ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ನೀತಿ ಖಂಡಿಸಿ ಪ್ರತಿಭಟನೆ

Last Updated 5 ಸೆಪ್ಟೆಂಬರ್ 2020, 14:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಸರ್ಕಾರ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿರುವುದು ಖಂಡನೀಯ ಎಂದು ಸಿಐಟಿಯು ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನು ತಿದ್ದುಪಡಿ ಕಾಯ್ದೆ ಹಾಗೂ ಅಗತ್ಯ ಸೇವಾ ಸುಗ್ರೀವಾಜ್ಞೆ ಕೂಡಲೇ ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಖಾಸಗೀಕರಣಗೊಳಿಸುವ ಪ್ರಕ್ರಿಯೆ ನಿಲ್ಲಿಸಬೇಕು. ಎಲ್ಲವೂ ಸರ್ಕಾರದ ವ್ಯಾಪ್ತಿಯೊಳಗೆ ಇರಬೇಕು. ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್-19 ತಪಾಸಣೆಗೆ ಒಳಪಡಿಸಿ, ಉಚಿತ ಔಷಧೋಪಚಾರ ನೀಡಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು ಕನಿಷ್ಟ ₹ 600ಕ್ಕೆ ಹೆಚ್ಚಿಸುವುದರ ಜತೆಗೆ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಕೋವಿಡ್‌ನಿಂದಾಗಿ 7 ತಿಂಗಳಿನಿಂದಲೂ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ನಲುಗಿ ಹೋಗಿದ್ದು, ಜೀವನ ನಡೆಸಲು ಪರಿತಪಿಸುತ್ತಿದ್ದಾರೆ. ಆದ್ದರಿಂದ ಮುಂದಿನ 6 ತಿಂಗಳವರೆಗೆ ಪ್ರತಿಯೊಬ್ಬರಿಗೂ ಮಾಸಿಕ ₹ 7.5 ಸಾವಿರವನ್ನು ಕೋವಿಡ್ ಪರಿಹಾರವಾಗಿ ನೀಡಬೇಕು. ಕುಟುಂಬದ ಪ್ರತಿ ಸದಸ್ಯನಿಗೂ ಮಾಸಿಕ 10 ಕೆ.ಜಿ ಉಚಿತ ಅಕ್ಕಿ ವಿತರಿಸಬೇಕು ಎಂದು ಕೋರಿದರು.

ಸಿಐಟಿಯು ಮುಖಂಡರಾದ ಸಿ.ಕೆ.ಗೌಸ್‌ಪೀರ್, ಬಿ.ಸಿ.ನಾಗರಾಜಚಾರಿ, ಷೇಖ್‌ಕಲೀಂವುಲ್ಲಾ, ಭಾಸ್ಕರಚಾರಿ, ಎಂ.ಡಿ.ಜಿಕ್ರಿಯಾವುಲ್ಲಾ, ಎಂ.ಡಿ.ಸಮೀವುಲ್ಲಾ, ಹನುಮಂತ, ಅಬ್ದುಲ್ಲಾ, ಸಣ್ಣೀರಪ್ಪ, ಮಲ್ಲಿಕಾರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT