ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗಗಳ ಸವಾಲಿಗೆ ಸಜ್ಜಾಗಿ

Last Updated 30 ಜೂನ್ 2018, 10:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಸರ ಚೆನ್ನಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಶುಚಿತ್ವ ಇಲ್ಲದಿದ್ದರೆ ಅನಾರೋಗ್ಯ ಕಾಡುತ್ತದೆ. ಅನೈರ್ಮಲ್ಯತೆಯಿಂದ ಹುಟ್ಟಿಕೊಳ್ಳುವ ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ಸವಾಲಾಗಿ ಪರಿಣಮಿಸಿವೆ.

ಕೊಳಚೆ ನೀರು ಸರಾಗವಾಗಿ ಹರಿದುಹೋಗುವಂತಹ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಾಂಕ್ರಾಮಿಕ ರೋಗಗಳಿಗೆ ಪ್ರಮುಖ ಕಾರಣ. ಕೊಳಚೆ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮುಗಿದರೆ ರೋಗಾಣುಗಳು ಹುಟ್ಟಿಕೊಳ್ಳಲು ಸಾಧ್ಯವಿಲ್ಲ.

ಬದಲಾದ ಜೀವನ ಶೈಲಿಯಿಂದ ಅಸಾಂಕ್ರಾಮಿಕ ರೋಗಗಳು ಸಹ ಬೆಳೆಯುತ್ತಿವೆ. ರಕ್ತದೊತ್ತಡ, ಹೃದಯಾಘಾತ, ಮಧುಮೇಹದಂತಹ ಸಮಸ್ಯೆಗಳು ಹಲವರನ್ನು ಕಾಡುತ್ತಿವೆ. ಆದರೆ, ಡೆಂಗಿಯಂತಹ ಸಾಂಕ್ರಾಮಿಕ ರೋಗಗಳನ್ನು ಹಿಮ್ಮೆಟ್ಟಿಸಲು ಜಿಲ್ಲೆಯಲ್ಲಿ ಈಗಲೂ ಹೋರಾಟ ನಡೆಯುತ್ತಿದೆ.

ಆರೋಗ್ಯ ಇಲಾಖೆ ಅರಿವು ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಮನೆಯ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ತಿಳಿವಳಿಕೆ ನೀಡುತ್ತಿದೆ. ಆದರೂ, ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವಿನ ಕೊರತೆ ಕಾಡುತ್ತಿದೆ. ಜಿಲ್ಲೆಯ ಬಹುತೇಕ ಜನರಿಗೆ ಜ್ವರದ ಸಮಸ್ಯೆ ಕಾಡುತ್ತದೆ. ಸಾಮಾನ್ಯ ಜ್ವರವನ್ನು ಗುಣಪಡಿಸಲು ಸಾಧ್ಯ. ಆದರೆ, ಡೆಂಗಿಯಂತಹ ಜ್ವರ ನಿಜಕ್ಕೂ ಅಪಾಯಕಾರಿ.

ದೂಳು, ಹೊಗೆಯಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಬಹುತೇಕರಲ್ಲಿ ಇದು ಅಲರ್ಜಿಗೂ ಕಾರಣವಾಗಿದೆ. ಪರಿಸರ ಮಾಲಿನ್ಯದಿಂದ ಗಂಟಲು ಹಾಗೂ ಮೂಗಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂಲಸೌಲಭ್ಯ ಅಭಿವೃದ್ಧಿ ನನೆಗುದ್ದಿಗೆ ಬಿದ್ದರೆ ಆರೋಗ್ಯವೂ ಹದಗೆಡುತ್ತದೆ.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಯೇ ಮದ್ದು. ಸೊಳ್ಳೆ ಹುಟ್ಟಿಕೊಳ್ಳದಂತೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಿಶೇಷವಾಗಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಶುದ್ಧ ಕುಡಿಯುವ ನೀರು ಸೇವಿಸಬೇಕು. ಮಳೆಗಾಲದಲ್ಲಿ ಎಚ್ಚರದಿಂದ ಇದ್ದಷ್ಟು ಒಳ್ಳೆಯದು.

ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಪ್ರದೇಶಗಳಲ್ಲಿ ಇತ್ತೀಚೆಗೆ ಕ್ಯಾನ್ಸರ್‌ ವ್ಯಾಪಕವಾಗಿ ಕಾಣಿಸಿಕೊಂಡಿದೆ. 25ರಿಂದ 30ರ ಹರೆಯದ ಯುವಕರು ಈ ಕಾಯಿಲೆಗೆ ಬಲಿಯಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಗುಟ್ಕಾ ಸೇವನೆಯಿಂದಲೇ ಕ್ಯಾನ್ಸರ್‌ ಅಂಟುತ್ತಿರುವುದು ಕೂಡ ದೃಢಪಟ್ಟಿದೆ.

ವಾಹನ ಚಾಲಕರು, ದಿನಗೂಲಿ ಕಾರ್ಮಿಕರಲ್ಲಿ ಬಹುತೇಕ ಯುವಕರು ಗುಟ್ಕಾ ಸೇವಿಸುತ್ತಾರೆ. ಧೂಮಪಾನ ವ್ಯಸನಕ್ಕೂ ಅಂಟಿಕೊಂಡಿದ್ದಾರೆ. ತಂಬಾಕು ಉತ್ಪನ್ನಗಳು ಯುವ ಸಮೂಹದ ಆರೋಗ್ಯ ಹದಗೆಡಿಸುತ್ತಿವೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಊಟ ಸೇರುವುದಿಲ್ಲ. ಬಹುಬೇಗ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆಗೇನು ಕಡಿಮೆ ಇಲ್ಲ. ಬದಲಾದ ಜೀವನ ಕ್ರಮ ಈ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಜಂಕ್‌ಫುಡ್‌ ಸೇವನೆ ಹಾಗೂ ಹೆಚ್ಚು ಮಸಾಲೆ ಹೊಂದಿದ ಆಹಾರದಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

‘ಆ್ಯಸಿಡಿಟಿ’ ಸಮಸ್ಯೆ ಬಹುತೇಕರಿಗೆ ಇದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ದೆ ಇಲ್ಲದಿರುವುದರಿಂದ ಇದು ಕಾಣಿಸಿಕೊಳ್ಳುತ್ತದೆ. ವಿದ್ಯಾರ್ಥಿ ಜೀವನದಿಂದಲೇ ಒತ್ತಡ ಶುರುವಾಗುತ್ತಿದೆ. ಶಿಕ್ಷಣ ಕ್ರಮವೂ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಒತ್ತಡದಿಂದ ಕೂಡಿದ ಬದುಕು ಕಾಯಿಲೆಗೆ ಹೆಬ್ಬಾಗಿಲು ತೆರೆಯುತ್ತದೆ.

ದೇಹದ ಎತ್ತರಕ್ಕೆ ಅನುಗುಣವಾಗಿ ಹೊಂದಬೇಕಾಗದ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಎಡೆಮಾಡಿಕೊಡುತ್ತಿದೆ. ಅನೇಕರು ಚಿಕ್ಕವಯಸ್ಸಿಗೆ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿಯೂ ಗೊರಕೆ ಸಮಸ್ಯೆ ಕಾಣಿಸಿಕೊಂಡಿದೆ. ಚಿತ್ರದುರ್ಗದಲ್ಲಿ ಹೃದಯಸಂಬಂಧಿ ಕಾಯಿಲೆಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ ಇಲ್ಲ. ನಿತ್ಯ ವ್ಯಾಯಾಮ ಹಾಗೂ ಕ್ರಮಬದ್ಧ ಜೀವನ ರೂಢಿಸಿಕೊಳ್ಳುವ ಮೂಲಕ ಕಾಯಿಲೆಗಳನ್ನು ದೂರವಿಡಬೇಕು
ಡಾ.ಎಸ್‌.ಪಿ.ರವೀಂದ್ರ,ಕಿವಿ, ಮೂಗು ಹಾಗೂ ಗಂಟಲು ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT