ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಅಯೋಧ್ಯೆ ಶ್ರೀರಾಮಂದಿರನಿರ್ಮಾಣ ತಂತ್ರಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದ ಚಳ್ಳಕೆರೆಯ ತ್ಯಾಗರಾಜನಗರದ ಪ್ರೊ.ಟಿ.ಜಿ. ಸೀತಾರಾಮ್ ಅವರನ್ನು ಗುವಾಹಟಿ ಐಐಟಿ ಚೇರ್‌ಮನ್ ಆಗಿ ಕೇಂದ್ರ ಸರ್ಕಾರವು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಸೀತಾರಾಮ್ ಅವರು ತ್ಯಾಗರಾಜನಗರ ನಿವಾಸಿ ಟಿ.ಎಸ್.ಗುಂಡೂರಾವ್ ಮತ್ತು ವತ್ಸಲಾ ದಂಪತಿ ಪುತ್ರ. ಇವರು ತಾಲ್ಲೂಕಿನ ತಳಕು ಗ್ರಾಮದವರಾಗಿದ್ದು, ಹೆಸರಾಂತ ಕಾದಂಬರಿಕಾರ ತರಾಸು ಅವರ ಸಂಬಂಧಿಯಾಗಿದ್ದಾರೆ.
ಸೀತಾರಾಮ್ ಅವರು ತಳಕು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ತಾಯಿಯ ತವರು ಮಲೇಬೆನ್ನೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು. ದಾವಣಗೆರೆಯ ಯುಬಿಡಿಟಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು, ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದರು. ಕೆನಡಾದಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಮಾಡಿದ ಮೇಲೆ ಅಮೆರಿಕದ ವಿಜ್ಞಾನ ಸಂಸ್ಥೆಯಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದ ಬಳಿಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
‘ಹಲವು ಸಂಕಷ್ಟಗಳ ನಡುವೆ ಬೆಳೆದ ಸೀತಾರಾಮ್ ಬಾಲ್ಯದಿಂದಲೂ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ನಡೆಸಿದ್ದು, ಇಂದು ಅತ್ಯುನ್ನತ ಹುದ್ದೆಗೆ ಏರಿದ್ದಾನೆ. ನೇಮಕದ ಸುದ್ದಿ ಕೇಳಿ ಎಲ್ಲಿಲ್ಲದ ಸಂತೋಷವಾಯಿತು’ ಎಂದು ತಂದೆ ಟಿ.ಎಸ್.ಗುಂಡೂರಾವ್, ತಾಯಿ ವತ್ಸಲಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.