್ತರ ನೀಡುವ ಅಗತ್ಯವಿದೆ. 92 ವರ್ಷಗಳ ಬಳಿಕ ನಡೆದ ಜಾತಿ ಗಣತಿಯ ವರದಿ ಬಹಿರಂಗಗೊಂಡರೆ ಜಾತಿಗಳ ನಿಖರ ಮಾಹಿತಿ ಲಭ್ಯವಾಗಲಿದೆ. ವರದಿಯ ಬಗ್ಗೆ ಬಹಿರಂಗ ಚರ್ಚೆಗಳು ನಡೆಯುವ ಅಗತ್ಯವಿದೆ’ ಎಂದು ರಾಮಚಂದ್ರಪ್ಪ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂತರಾಜ ವರದಿ ಕಳುವಾಗಿರುವುದಾಗಿ ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರತಿಪಾದಿಸುತ್ತಿದ್ದಾರೆ. ಬಹುಶಃ 2019ರ ಅವರ ಅಧಿಕಾರಾವಧಿಯಲ್ಲಿ ಕಳವಿಗೆ ಯತ್ನ ನಡೆದಿರಬಹುದು.
ಕೆ.ಎಂ.ರಾಮಚಂದ್ರಪ್ಪ, ಅಧ್ಯಕ್ಷ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ

ಲೋಕಸಭಾ ಚುನಾವಣೆಗೆ ತಯಾರಿ

ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಯೋಜಿಸಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ಕಾಂಗ್ರೆಸ್‌, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶೋಷಿತರ ಶಕ್ತಿಪ್ರದರ್ಶನ ನಡೆಸಿ ಪ್ರಚಾರಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ.

ಸಮಾವೇಶದ ಆಯೋಜಕರಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಿದೆ. ಶೋಷಿತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ನಾಯಕರು ಸಮಾವೇಶಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.

‘ಬಿಜೆಪಿ ಸೇರಿ ಎಲ್ಲ ರಾಜಕೀಯ ಪಕ್ಷಗಳ ಶೋಷಿತ ಸಮುದಾಯಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಆದರೆ, ಯಾರೊಬ್ಬರೂ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಹಿರಂಗವಾಗಿ ಮುಂದೆ ಬಂದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು.

ಹಕ್ಕೊತ್ತಾಯಗಳೇನು

  • ಎಚ್‌.ಕಾಂತರಾಜ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಯಥಾವತ್ತಾಗಿ ಜಾರಿಗೊಳಿಸಬೇಕು.

  • ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು.

  • ಇಡಬ್ಲ್ಯುಎಸ್‌ ಮೀಸಲಾತಿಯನ್ನು ರದ್ದುಪಡಿಸಬೇಕು.

  • ಮಹಿಳಾ ರಾಜಕೀಯ ಮೀಸಲಾತಿಯಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಒಳಮೀಸಲು ಸೌಲಭ್ಯಕಲ್ಪಿಸಬೇಕು.

  • ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜಕೀಯ ಮೀಸಲಾತಿ ನೀಡಬೇಕು.

  • ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT