ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಫಲಾನುಭವಿಗಳಿಗೆ ಸಾಲ ವಿತರಣೆ

ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ
Last Updated 16 ಜೂನ್ 2020, 13:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ 50 ಫಲಾನುಭವಿಗಳಿಗೆ ಮಂಜೂರು ಮಾಡಿದ ಸಾಲ ಸೌಲಭ್ಯವನ್ನು ಅಧ್ಯಕ್ಷ ಡಿ.ಎಸ್‌.ಅರುಣ್‌ ಅವರು ಮಂಗಳವಾರ ವಿತರಿಸಿದರು.

ನೇರ ಉದ್ಯೋಗ ಸೃಷ್ಟಿ ಯೋಜನೆಯಡಿ ನಿಗಮ ₹ 1 ಲಕ್ಷ ಸಾಲ ನೀಡಿತು. ಶೇ 20ರಷ್ಟು ಸಬ್ಸಿಡಿ ದೊರೆಯಲಿದ್ದು, 34 ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶ ಕಲ್ಪಿಸಿದೆ. ಆರಂಭದ ಎರಡು ತಿಂಗಳು ಕಂತು ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಸಾಲಕ್ಕೆ ಶೇ 4ರ ಬಡ್ಡಿ ನಿಗದಿಪಡಿಸಲಾಗಿದೆ.

‘ಚಿತ್ರದುರ್ಗ ಜಿಲ್ಲೆಯಿಂದ ಸಾಲಕ್ಕೆ 121 ಅರ್ಜಿಗಳು ಸಲ್ಲಿಕೆಯಾಗಿದ್ದವು. ತಾಂತ್ರಿಕ ಕಾರಣದಿಂದ 60 ಅರ್ಜಿ ತಿರಸ್ಕೃತಗೊಂಡಿವೆ. 61 ಫಲಾನುಭವಿಗಳಿಗೆ ಸಾಲ ಸೌಲಭ್ಯ ಮಂಜೂರಾಗಿದೆ. ವಿವೇಚನಾ ಕೋಟಾದಡಿ ಇನ್ನೂ ಕೆಲ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಮೂರು ದಿನಗಳಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಲಿದೆ’ ಎಂದು ಅರುಣ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಆರ್ಯ ವೈಶ್ಯ ಸಮುದಾಯ ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆ ಹೊಂದಿದೆ. ಈ ವರೆಗೆ ಸಮುದಾಯವನ್ನು ಗುರುತಿಸುವ ಪ್ರಯತ್ನ ನಡೆದಿರಲಿಲ್ಲ. 2019ರಲ್ಲಿ ಸ್ಥಾಪನೆಯಾದ ಅಭಿವೃದ್ಧಿ ನಿಗಮ ಇದೇ ಮೊದಲ ಬಾರಿಗೆ ಸೌಲಭ್ಯ ವಿತರಣೆ ಮಾಡುತ್ತಿದೆ. ತಿನಿಸುಗಳ ಮಾರಾಟಕ್ಕೆ ಫುಡ್‌ಟ್ರಕ್‌ ರೂಪಿಸುವ ಯೋಜನೆ ಇದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

‘ಕೋವಿಡ್‌ ಕಾರಣಕ್ಕೆ ಎಲ್ಲ ನಿಗಮದ ಶೇ 50ರಷ್ಟು ಅನುದಾನವನ್ನು ಮುಖ್ಯಮಂತ್ರಿ ವಾಪಾಸ್‌ ಪಡೆದಿದ್ದಾರೆ. ಹೀಗಾಗಿ, 2020–21ರಲ್ಲಿ ಅರ್ಧದಷ್ಟು ಅನುದಾನ ಮಾತ್ರ ಲಭ್ಯವಾಗಲಿದೆ. ಕೊರೊನಾ ಸೋಂಕಿನಿಂದ ಉಂಟಾದ ಪರಿಸ್ಥಿತಿ ಸುಧಾರಿಸಿದ ಬಳಿಕ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ. ಸಾಲ ಸೌಲಭ್ಯ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಬೇಕು’ ಎಂದು ಮನವಿ ಮಾಡಿದರು.

‘ಆರ್ಯ ವೈಶ್ಯ ಸಮುದಾಯಕ್ಕೆ 1958ರ ಬಳಿಕ ಜಾತಿ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಸಾಮಾನ್ಯ ವರ್ಗದಲ್ಲಿ ಗುರುತಿಸಿಕೊಂಡ ವೈಶ್ಯರಿಗೆ ಮೀಸಲಾತಿ ಸೌಲಭ್ಯ ಕೂಡ ಸಿಕ್ಕಿರಲಿಲ್ಲ. ಯಡಿಯೂರಪ್ಪ ಅವರು ಈ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯುವ ಅವಕಾಶ ಕಲ್ಪಿಸಿದ್ದಾರೆ. ಸಮುದಾಯದ ಬಡವರಿಗೆ ಇದರಿಂದ ಅನುಕೂಲವಾಗಿದೆ’ ಎಂದು ಹೇಳಿದರು.

ಆರ್ಯ ವೈಶ್ಯ ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶ್ರೇಷ್ಠಿ, ಸಮುದಾಯದ ಮುಖಂಡರಾದ ಪಿ.ಎಸ್‌.ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT