ಮಂಗಳವಾರ, ಜನವರಿ 19, 2021
17 °C
ಚಳ್ಳಕೆರೆ: ವಸತಿ ಗೃಹಗಳ ಸುತ್ತ ಬೆಳೆದ ಜಾಲಿ ಮುಳ್ಳಿನ ಗಿಡಗಳು, ಕೊಳೆತು ನಾರುತ್ತಿರುವ ಚರಂಡಿ

ಕೊಳಚೆ ಪ್ರದೇಶವಾದ ಬ್ರಾಡ್‍ಗೇಜ್ ರೈಲು ನಿಲ್ದಾಣ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಇಲ್ಲಿನ ಬ್ರಾಡ್‍ಗೇಜ್ ರೈಲು ನಿಲ್ದಾಣದ ಬಳಿ ಪ್ರತಿದಿನ ಕಸ ಕಡ್ಡಿ ಮತ್ತು ಇತರೆ ಘನ ತ್ಯಾಜ್ಯ ಸುರಿಯುತ್ತಿರುವ ಕಾರಣ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ತ್ಯಾಗರಾಜನಗರ, ವಾಲ್ಮೀಕಿನಗರ, ಚಿತ್ರಯ್ಯನಹಟ್ಟಿ, ಕಾಟಪ್ಪನಹಟ್ಟಿ, ಹಳೆಟೌನ್ ಸೇರಿದಂತೆ ನಗರದ ಎಲ್ಲ ಚರಂಡಿಯ ಕೊಳಚೆ ನೀರು ನಿಲ್ದಾಣದ ಬಳಿ ರಾಜಕಾಲುವೆಯ ಮೂಲಕ ನಗರಂಗೆರೆ ಕೆರೆಯ ಕಡೆಗೆ ಹರಿಯುತ್ತಿದೆ. ರೈಲ್ವೆ ಹಳಿ ಸಮೀಪದ ಹಾಳುಬಾವಿ ಕಸ, ಕಡ್ಡಿ, ಕೊಚ್ಚೆಯಿಂದ ತುಂಬಿ ಕೊಳೆತು ನಾರುತ್ತಿದೆ. ವಸತಿ ಗೃಹದ ಪಕ್ಕದ ಚರಂಡಿಯಲ್ಲಿ ಸದಾ ಹರಿಯುವ ಕೊಳಚೆ ನೀರು ನಿತ್ಯ ಓಡಾಡುವ ಜನರಲ್ಲಿ ಅಸಹ್ಯ ಹುಟ್ಟಿಸಿದೆ.

ಬೆಳೆದ ಜಾಲಿ ಮುಳ್ಳಿನ ಗಿಡಗಳು ವಸತಿ ಗೃಹಗಳನ್ನು ಆವರಿಸಿಕೊಂಡಿವೆ. ಇದರಿಂದಾಗಿ ನಿಲ್ದಾಣದ ಆವರಣ ಸೊಳ್ಳೆ ಮತ್ತು ಹಂದಿಗಳ ತಾಣವಾಗಿದೆ. ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಭಯ ಹಾಗೂ ಆತಂಕದ ಕಾರಣ ನಾಲ್ಕು ವಸತಿ ಗೃಹಗಳಲ್ಲಿ ಮಾತ್ರ ಸಿಬ್ಬಂದಿ ವಾಸವಿದ್ದಾರೆ. ಇನ್ನುಳಿದ 6 ಗೃಹಗಳು ಖಾಲಿ ಇವೆ. ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸರಿಯಾದ ಶೌಚಾಲಯದ ವ್ಯವಸ್ಥೆಯೇ ಇಲ್ಲದಾಗಿದೆ.

ರಸ್ತೆ, ಚರಂಡಿ, ಶೌಚಾಲಯ ಮತ್ತು ಇಡೀ ನಿಲ್ದಾಣವನ್ನು ಸ್ವಚ್ಛಗೊಳಿಸಲು ಒಬ್ಬ ಪೌರ ಕಾರ್ಮಿಕರನ್ನು ಮಾತ್ರ ನೇಮಿಸಲಾಗಿದೆ. 

ಶುದ್ಧ ಕುಡಿಯುವ ನೀರಿನ ಸಮಸ್ಯೆ: ಆವರಣದಲ್ಲಿ ಒಂದೇ ಕೊಳವೆಬಾವಿ ಇದೆ. ಆ ಬಾವಿಯ ಸುತ್ತ ಕೊಳಚೆ ನೀರು ತುಂಬಿಕೊಂಡಿದೆ. ವಿ.ವಿ. ಸಾಗರದ ನೀರು ನಗರಕ್ಕೆ ಹರಿದು ಬಂದರೂ ಇಲ್ಲಿನ ಸಿಬ್ಬಂದಿ ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.

ತಿರುಪತಿ, ಗುಂತಕಲ್ಲು, ರಾಯದುರ್ಗ, ಬಳ್ಳಾರಿ, ಚಳ್ಳಕೆರೆ ಮಾರ್ಗವಾಗಿ ಬೆಂಗಳೂರು ನಗರದ ಕಡೆಗೆ ನಿತ್ಯ 2-3 ಬಾರಿ ಪ್ಯಾಸೆಂಜರ್ ರೈಲು ಓಡಾಡುತ್ತದೆ. ವಾರಕ್ಕೊಮ್ಮೆ ಕಾಶಿ ಮತ್ತು ಮೈಸೂರು ಕಡೆಗೆ ಮತ್ತು ಗಂಟೆಗೆ ಒಮ್ಮೆ ಗೂಡ್ಸ್ ರೈಲು ಓಡಾಡುತ್ತವೆ. ಆದರೆ, ನಿಲ್ದಾಣದಲ್ಲಿ ಅಗತ್ಯ ಸೌಲಭ್ಯ ಇಲ್ಲದಾಗಿದೆ.

**

ಬೆಳೆದಿರುವ ಮುಳ್ಳು ಗಿಡಗಳನ್ನು ಕಡಿಸಿ ಹಾಕಬೇಕು. ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಳಕಿನ ಸೌಲಭ್ಯವನ್ನು ಕಲ್ಪಿಸಬೇಕು. ಜತೆಗೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು
- ಆರ್.ಪ್ರಸನ್ನಕುಮಾರ್, ನಾಗರಿಕ

**

ರೈಲ್ವೆ ನಿಲ್ದಾಣ ನಮ್ಮ ವ್ಯಾಪ್ತಿಗೆ ಬರದ ಕಾರಣ ಅದನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುವುದಿಲ್ಲ.
-ಪಾಲಯ್ಯ, ಪೌರಾಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು