ಸೋಮವಾರ, ಆಗಸ್ಟ್ 8, 2022
21 °C
ಕ್ಷೌರದ ಅಂಗಡಿಗೆ ಬಹುರಾಷ್ಟ್ರೀಯ ಕಂಪೆನಿಗೆ ಅವಕಾಶಕ್ಕೆ ಕಿಡಿ

ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಬಹುರಾಷ್ಟ್ರೀಯ ಕಂಪೆನಿಗಳ ಸೆಲೂನ್ (ಕ್ಷೌರಿಕ) ಅಂಗಡಿಗಳಿಗೆ ನೀಡಿದ ಅನುಮತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಸವಿತಾ ಸಮಾಜ ಹಾಗೂ ಜಿಲ್ಲಾ ಮುಸ್ಲಿಂ ಹಾಸ್ಟೆಲ್‌ಗೆ ಪಾರದರ್ಶಕ ಚುನಾವಣೆ ನಡೆಸುವಂತೆ ಆಗ್ರಹಿಸಿ ಹಾಸ್ಟಲ್‌ ಸದಸ್ಯರು ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪ ಜಮಾಯಿಸಿದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಗೋಹತ್ಯೆ ನಿಷೇಧ ಕಾಯ್ದೆ ಜನರ ಆಹಾರದ ಹಕ್ಕು ಕಸಿದುಕೊಳ್ಳುವ ಹುನ್ನಾರವಾಗಿದೆ. ದೇವರು ಹಾಗೂ ಧರ್ಮದ ಹೆಸರಿನಲ್ಲಿ ಬಿಜೆಪಿ, ಹಿಂದೂಗಳನ್ನು ವಿಭಜಿಸುವ ಹುನ್ನಾರ ಮಾಡುತ್ತಿದೆ. ಮುಗ್ಧ ಜನರ ದಿಕ್ಕುತಪ್ಪಿಸಿ ರಾಜಕೀಯ ಮಾಡುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ನಿತ್ಯ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ನಿರುದ್ಯೋಗದ ಸಮಸ್ಯೆ ದ್ವಿಗುಣಗೊಂಡಿದೆ. ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಎನ್.ಪ್ರಕಾಶ್, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ವೆಂಕಟೇಶ್ ಐಹೊಳೆ, ಜಿಲ್ಲಾ ಸಂಯೋಜಕ ಬಿ.ಮಹಂತೇಶ್ ಕೂನಬೇವು, ಕೆ.ಎನ್.ದೊಡ್ಡೆಟ್ಟೆಪ್ಪ, ಉಪಾಧ್ಯಕ್ಷ ಕೆ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್, ಟಿ.ರುದ್ರಮುನಿ, ಶಂಕರಪ್ಪ ಹೆಗ್ಗೆರೆ ಇದ್ದರು.

‘ಬದುಕು ಕಸಿಯುವ ಹುನ್ನಾರ’

ಬಹುರಾಷ್ಟ್ರೀಯ ಕಂಪೆನಿಗಳಿಗೆ ಸೆಲೂನ್‌ ತೆರೆಯಲು ಅವಕಾಶ ಕಲ್ಪಿಸಿ ಸವಿತಾ ಸಮಾಜದ ಜನರ ಬದುಕು ಕಸಿಯುವ ಹುನ್ನಾರ ನಡೆದಿದೆ ಎಂದು ಪ್ರತಿಭಟನಕಾರರು ಕಿರಿಕಾರಿದರು.

ಕ್ಷೌರದ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ ಸವಿತಾ ಸಮಾಜದ ಮುಖಂಡರು ಸರ್ಕಾರದ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದರು.

ಕ್ಷೌರಿಕ ವೃತ್ತಿ ಸವಿತಾ ಸಮಾಜದ ಕುಲಕಸುಬು. ಹಲವು ಸಮಸ್ಯೆಗಳ ನಡುವೆಯೂ ಕ್ಷೌರ ವೃತ್ತಿ ಸಮಾಜದ ಕೈಹಿಡಿದಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಅವಕಾಶ ಕಲ್ಪಿಸಿದರೆ ಇಡೀ ಸಮುದಾಯ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಸಮುದಾಯದ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಟಿ.ತಿಪ್ಪೇಸ್ವಾಮಿ ಸಂಪಿಗೆ, ಜಿ.ಜಿ.ಸಾಯಿನಾಥ್, ಗ.ನ.ಲಿಂಗರಾಜು, ಎನ್.ಶ್ರೀನಿವಾಸ್ ಇದ್ದರು.

ಪಾರದರ್ಶಕ ಚುನಾವಣೆಗೆ ಕೋರಿಕೆ

ಜಿಲ್ಲಾ ಮುಸ್ಲಿಂ ಹಾಸ್ಟೆಲ್‌ಗೆ ನೇಮಿಸಿರುವ ಅಡ್ಯಾಕ್‌ ಕಮಿಟಿ ನಿಯಮ ಬಾಹಿರವಾಗಿದೆ ಎಂದು ಆರೋಪಿಸಿ ಜಿಲ್ಲಾ ಮುಸ್ಲಿಂ ಹಾಸ್ಟೆಲ್‌ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ವಕ್ಫ್‌ ಕಮಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಮುಸ್ಲಿಂ ಹಾಸ್ಟೆಲ್‌ಗೆ ಚುನಾವಣೆ ನಡೆಸಬೇಕು. ಸಮಿತಿಗೆ ನಡೆಯುವ ಆಯ್ಕೆ ಪಾರದರ್ಶಕವಾಗಿ ಇರಬೇಕು. ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು