ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿನಿಯರ ಒಲವು

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿ
Published 7 ಜೂನ್ 2024, 5:28 IST
Last Updated 7 ಜೂನ್ 2024, 5:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪ್ರವೇಶಾತಿ ಪ್ರಕ್ರಿಯೆ ಭರದಿಂದ ಸಾಗಿದೆ. ಈ ಬಾರಿ ವಿಜ್ಞಾನ ವಿಭಾಗಕ್ಕೆ ಬೇಡಿಕೆ ಹೆಚ್ಚಿರುವುದು ವಿಶೇಷ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ 72.85 ಫಲಿತಾಂಶ ಪಡೆದಿದೆ. ಪರೀಕ್ಷೆ ಎದುರಿಸಿದ್ದ 11,168 ಬಾಲಕಿಯರಲ್ಲಿ 9,020 (ಶೇ 80) ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಮೇ 25ರಿಂದ ಪ್ರವೇಶಾತಿ ಆರಂಭವಾಗಿದ್ದು ಜೂನ್‌ 14ರವರೆಗೆ ಮೊದಲ ಹಂತದಲ್ಲಿ ದಾಖಲಾತಿ ನಡೆಯಲಿದೆ.

ಪ್ರವೇಶಾತಿ ಆರಂಭವಾಗಿ 13 ದಿನಕ್ಕೆ ಬಹುತೇಕ ಕಾಲೇಜುಗಳಲ್ಲಿ ಶೇ 60ರಷ್ಟು ದಾಖಲಾತಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ವಿಜ್ಞಾನ ವಿಭಾಗದ ಪ್ರವೇಶಾತಿಗೆ ಆಸಕ್ತಿ ತೋರಿದ್ದಾರೆ.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಕಳೆದ ವರ್ಷಕ್ಕಿಂತ ಈ ಬಾರಿ ಬೇಡಿಕೆ ಹೆಚ್ಚಾಗಿದೆ. ದ್ವಿತೀಯ ಪಿಯುಸಿಯಲ್ಲಿ ಕಾಲೇಜು ಶೇ 72ರಷ್ಟು ಫಲಿತಾಂಶ ದಾಖಲಿಸಿದೆ. 40 ಅತ್ಯುನ್ನತ ಶ್ರೇಣಿ, 194 ಪ್ರಥಮ ಹಾಗೂ 215 ದ್ವಿತೀಯ ಹಾಗೂ 155 ತೃತೀಯ ಶ್ರೇಣಿಯಲ್ಲಿ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಈ ಬಾರಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಷಯಕ್ಕೆ ಜೂನ್‌ 6 ರವರೆಗೆ 905 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದಾರೆ.

ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ದಾಖಲಾತಿ ಕೊಂಚ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೂ 335 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷ 700 ವಿದ್ಯಾರ್ಥಿಗಳಿದ್ದರು. ಈ ಎರಡೂ ಕಾಲೇಜುಗಳಿಂದ 1,800 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಾಧ್ಯತೆಯಿದೆ ಎನ್ನುತ್ತಾರೆ ಕಾಲೇಜು ಸಿಬ್ಬಂದಿ.

ವಿದ್ಯಾರ್ಥಿಗಳ ಭವಿಷ್ಯ ಸರಿಯಾದ ದಾರಿಯಲ್ಲಿ ಸಾಗಬೇಕು ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಿದವರಿಗೆ ಮೊದಲ ಹಂತದಲ್ಲಿ ಕಾಲೇಜಿನ ಪ್ರವೇಶಾತಿ ತಂಡ ಕೌನ್ಸೆಲಿಂಗ್‌ ನಡೆಸಿ ದಾಖಲಾತಿ ನೀಡುತ್ತಿರುವುದು ವಿಶೇಷ. ವಿದ್ಯಾರ್ಥಿಗಳು ಕಲಾ ಮತ್ತು ವಾಣಿಜ್ಯ ವಿಷಯಕ್ಕೆ ಹೆಚ್ಚು ಗಮನಹರಿಸಿದರೆ ವಿದ್ಯಾರ್ಥಿನಿಯರು ಮಾತ್ರ ವಿಜ್ಞಾನ ವಿಭಾಗಕ್ಕೆ ಮುಗಿಬಿದ್ದಿದ್ದಾರೆ.

ಕಾಲೇಜು ಪ್ರವೇಶಾತಿ ತಂಡ ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಅಂಕ ಪರಿಶೀಲಿಸಿ ಪಾಲಕರ ಸಮ್ಮುಖದಲ್ಲಿ ಕೆಲ ಹೊತ್ತು ಚರ್ಚೆ ನಡೆಸುತ್ತಿದೆ. ಬಳಿಕ ವಿದ್ಯಾರ್ಥಿನಿಯರ ಆಸಕ್ತಿ ಗಮನಿಸಿ ಪ್ರವೇಶ ನೀಡುತ್ತಿದೆ.

ಪಿಯುಗೆ ಪ್ರವೇಶ ಪರೀಕ್ಷೆ

ವಿಜ್ಞಾನ ವಿಭಾಗಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ‘ಎಸ್‌ಎಸ್‌ಎಲ್‌ಸಿಯಲ್ಲಿ ಶೇ 60ಕ್ಕೂ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ ಬಳಿಕ ಪ್ರವೇಶ ಪರೀಕ್ಷೆ ಎದುರಿಸಬೇಕು. ಈವರೆಗೂ 50ಕ್ಕೂ ವಿದ್ಯಾರ್ಥಿನಿಯರು ಪರೀಕ್ಷೆ ಎದುರಿಸಿದ್ದು ಕೆಲವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಅವರ ಸಾರ್ಮಥ್ಯಕ್ಕೆ ಅನುಗುಣವಾಗಿ ಕಲಾ ವಾಣಿಜ್ಯ ಕಂಪ್ಯೂಟರ್‌ ಸೈನ್ಸ್‌ಗೆ ಪ್ರವೇಶ ನೀಡಲಾಗುತ್ತಿದೆ’ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರಾದ ಎಚ್‌.ನಾಗರಾಜ್‌.

ವಿಜ್ಞಾನ ಕನ್ನಡ ವಿಭಾಗಕ್ಕೆ 10 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರ ಪ್ರವೇಶ ಶುಲ್ಕವನ್ನು ಕಾಲೇಜಿನ ಬೋಧಕ ವರ್ಗ ಪಾವತಿಸುತ್ತಿದೆ.
-ಎಚ್‌.ನಾಗರಾಜ್‌, ಪ್ರಾಂಶುಪಾಲರು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು
ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಶೇ 20ರಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದು ಬಳಿಕ ತರಗತಿಗೆ ಹಾಜರಾಗದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ.
-ಎಚ್‌.ಬಿ.ನರಸಿಂಹಮೂರ್ತಿ, ಪ್ರಾಂಶುಪಾಲರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT