ಸಿದ್ಧಗಂಗಾ ಶ್ರೀಗೆ ಅಗೌರವ ಆರೋಪ: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹ

7
ಬಿಜೆಪಿ ಪ್ರತಿಭಟನೆ

ಸಿದ್ಧಗಂಗಾ ಶ್ರೀಗೆ ಅಗೌರವ ಆರೋಪ: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹ

Published:
Updated:
Prajavani

ಚಿತ್ರದುರ್ಗ: ಶೋಕಾಚರಣೆಯ ನಡುವೆಯೂ ಸರ್ಕಾರಿ ಕಾರ್ಯಕ್ರಮ ನಡೆಸಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಅಗೌರವ ತೋರಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಅವರು ಸಚಿವ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಿದ್ಧಗಂಗಾ ಶ್ರೀ ಲಿಂಗೈಕ್ಯರಾದ ನೋವಿನಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಲಾಗಿತ್ತು. ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಸ್ವಾಮೀಜಿಯನ್ನು ಕಳೆದುಕೊಂಡ ನೋವಿನಲ್ಲಿ ಇಡೀ ರಾಜ್ಯವೇ ದುಃಖತಪ್ತವಾಗಿತ್ತು. ಇಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಡೆಸುವ ಮೂಲಕ ಸಚಿವರು ಭಕ್ತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ದೇಶ ವಿರೋಧಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕನ್ಹಯ್ಯ ಕುಮಾರ್‌ ಅವರನ್ನು ‘ಸಂವಿಧಾನ ಸಂಭಾಷಣೆ’ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದನ್ನೂ ವಿರೋಧಿಸುತ್ತದೆ. ಶೋಕಾಚರಣೆಯ ನಡುವೆ ಕಾರ್ಯಕ್ರಮ ನಡೆಸಿದ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳನ್ನು ಉಗ್ರರಿಗೆ ಹೋಲಿಕೆ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುವ ಸರ್ಕಾರದ ಆದೇಶವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದ ಸಚಿವರೇ ಪ್ರಜಾಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸ್ವಾಮೀಜಿ ಅಗಲಿಕೆಗೂ ತಮಗೂ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್‌, ಖಜಾಂಚಿ ನರೇಂದ್ರ, ಮುಖಂಡರಾದ ಶಿವಣ್ಣಾಚಾರ್‌, ನಾಗರಾಜ್‌ ಬೇದ್ರೆ, ದಗ್ಗೆ ಶಿವಪ್ರಕಾಶ್‌, ನವೀನ್‌ ಚಾಲುಕ್ಯ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !