ಸೋಮವಾರ, ನವೆಂಬರ್ 23, 2020
23 °C
ಅಭಿನಂದನಾ ಸಮಾರಂಭದಲ್ಲಿ ಶಿವಮೂರ್ತಿ ಮುರುಘಾ ಶರಣರು

ವಿಘ್ನ, ಸಮಸ್ಯೆ ಮನುಷ್ಯರನ್ನು ಗಟ್ಟಿಗೊಳಿಸುತ್ತವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ವಿಘ್ನ, ಸಮಸ್ಯೆಗಳು ಮನುಷ್ಯರನ್ನು ಗಟ್ಟಿಗೊಳಿಸುತ್ತವೆ. ಜತೆಗೆ ಸಂಕೀರ್ಣ ಪರಿಸ್ಥಿತಿ ಎದುರಿಸುವ ಸಂದರ್ಭದಲ್ಲಿ ನಮಗೆ ನಿಸರ್ಗವೂ ಸಹಕಾರ ನೀಡಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವ ಸಫಲತೆಗೆ ಶ್ರಮಿಸಿದ ಕಾರ್ಯಕರ್ತರಿಗಾಗಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಜೀವನಕ್ಕೆ ಅನುಭವದ ಲೇಪನಬೇಕು. ಕೆಲಸ ಮಾಡುವವರ ಆಂತರ್ಯದಲ್ಲಿ ಸದುದ್ದೇಶ ಇದ್ದಾಗ ಮಾತ್ರ ಕೈಗೊಳ್ಳಬಹುದಾದ ಯಾವುದೇ ಕಾರ್ಯದಲ್ಲಾದರೂ ಸಫಲತೆ ಕಾಣಲು ಸಾಧ್ಯ ಎಂದರು.

ಶರಣ ಸಂಸ್ಕೃತಿ ಉತ್ಸವ ಮಧ್ಯಕರ್ನಾಟಕ ಭಾಗದ ನಾಡಹಬ್ಬ ಇದ್ದಂತೆ. ಇದು ವಿಚಾರಗಳ ಹಬ್ಬ. ಪ್ರಬುದ್ಧರು ಒಮ್ಮೊಮ್ಮೆ ಅಪ್ರಬುದ್ಧರಾಗುತ್ತಾರೆ. ಕೆಲ ಸಂದರ್ಭಗಳಲ್ಲಿ ಅಜ್ಞಾನ ಆವರಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಚಿಂತನೆಯೊಂದಿಗೆ ಹೆಜ್ಜೆ ಇಡಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ‘ಉತ್ಸವದ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕು. ಇದಕ್ಕೆ ಮೂಲ ಕಾರಣಕರ್ತರು ಶರಣರು. ಕೊರೊನಾ ಸಂದರ್ಭದಲ್ಲಿ ಜನರಿಗೆ ಸಾಂತ್ವನ ಹೇಳಿದ ಸಂತರು ಎಂದರೆ ತಪ್ಪಾಗಲಾರದು. ಮುರುಘಾಮಠಕ್ಕೆ, ಇಲ್ಲಿನ ಶರಣರಿಗೆ ವಿಚಾರಗಳ ಕೊರತೆ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಫಾದರ್ ರಾಜು, ‘ಕೋವಿಡ್ ಕಾರಣಕ್ಕೆ ಉತ್ಸವವನ್ನು ಆನ್‌ಲೈನ್ ಮೂಲಕ ವಿದೇಶಗಳಿಗೂ ತಲುಪಿಸಿದ್ದು, ಈ ಬಾರಿಯ ವಿಶೇಷ. ನಿಜಕ್ಕೂ ಮುರುಘಾಮಠ ಕೈಗೊಂಡ ಹೊಸ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದು ತಿಳಿಸಿದರು.

ಬಸವ ಹರಳಯ್ಯ ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷ ಸಿ.ಮಹಲಿಂಗಪ್ಪ, ವೀರಶೈವ ಸಮಾಜದ ಅಧ್ಯಕ್ಷ ಎನ್.ಜಯಣ್ಣ, ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಪಟೇಲ್ ಶಿವಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.