ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ

ಕಡ್ಲೆಗುದ್ದು ಗ್ರಾಮದಲ್ಲಿ ನೀರಿನ ಬವಣೆ, ಮಹಿಳೆಯರ ಆಕ್ರೋಶ
Last Updated 7 ಫೆಬ್ರುವರಿ 2020, 13:11 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ಬೇಸಿಗೆಗೂ ಮುನ್ನವೇ ತಲೆದೋರಿನ ನೀರಿನ ಸಮಸ್ಯೆಗೆ ಬೇಸತ್ತ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಟ್ರ್ಯಾಕ್ಟರಿಯಲ್ಲಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಪ್ರತಿಭಟನಾಕಾರರು ನೀರಿನ ಬವಣೆ ನೀಗಿಸುವಂತೆ ಆಗ್ರಹಿಸಿದರು. ಶಾಂತಿಸಾಗರದಿಂದ ಚಿತ್ರದುರ್ಗ ನಗರಕ್ಕೆ ಪೂರೈಕೆಯಾಗುವ ನೀರನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವಂತೆ ಒತ್ತಾಯಿಸಿದರು.

ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಲೇಗುದ್ದು ಗ್ರಾಮದಲ್ಲಿ 350ಕ್ಕೂ ಹೆಚ್ಚು ಮನೆಗಳಿವೆ. ಗೃಹಬಳಕೆ ಹಾಗೂ ಕುಡಿಯಲು ಕೊಳವೆ ಬಾವಿ ನೀರನ್ನು ಗ್ರಾಮ ಆಶ್ರಯಿಸಿದೆ. ಬೇಸಿಗೆ ಸಮೀಪಿಸುತ್ತಿದ್ದಂತೆ ಕೊಳವೆ ಬಾವಿ ಬತ್ತಿ ನೀರಿಗೆ ಹಾಹಾಕಾರ ಸೃಷ್ಟಿಯಾಗುತ್ತದೆ. ಕಳೆದ ವರ್ಷ ಗ್ರಾಮಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗಿತ್ತು.

ಹಿಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಕೆರೆಗಳಲ್ಲಿ ನೀರಿದೆ. ಜಾನುವಾರುಗಳ ಕುಡಿಯುವ ನೀರಿಗೆ ಕೆರೆ ಆಸರೆಯಾಗಿವೆ. ಬಟ್ಟೆ ತೊಳೆಯುವುದು ಸೇರಿ ಇತರ ಕೆಲಸಕ್ಕೆ ಕೆರೆ ನೀರು ಬಳಕೆ ಮಾಡಲಾಗುತ್ತಿದೆ. ಆದರೆ, ಕುಡಿಯಲು ಹಾಗೂ ಗೃಹ ಬಳಕೆಗೆ ಶುದ್ಧ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕೊರೆಸಿದ ಹಲವು ಕೊಳವೆ ಬಾವಿಗಳು ವಿಫಲವಾಗಿವೆ. 1,200 ಅಡಿವರೆಗೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಎರಡು ಕೊಳವೆ ಬಾವಿಗಳಲ್ಲಿ ಅರ್ಧ ಇಂಚಿನಷ್ಟು ಮಾತ್ರ ನೀರು ಬರುತ್ತಿದೆ. ಎಲ್ಲ ಮನೆಗಳಿಗೆ ಈ ನೀರು ಸಾಕಾಗುತ್ತಿಲ್ಲ. ರಾತ್ರಿ, ಹಗಲು ಕೆಲಸ ಬಿಟ್ಟು ನೀರು ತುಂಬಿಸಿಕೊಳ್ಳಬೇಕಿದೆ. ನೀರು ಸಂಗ್ರಹಿಸಿಕೊಳ್ಳಲು ದಿನದ ಬಹುಹೊತ್ತು ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

‘ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರಯೋಜವಾಗಿಲ್ಲ. ಕೊಳವೆ ಬಾವಿ ಕೊರೆಸಿದರೆ ಗ್ರಾಮದ ನೀರಿನ ಬವಣೆಗೆ ಪರಿಹಾರ ಸಿಗುವುದಿಲ್ಲ. ಅಂತರ್ಜಲ ಬತ್ತಿರುವ ಈ ಕಾಲದಲ್ಲಿ ಕೊಳವೆ ಬಾವಿಯ ಬದಲು ಶಾಶ್ವತ ನೀರಾವರಿ ಯೋಜನೆ ಮಾತ್ರ ಪರ್ಯಾಯ ಆಗಬಲ್ಲದು’ ಎಂದು ಗ್ರಾಮದ ಮುಖಂಡ ನಾಗರಾಜ ಹೇಳಿದರು.

ಶಾಂತಿಸಾಗರದಿಂದ ಚಿತ್ರದುರ್ಗ ನಗರಕ್ಕೆ ನೀರು ಪೂರೈಸುವ ಕೊಳವೆ ಮಾರ್ಗ ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿ ಹಾದು ಹೋಗಿದೆ. ಭೀಮಸಮುದ್ರ, ಹಿರೇಗುಂಟನೂರು, ಬೊಮ್ಮೆನಹಳ್ಳಿ ಸೇರಿ ಹಲವು ಗ್ರಾಮಗಳಿಗೆ ಶಾಂತಿಸಾಗರದ ನೀರು ಸರಬರಾಜು ಮಾಡಲಾಗುತ್ತಿದೆ. ಕಡ್ಲೆಗುದ್ದು ಗ್ರಾಮಕ್ಕೂ ಶಾಂತಿಸಾಗರದ ನೀರು ಪೂರೈಕೆ ಮಾಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಲ್ಲದು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಣ್ಣಪ್ಪ, ಹನುಮಂತಪ್ಪ, ಎನ್‌.ನಳಿನಾ, ಗೌರಮ್ಮ, ಭಾಗ್ಯಮ್ಮ, ಭರತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT