ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಪಾತಾಳಕ್ಕೆ ಕುಸಿದ ಹೋಟೆಲ್‌ ಉದ್ಯಮ

ತಿಂಡಿ, ಊಟ ಪಾರ್ಸಲ್‌ಗೆ ಗ್ರಾಹಕರ ನಿರಾಸಕ್ತಿ
Last Updated 3 ಜೂನ್ 2020, 14:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಯಾವುದೇ ಹೋಟೆಲ್‌ಗಳಲ್ಲೂ ಮೊದಲಿನಂತೆ ವ್ಯಾಪಾರವಿಲ್ಲ. ಪಾರ್ಸಲ್ ಪಡೆಯುವವರ ಸಂಖ್ಯೆಯೂ ತುಂಬಾ ವಿರಳ. ವಹಿವಾಟು ಶೇ 75ರಿಂದ 80ರಷ್ಟು ಕುಸಿತ ಕಂಡಿದೆ. ಕೊರೊನಾದಿಂದಾಗಿ ಈ ಉದ್ಯಮವೀಗ ತೀವ್ರ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದೆ.

ಸದಾ ಜನರಿಂದ ಗಿಜುಗುಡುತ್ತಿದ್ದ ಹೋಟೆಲ್‌ಗಳ ಬಳಿ ಕಂಡು ಬರುತ್ತಿರುವುದು ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ. ಕೊರೊನಾಗೂ ಮುನ್ನ ಸಸ್ಯ ಹಾಗೂ ಮಾಂಸಾಹಾರದ ತರಹೇವಾರಿ ಖಾದ್ಯಗಳನ್ನು ಸವಿಯಲು ಕುಳಿತುಕೊಳ್ಳಲು ಜಾಗವಿಲ್ಲದೇ ಕಾಯುವ ಪರಿಸ್ಥಿತಿ ಇತ್ತು. ಜತೆಗೆ ವಿವಿಧ ಕೆಲಸ, ಕಾರ್ಯಗಳಿಗಾಗಿ ನಗರಕ್ಕೆ ಬರುತ್ತಿದ್ದ ಜನರು ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗಳನ್ನು ಅವಲಂಬಿಸಿದ್ದರು. ಆದರೀಗ ಬಹುತೇಕರು ಬರುತ್ತಿಲ್ಲ. ಇದರಿಂದಾಗಿ ಮಾಲೀಕರು ಕಂಗಾಲಾಗಿದ್ದಾರೆ.

ಹೋಟೆಲ್‌ಗಳಿಂದ ತಿಂಡಿ, ಊಟ ಪಾರ್ಸಲ್ ತೆಗೆದುಕೊಂಡು ಹೋಗಿ ಮನೆ ಅಥವಾ ಇತರೆ ಪ್ರದೇಶಗಳಲ್ಲಿ ಸವಿಯಲು ಅನೇಕರು ನಿರಾಸಕ್ತಿ ತೋರುತ್ತಿದ್ದಾರೆ. ವ್ಯವಸ್ಥಾಪಕರು, ಸಪ್ಲೈಯರ್, ಕ್ಲಿನರ್ ಸೇರಿ 20ರಿಂದ 30ಜನ ಕೆಲಸ ಮಾಡುವ ಜಾಗದಲ್ಲಿ ಕೇವಲ 8ರಿಂದ 10 ಜನ ಮಾತ್ರ ಇದ್ದಾರೆ. ವ್ಯಾಪಾರ ಕುಸಿದಿರುವ ಕಾರಣ ಈವರೆಗೂ ಹೋಟೆಲನ್ನೇ ನಂಬಿದ್ದ ಅನೇಕರಿಗೆ ಕೆಲಸ ಇಲ್ಲದಂತಾಗಿದೆ. ಬದುಕಿನ ಬಂಡಿ ಸಾಗಿಸಲು ತಮ್ಮ ಊರು ಸೇರಿ ಹೊಲ, ಇತರೆ ಕಾಯಕದಲ್ಲಿ ತೊಡಗಿದ್ದಾರೆ.

ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಚಿತ್ರದುರ್ಗದಲ್ಲಿ ಹೋಟೆಲ್‌ ಉದ್ಯಮ ಕೂಡ ಪ್ರವಾಸಿಗರನ್ನೂ ನಂಬಿದೆ. ಆದರೆ, ‘ಕೋವಿಡ್‌-19’ ಭೀತಿ ಕಾಣಿಸಿಕೊಂಡ ನಂತರ ಇಳಿಮುಖ ಕಂಡ ವಹಿವಾಟು ಈಗಲೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಹೊಸದಾಗಿ ಉದ್ಯಮ ಆರಂಭಿಸಿದ ಕೆಲವರು ಲಕ್ಷಗಟ್ಟಲೇ ನಷ್ಟ ಅನುಭವಿಸಿದ್ದಾರೆ. ಪಾರ್ಸಲ್‌ಗೆ ಅವಕಾಶ ಸಿಕ್ಕ ನಂತರವೂ ನಿರೀಕ್ಷೆಯಂತೆ ವ್ಯಾಪಾರ ಆಗುವುದಿಲ್ಲ ಎಂಬುದನ್ನು ಮನಗಂಡು ಹೋಟೆಲ್‌ ತೆರೆಯುವುದನ್ನೇ ಬಿಟ್ಟಿದ್ದಾರೆ. ಉದ್ಯಮ ಸಂಕಷ್ಟದಲ್ಲಿ ಇರುವ ಕಾರಣಕ್ಕೆ ಕೆಲವೆಡೆ ಬಾಡಿಗೆ ಕೇಳಲು ಮುಂದಾಗಿಲ್ಲ. ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿರಾರು ರೂಪಾಯಿ ಬಾಡಿಗೆ ಕಟ್ಟಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ.

‘ತರಕಾರಿ, ಸೊಪ್ಪು ಸೇರಿ ಇತರೆ ಆಹಾರ ಪದಾರ್ಥಗಳನ್ನು ಬಿಸಿ ನೀರಿನಲ್ಲಿ ಶುಚಿಗೊಳಿಸಿ ತಿನಿಸುಗಳನ್ನು ತಯಾರಿಸುತ್ತೇವೆ. ಮಾಸ್ಕ್, ಸ್ಯಾನಿಟೈಸರ್ ಬಳಸುತ್ತೇವೆ. ಆದರೂ ವ್ಯಾಪಾರ ಮೊದಲಿನಂತಿಲ್ಲ. ಅಂತರದೊಂದಿಗೆ ಗ್ರಾಹಕರು ಹೋಟೆಲ್‌ಗಳ ಒಳಗೆ ಕೂತು ಖಾದ್ಯ ಸವಿಯಲು ಸರ್ಕಾರ ಅವಕಾಶ ಮಾಡಿಕೊಟ್ಟರೆ ಎಲ್ಲ ಮಾರ್ಗಸೂಚಿ ತಪ್ಪದೇ ಪಾಲಿಸುತ್ತೇವೆ’ ಎನ್ನುತ್ತಾರೆ ರೆಡ್ಡಿ ಹೋಟೆಲ್‌ ಮಾಲೀಕ ಗಿರೀಶ್‌.

ಲಾಕ್‌ಡೌನ್ ಸಡಿಲಿಕೆ ನಂತರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ದಾರಿ ಮಧ್ಯೆ ಹೋಟೆಲ್‌, ಡಾಬಾಗಳಲ್ಲಿ ಕೆಲವರು ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಅಲ್ಲಿಯೂ ಶೇ 30ರಷ್ಟು ಮಾತ್ರ ವ್ಯಾಪಾರ ನಡೆಯುತ್ತಿದೆ. ಇದರಿಂದಮಾಲೀಕರಿಗೆ ಯಾವುದೇ ರೀತಿಯ ಲಾಭವಿಲ್ಲ. ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸದ ಮೇಲೆ ನಷ್ಟದಲ್ಲಿಯೂ ಕೆಲವರು ಉದ್ಯಮ ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT