ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಯೋಗದತ್ತ ಆಸಕ್ತಿ ತೋರಿದ ರಾಹುಲ್: ಇಷ್ಟಲಿಂಗ ಪೂಜೆ ವಿಧಿವಿಧಾನಕ್ಕೆ ಸಹಾಯ ಯಾಚನೆ

ಮಠಾಧೀಶರೊಂದಿಗೆ ಸಂವಾದ, ಬಸವ ಧರ್ಮದ ಬಗ್ಗೆ ಚರ್ಚೆ
Last Updated 4 ಆಗಸ್ಟ್ 2022, 3:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಠಾಧೀಶರೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರು ಸಹಜ ಶಿವಯೋಗ ಕಲಿಯುವ ಬಗ್ಗೆ ಆಸಕ್ತಿ ತೋರಿದರು. ಇಷ್ಟಲಿಂಗಕ್ಕೆ ಮಾರುಹೋಗಿ ಪೂಜೆಯ ವಿಧಿವಿಧಾನ ಅರಿಯಲು ಸಹಾಯ ಯಾಚಿಸಿದರು.

ಇಲ್ಲಿಯ ಮುರುಘಾ ಮಠಕ್ಕೆ ಬುಧವಾರ ಭೇಟಿ ನೀಡಿ ಮಠಾಧೀಶರೊಂದಿಗೆ ಸಂವಾದ ನಡೆಸಿದರು. ಇಷ್ಟಲಿಂಗ ದೀಕ್ಷೆ, ಪೂಜೆ, ಬಸವತತ್ವ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿ ಚರ್ಚಿಸಿದರು. ಸಹಜ ಶಿವಯೋಗದ ಪ್ರಾತ್ಯಕ್ಷಿಕೆ ಕಂಡು ಪುನೀತರಾದರು.

ರಾಹುಲ್‌ ಗಾಂಧಿ ಅವರು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದರು. ನಿಗದಿಯಂತೆ ಬೆಳಿಗ್ಗೆ 11.05ಕ್ಕೆ ಮಠ ಪ್ರವೇಶಿಸಿದ ಪಕ್ಷದ ನಾಯಕರನ್ನು ಕಾಂಗ್ರೆಸ್‌ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಮುರುಗಿ ಶಾಂತವೀರ ಸ್ವಾಮೀಜಿ ಅವರ ಕರ್ತೃ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ದರ್ಬಾರ್‌ ಸಭಾಂಗಣಕ್ಕೆ ತೆರಳಿ ಡಾ.ಶಿವಮೂರ್ತಿ ಮುರುಘಾ ಶರಣದ ಆಶೀರ್ವಾದ ಪಡೆದರು.

ಮುರುಘಾ ಮಠ ಪಾಲನೆ ಮಾಡುವ ಸಿದ್ಧಾಂತ, ಬಸವಣ್ಣನವರು ಜಗತ್ತಿಗೆ ಮಾಡಿದ ಬೋಧನೆ ಹಾಗೂ ಇಷ್ಟಲಿಂಗ ಪೂಜೆಯ ವಿಧಾನದ ಬಗ್ಗೆ ಪ್ರಶ್ನಿಸಿ ಶಿವಮೂರ್ತಿ ಮುರುಘಾ ಶರಣರಿಂದ ಉತ್ತರ ಪಡೆದರು. ಬಸವಣ್ಣನವರ ಪರಿಚಯದ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಮುರುಘಾ ಮಠಕ್ಕೆ ಭೇಟಿ ನೀಡುವ ಬಗ್ಗೆ ರಾಹುಲ್‌ ಗಾಂಧಿ ಅವರು ಈ ಹಿಂದೆಯೇ ಇಂಗಿತ ವ್ಯಕ್ತಪಡಿಸಿದ್ದರು. ಹಲವು ಸಮುದಾಯದವರಿಗೆ ಇಷ್ಟಲಿಂಗ ದೀಕ್ಷೆ ನೀಡಿರುವುದು ಅವರನ್ನು ಆಕರ್ಷಿಸಿದೆ. ರಾಹುಲ್‌ ಗಾಂಧಿ ಅವರಿಗೆ ಇಷ್ಟಲಿಂಗ ದೀಕ್ಷೆ ನೀಡಿರುವುದು ಖುಷಿ ತಂದಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಯಾವುದೇ ಮಠಾಧೀಶರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ಪಕ್ಷದ ಸಿದ್ಧಾಂತ ಮಠ ಪರಂಪರೆಗೆ ಪೂರಕವಾಗಿದೆ. ಪಕ್ಷದ ಪ್ರಣಾಳಿಕೆ ಹಾಗೂ ಬಸವಣ್ಣನನವರ ತತ್ವಗಳ ನಡುವೆ ಸಾಕಷ್ಟು ಸಾಮ್ಯತೆ ಇದೆ. ಭಾರತ್‌ ಜೋಡೊ ಪಾದಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಎಲ್ಲ ಮಠಾಧೀಶರನ್ನು ಭೇಟಿ ಮಾಡಲಿದ್ದಾರೆ’ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹಮ್ಮದ್‌, ಮುಖಂಡರಾದ ಬಿ.ಕೆ. ಹರಿಪ್ರಸಾದ್‌, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್‌. ಹನುಮಂತಪ್ಪ, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಶಾಸಕ ಟಿ. ರಘುಮೂರ್ತಿ ಇದ್ದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಸವಣೂರು ದೊಡ್ಡಹುಣಸೇಮಠದ ಚನ್ನಬಸವ ಸ್ವಾಮೀಜಿ, ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಮರುಳಶಂಕರ ಸ್ವಾಮೀಜಿ, ತಿಳವಳ್ಳಿ ಕಲ್ಮಠದ ಬಸವ ನಿರಂಜನ ಸ್ವಾಮೀಜಿ, ಬ್ಯಾಡಗಿ ಮುಪ್ಪಿನಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಶರಣೆ ಮುಕ್ತಾಯಕ್ಕ, ಶರಣೆ ಅಕ್ಕನಾಗಮ್ಮ, ಶರಣೆ ಜಯದೇವಿ ತಾಯಿ, ಶರಣೆ ಚಿನ್ಮಯಿತಾಯಿ, ಶರಣೆ ರಾಜೇಶ್ವರಿ ತಾಯಿ ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರಿದ್ದರು.

...

ರಾಹುಲ್‌ ಗಾಂಧಿ ಅವರಿಗೆ ಶಿವಮೂರ್ತಿ ಮುರುಘಾ ಶರಣರು ಇಷ್ಟಲಿಂಗ ದೀಕ್ಷೆ ನೀಡಿದ್ದು ಅತೀವ ಸಂತಸ ತಂದಿದೆ. ಶರಣರದು ಮಾನವೀಯತೆಯ ಹೃದಯ. ಅವರ ವಿಶ್ವಮಾನ್ಯ ತತ್ವ ಅಸಾಮಾನ್ಯವಾದದು.

-ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮೂರುಸಾವಿರ ಮಠ, ಹುಬ್ಬಳ್ಳಿ

...

ರಾಜ್ಯದಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ 90 ಲಕ್ಷಕ್ಕೂ ಹೆಚ್ಚಿದೆ. ವಂಚನೆಗೆ ಒಳಗಾದ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಪೂರಕವಾದ ಸಿದ್ಧಾಂತ ಪಕ್ಷದಲ್ಲಿರಲಿ.

-ಷಡಕ್ಷರಮುನಿ ದೇಶೀಕೇಂದ್ರ ಸ್ವಾಮೀಜಿ, ಆದಿಜಾಂಬವ ಮಠ, ಹಿರಿಯೂರು

......

ಕಾಂಗ್ರೆಸ್ ಮುಖಂಡರ ವಾಗ್ವಾದ

ರಾಹುಲ್‌ ಗಾಂಧಿ ಆಗಮನಕ್ಕೂ ಮುನ್ನ ಪಾಸ್‌ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಪರಸ್ಪರ ವಾಗ್ವಾದ ನಡೆಸಿದರು. ಪಕ್ಷದ ನಾಯಕರನ್ನು ಏಕವಚನದಲ್ಲಿ ನಿಂದಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ವರಿಷ್ಠರ ಭೇಟಿಯ ನಿಮಿತ್ತ ಮಠಕ್ಕೆ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಪಾಸ್‌ ಹೊಂದಿದ ವ್ಯಕ್ತಿಗಳನ್ನು ಮಾತ್ರ ಮಠದ ಆವರಣಕ್ಕೆ ಹಾಗೂ ಸಂವಾದ ನಡೆಯುವ ಸಭಾಂಗಣಕ್ಕೆ ಪೊಲೀಸರು ಪ್ರವೇಶ ನೀಡುತ್ತಿದ್ದರು. ಪಾಸ್‌ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.

ಕೆಪಿಸಿಸಿ ಮುಖಂಡ ಸಾಸಲು ಸತೀಶ್ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಪರಸ್ಪರ ಏರುಧ್ವನಿಯಲ್ಲಿ ಗಲಾಟೆ ಮಾಡಿಕೊಂಡರು.

......

ಕಾಲಮೇಲೆ ಕಾಲು ಹಾಕಿ ಕುಳಿತ ರಾಹುಲ್‌ ಗಾಂಧಿ

ಮಠಾಧೀಶರೊಂದಿಗೆ ನಡೆದ ಸಂವಾದದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕಾಲಮೇಲೆ ಕಾಲುಹಾಕಿ ಕುಳಿತ ಚಿತ್ರ, ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಹುಲ್‌ ಗಾಂಧಿ ಕ್ಷಮೆ ಕೇಳುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಂವಾದ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ. ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಪಕ್ಕದಲ್ಲಿ ಆಸೀನರಾಗಿದ್ದ ರಾಹುಲ್‌ ಗಾಂಧಿ ಕಾಲಮೇಲೆ ಕಾಲುಹಾಕಿ ಕುಳಿತು ಭಾಷಣ ಆಲಿಸುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ ಮುಖಂಡರು ರಾಹುಲ್‌ ಗಮನ ಸೆಳೆದು ಕಾಲಮೇಲಿನ ಕಾಲು ತೆಗೆಯುವಂತೆ ಮಾಡಿದರು.

ರಾಜಕೀಯ ಮಾತನಾಡದಂತೆ ಮುರುಘಾಶ್ರೀ ಸೂಚನೆ

‘ಇಷ್ಟಲಿಂಗ ದೀಕ್ಷೆ ಪಡೆದ ರಾಹುಲ್‌ ಗಾಂಧಿ ಅವರು ಮುಂದಿನ ಪ್ರಧಾನಿ ಆಗಲಿದ್ದಾರೆ’ ಎಂಬಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಅವರ ಅಭಿಪ್ರಾಯಕ್ಕೆ ಶಿವಮೂರ್ತಿ ಮುರುಘಾ ಶರಣರು ಆಕ್ಷೇಪ ವ್ಯಕ್ತಪಡಿಸಿದರು. ರಾಜಕೀಯ ಮಾತನಾಡದಂತೆ ಸೂಚನೆ ನೀಡಿದರು.

ಮಠಾಧೀಶರೊಂದಿಗೆ ಸಂವಾದ ನಡೆಸಿದ ಬಳಿಕ ಕಾಂಗ್ರೆಸ್‌ ನಾಯಕರು ಮಠದಿಂದ ತೆರಳಿದರು. ಸಭಾಂಗಣದಲ್ಲಿದ್ದ ಮಠಾಧೀಶರು ಮಾತು ಮುಂದುವರಿಸಿದರು.ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡುವಾಗ ರಾಹುಲ್‌ ಅವರ ರಾಜಕೀಯ ಭವಿಷ್ಯದ ಬಗ್ಗೆ ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT