ಶುಕ್ರವಾರ, ಏಪ್ರಿಲ್ 23, 2021
30 °C
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಪ್ರತಿಭಟನೆ

ಜಿಎಸ್‌ಟಿ ನಿಯಮ ಬದಲಾವಣೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿಯಮಗಳನ್ನು ಬದಲಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತರ ಕಚೇರಿ ಎದುರು ಜಮಾಯಿಸಿದ ತೆರಿಗೆ ಸಲಹೆಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತೆರಿಗೆ ನೀತಿ ಬದಲಾವಣೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದರು.

ಜಿಎಸ್‌ಟಿ ಜಾರಿಗೆ ಬಂದಾಗ ತೆರಿಗೆ ಸಲಹೆಗಾರರು ಹರ್ಷ ವ್ಯಕ್ತಪಡಿಸಿದ್ದೆವು. ಏಕರೂಪದ ತೆರಿಗೆ ನೀತಿಯಿಂದ ದೇಶಕ್ಕೆ ಒಳಿತಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದೆವು. ಆದರೆ, ತೆರಿಗೆ ನೀತಿಯನ್ನು ಪದೇ ಪದೇ ಬದಲಾಯಿಸುತ್ತಿರುವ ಕೇಂದ್ರ ಸರ್ಕಾರ ಜನರ ನಂಬಿಕೆಯನ್ನು ಹುಸಿಗೊಳಿಸಿದೆ. ತೆರಿಗೆ ಪಾವತಿದಾರರಿಗೆ ಹಾಗೂ ಸಲಹೆಗಾರರಿಗೆ ಸಮಸ್ಯೆ ಸೃಷ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಲ್ಕು ವರ್ಷದಲ್ಲಿ ತೆರಿಗೆಯ ನಿಯಮಗಳನ್ನು ಸಾವಿರಕ್ಕೂ ಹೆಚ್ಚು ಬಾರಿ ಬದಲಿಸಲಾಗಿದೆ. ತೆರಿಗೆ ಸಲಹೆಗಾರರಿಗೂ ಅರ್ಥವಾಗದ ರೀತಿಯಲ್ಲಿ ಪರಿಷ್ಕರಿಸಲಾಗಿದೆ. ದಿನಕ್ಕೊಂದು ನೀತಿ ಹೊರಡಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ. ತೆರಿಗೆ ಸಲಹೆಗಾರರ ನೋಂದಣಿಯನ್ನು ರದ್ದುಪಡಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಿರುವುದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

ಜಿಎಸ್‌ಟಿ ಗೊಂದಲದಿಂದ ತೆರಿಗೆದಾರರ ಆದಾಯ ಕಡಿಮೆಯಾಗಿ ವ್ಯಾಜ್ಯಗಳು ಹೆಚ್ಚಾಗುತ್ತಿವೆ. ಪಾವತಿಸಿದ ತೆರಿಗೆ ಬಳಸಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ತಪ್ಪು ಸರಿಪಡಿಸುವ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ತಾಂತ್ರಿಕ ಸಮಸ್ಯೆಗೂ ಸಲಹೆಗಾರರು ಹಾಗೂ ತೆರಿಗೆದಾರರನ್ನು ಗುರಿಪಡಿಸಲಾಗುತ್ತಿದೆ. ಪ್ರಜಾತಾಂತ್ರಿಕವಲ್ಲದ ದಂಡದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಕಿಡಿಕಾರಿದರು.

ಕೋವಿಡ್‌ ಸಂದರ್ಭದಲ್ಲಿ ವಿನಾಯಿತಿ ನೀಡುವ ಬದಲಿಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ತೆರಿಗೆ ಸಂಗ್ರಹದಲ್ಲಿ ಪ್ರಮುಖ ಪಾತ್ರ ವಹಿಸುವ ಸಲಹೆಗಾರರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ತೆರಿಗೆ ಪಾವತಿ ವರದಿ ಸಲ್ಲಿಕೆಗೆ ಅವೈಜ್ಞಾನಿಕ ಗಡುವು ನೀಡಲಾಗುತ್ತಿದೆ. ಜಿಎಸ್‌ಟಿ ಬಗೆಗೆ ನ್ಯಾಯಾಲಯ ನೀಡಿದ ಸಲಹೆಗಳನ್ನು ಪರಿಗಣಿಸದೇ ನಿಯಮ ಬದಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜೆ.ವಿ.ಮಂಜುನಾಥ್‌, ಕಾರ್ಯದರ್ಶಿ ಡಿ.ಎಸ್‌.ಗಿರೀಶ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು