ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ರಾಗಿ ಖರೀದಿಗೆ ಸಿದ್ಧತೆ ಮಾಡಿ: ಅಧಿಕಾರಿಗಳಿಗಗೆ ಡಿ.ಸಿ ಸೂಚನೆ

75000 ಟನ್‌ ರಾಗಿ ಉತ್ಪಾದನೆ ನಿರೀಕ್ಷೆ
Last Updated 3 ಡಿಸೆಂಬರ್ 2022, 6:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿ ರಾಗಿ ಖರೀದಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ. ಅಧಿಕಾರಿಗಳಿಗೆ ಸೂಚಿಸಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿ ರಾಗಿ ಖರೀದಿಸುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಜಿಲ್ಲಾ ಮಟ್ಟದ ಕಾರ್ಯಪಡೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ರಾಗಿ ಉತ್ತಮವಾಗಿ ಬೆಳೆದಿದೆ. 39,893 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಕಟಾವು ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭವಾಗಿದೆ. ಅಂದಾಜು 75000 ಟನ್ ರಾಗಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ರೈತರು ನೋಂದಣಿ ಹಾಗೂ ಖರೀದಿ ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ಆರಂಭಿಸಿ’ ಎಂದರು.

3 ಲಕ್ಷ ಕ್ವಿಂಟಲ್‌ ರಾಗಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ‘ಜಿಲ್ಲೆಯಲ್ಲಿ ರಾಗಿ ಬೆಳೆ ಕಟಾವು ಪ್ರಕ್ರಿಯೆ ಆರಂಭವಾಗಿದೆ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಬೇಡಿಕೆ ಬರುತ್ತಿದೆ. ರಾಗಿಗೆ ಪ್ರತಿ ಕ್ವಿಂಟಲ್‍ಗೆ ₹ 3,578 ಬೆಂಬಲ ಬೆಲೆಯನ್ನು ಪ್ರಸ್ತಾಪಿಸಲಾಗಿದೆ. ಕಳೆದ ವರ್ಷ ಬೆಂಬಲ ಬೆಲೆಯಲ್ಲಿ 1.6 ಲಕ್ಷ ಕ್ವಿಂಟಲ್‌ ರಾಗಿ ಖರೀದಿಸಲಾಗಿತ್ತು. ಈ ಬಾರಿ ಅಂದಾಜು 3 ಲಕ್ಷ ಕ್ವಿಂಟಲ್‌ ಖರೀದಿಯಾಗುವ ಸಾಧ್ಯತೆ ಇದೆ. ಮಾರ್ಗಸೂಚಿ ಬಂದ ಕೂಡಲೇ ರೈತರ ನೋಂದಣಿ ಆರಂಭಿಸಲಾಗುವುದು’ ಎಂದು
ಹೇಳಿದರು.

‘ಕಳೆದ ಬಾರಿ ಜಿಲ್ಲೆಯಲ್ಲಿ ಹೊಸದುರ್ಗ, ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಆವಕವಾಗುವ ನಿರೀಕ್ಷೆ ಇದ್ದು, ಹೊಸದುರ್ಗ ತಾಲ್ಲೂಕಿನಲ್ಲಿ 23,770 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 7,450 ಹೆಕ್ಟೇರ್‌, ಚಿತ್ರದುರ್ಗ 2,155 ಹೆಕ್ಟೇರ್‌, ಹೊಳಲ್ಕೆರೆ 6,173 ಹೆಕ್ಟೇರ್‌, ಚಳ್ಳಕೆರೆ 60ಹೆಕ್ಟೇರ್‌ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 285 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ. ಹಲವು ಕಡೆ ಖರೀದಿ ಕೇಂದ್ರಕ್ಕೆ ಬೇಡಿಕೆ ಬರುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.

ಕರ್ನಾಟಕ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕ ಶಂಕರ್ ಪತ್ತಾರ್, ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ, ಹೊಸದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನ್, ಡಿವೈಎಸ್‍ಪಿ ಎನ್‌. ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT