ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ

Last Updated 19 ನವೆಂಬರ್ 2020, 14:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಕುಟುಂಬ ಹಾಗೂ ಉದ್ಯೋಗದ ಸ್ಥಳದಲ್ಲಿ ಪುರುಷರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಪ್ರತ್ಯೇಕ ಕಾನೂನು ರೂಪಿಸುವಂತೆ ಒತ್ತಾಯಿಸಿ ಕರ್ನಾಟಕ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ದೌರ್ಜ್ಯದ ವಿರುದ್ಧ ಕಿಡಿಕಾರಿದರು. ಅಂತರರಾಷ್ಟ್ರೀಯ ಪುರುಷರ ದಿನದಂದು ನಡೆದ ಪ್ರತಿಭಟನೆ ಗಮನ ಸೆಳೆಯಿತು.

ಸಂಘದ ಅಧ್ಯಕ್ಷರೂ ಆಗಿರುವ ವಕೀಲ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ, ‘ಮಹಿಳೆಯರ ರಕ್ಷಣೆಗೆ ದೇಶದಲ್ಲಿ ಹಲವು ಕಾನೂನುಗಳಿವೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಮಹಿಳೆಯರ ರೀತಿಯಲ್ಲಿ ಪುರುಷರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪುರುಷರಿಗೆ ರಕ್ಷಣೆ ನೀಡುವ ಕಾನೂನು ಈವರೆಗೆ ರೂಪುಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಅತ್ಯಾಚಾರ, ಪೊಕ್ಸೊ ಸೇರಿ ಹಲವು ಕಾನೂನು ದುರ್ಬಳಕೆಯಾಗುತ್ತಿವೆ. ಸರ್ಕಾರಿ ಅಧಿಕಾರಿ, ರಾಜಕಾರಣಿ ಹಾಗೂ ಸಮಾಜದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಇಂತಹ ದೌರ್ಜನ್ಯಗಳು ನಡೆಯುತ್ತಿವೆ. ಪುರುಷರ ಜೀವನ ಇದರಿಂದ ಹಾಳಾಗುತ್ತಿದೆ. ಪೊಲೀಸರು ಕೂಡ ಪುರುಷರ ವಿರುದ್ದ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ವೇದಿಕೆ ಕಾರ್ಯದರ್ಶಿ ಪ್ರತಾಪ್‌ ಜೋಗಿ ಮಾತನಾಡಿ, ‘ಮಕ್ಕಳನ್ನು ಮುಂದಿಟ್ಟುಕೊಂಡು ಮಹಿಳೆಯರೇ ಪುರುಷರಿಗೆ ಕಿರುಕುಳ ನೀಡುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಪ್ರೀತಿ, ಪ್ರೇಮದ ನೆಪದಲ್ಲಿ ಪುರುಷರ ಮನವೊಲಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಕಾರ್ಪೊರೇಟ್‌ ಕಂಪನಿ ಹಾಗೂ ಸರ್ಕಾರಿ ವ್ಯವಸ್ಥೆಯಲ್ಲಿ ತಳಹಂತದ ಮಹಿಳೆಯರೇ ಹಿರಿಯ ಅಧಿಕಾರಿಗಳಿಗೆ ಕಿರುಕುಳ ನೀಡಿದ ನಿದರ್ಶನಗಳಿವೆ’ ಎಂದು ಹೇಳಿದರು.

ವಕೀಲರಾದ ಅಶೋಕ್‍ ಬೆಳಗಟ್ಟ, ವೀಣಾ ಗೌರಣ್ಣ, ಮಮತಾ, ಚಂದ್ರಕಲಾ, ನಗರಸಭೆ ಮಾಜಿ ಸದಸ್ಯ ನಸ್ರುಲ್ಲಾ, ತಿಪ್ಪೇಸ್ವಾಮಿ, ಓಂಕಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT