ಶನಿವಾರ, ಮೇ 21, 2022
26 °C
ಭರ್ತಿಯಾದ ಜಲಮೂಲಗಳು * ಮನೆ, ಅಂಗಡಿಗಳಿಗೆ ನುಗ್ಗಿದ ಮಳೆ ನೀರು

ಅಕಾಲಿಕ ಮಳೆ: ಆತಂಕಗೊಂಡ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೆ ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಗ್ರಾಮೀಣ ಭಾಗದ ಜೀವನಾಡಿಯಾದ ಕೆರೆ, ಕಟ್ಟೆ, ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಮಳೆಯ ಆರ್ಭಟಕ್ಕೆ ಹಲವು ಬಡಾವಣೆಯ ಮನೆಗಳಿಗೂ ನೀರು ನುಗ್ಗಿದೆ.

ಗುರುವಾರ ಮಧ್ಯರಾತ್ರಿ 12.30 ಸುಮಾರಿಗೆ ಆರಂಭವಾದ ಮಳೆ ಸ್ವಲ್ಪ ಹೊತ್ತಿಗೆ ರಭಸ ಪಡೆದುಕೊಂಡಿತು. ಮುಂಜಾನೆವರೆಗೂ ಉತ್ತಮ ಮಳೆಯಾಯಿತು. ಇದರಿಂದಾಗಿ ರಾಜಕಾಲುವೆಗಳು ಬೋರ್ಗರೆದು ಹರಿದವು. ಕೆಲವೆಡೆ ಒಕ್ಕಣೆ ಮಾಡಿದ್ದ ರಾಗಿ ಬೆಳೆ ನೀರು ಪಾಲಾಗಿದೆ. ಮಳೆ ಮುಂದುವರೆದರೆ ಇನ್ನಷ್ಟು ಹಾನಿಯಾಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ.

2009ರಲ್ಲಿ ಒಂದೇ ದಿನ ಚಿತ್ರದುರ್ಗ ತಾಲ್ಲೂಕಿನಲ್ಲಿ 18 ಸೆಂ.ಮೀ ಮಳೆಯಾಗಿ ದಾಖಲೆ ಸೃಷ್ಟಿಸಿತ್ತು. 2020ರಲ್ಲಿ 14 ಸೆಂ.ಮೀಗೂ ಅಧಿಕ ಮಳೆ ಸುರಿದಿತ್ತು. ಒಂದೂವರೆ ತಿಂಗಳ ಹಿಂದೆಯಷ್ಟೇ ಅಕಾಲಿಕ ಮಳೆ ಸುರಿದಾಗ 10.5 ಸೆಂ.ಮೀ ಮಳೆಯಾಗಿತ್ತು. 2020ರಲ್ಲಿ ಎರಡು ಬಾರಿ ಇಷ್ಟು ಪ್ರಮಾಣದ ಮಳೆ ಸುರಿದಿತ್ತು. ಈ ಬಾರಿ ಒಂದೇ ದಿನ 9.6 ಸೆಂ.ಮೀ ಮಳೆಯಾಗಿದೆ.

ನಾಲ್ಕು ತಿಂಗಳಲ್ಲೇ ಮಲ್ಲಾಪುರ ಕೆರೆ ನಾಲ್ಕನೇ ಬಾರಿ ಕೋಡಿ ಬಿದ್ದಿದೆ. ಕೆರೆಯಿಂದ ನೀರು ಮೈದುಂಬಿ ಹೊರಗೆ ಹರಿಯುತ್ತಿದೆ. ಈ ದೃಶ್ಯ ನೋಡಿ ಈ ಭಾಗದ ಜನ ಸಂಭ್ರಮಿಸುತ್ತಿದ್ದಾರೆ. ಕೋಡಿ ಬಿದ್ದ ಈ ಕೆರೆಯಿಂದ ಕೆಲ ರೈತರ ಹೊಲ, ಮನೆಗಳಿಗೂ ನೀರು ನುಗ್ಗಿದೆ. ಕೆರೆಯಿಂದ ರಭಸವಾಗಿ ನೀರು ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನೀರು ನಿಂತಿದೆ. ಕೆರೆ ಸಮೀಪದ ಸರ್ಕಾರಿ ಶಾಲೆ ಸೇರಿ 15ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಪಿಳ್ಳೆಕೇರನಹಳ್ಳಿ ರಸ್ತೆ ಮಾರ್ಗದ ಕೆಳಸೇತುವೆಯಲ್ಲಿ ಮೊಣಕಾಲುವರೆಗೆ ನೀರು ನಿಂತಿದೆ. ಉತ್ತಮ ಮಳೆಯಿಂದಾಗಿ ಮಲ್ಲಾಪುರ ಕೆರೆಯಿಂದ ನದಿ ನೀರಿನಂತೆ ಧಾರಾಕಾರವಾಗಿ ಹರಿಯುತ್ತಿರುವ ನೀರು ಗೋನೂರು ಕೆರೆ ತಲುಪುತ್ತಿದೆ. ಆ ಕೆರೆಗೂ ಮತ್ತಷ್ಟು ನೀರು ಹರಿಯುವ ಸಾಧ್ಯತೆ ಇದೆ.

ಐತಿಹಾಸಿಕ ಸಿಹಿನೀರು ಹೊಂಡ, ಸಂತೆಹೊಂಡ, ಎಲ್ಐಸಿ ಪಕ್ಕದ ಕೆಂಚಮಲ್ಲಪ್ಪನ ಬಾವಿ, ಚನ್ನಕೇಶವಸ್ವಾಮಿ ದೇಗುಲದ ಪಕ್ಕದ ಕಲ್ಯಾಣಿಗೂ ಭಾರಿ ನೀರು ಹರಿದು ಬಂದಿದೆ. ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡ, ಒನಕೆ ಓಬವ್ವನ ಕಿಂಡಿ, ತಣ್ಣೀರು ದೋಣಿಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ. ಮೆಟ್ಟಿಲುಗಳಿಂದ ಜರಿಯಂತೆ ಹರಿಯುತ್ತಿರುವ ನೀರು ಬಂಡೆಗಳ ಸಂದುಗಳನ್ನು ಸೀಳಿಕೊಂಡು ಹರಿದಿದೆ.

ಕೆರೆಯಿಂದ ನೀರು ಹೊರಗೆ ಹರಿಯುತ್ತಿರುವ ದೃಶ್ಯವನ್ನು ನಾಗರಿಕರು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲೂ ಮಳೆ ನೀರಿನಿಂದಾಗಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯಿತು.

ಕೆಳಸೇತುವೆ; ಸವಾರರ ಪರದಾಟ

ರೈಲು ಸಂಚರಿಸಲು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕೆಳಸೇತುವೆಗಳು ಮಳೆ ನೀರಿನಿಂದ ಜಲಾವ್ರತವಾದವು. ಸರಾಗವಾಗಿ ನೀರು ಹರಿಯದೇ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿದರು. ತುರುವನೂರು ಮಾರ್ಗದಲ್ಲಿ ಸಾಗುವವರು ಮುತ್ತಯ್ಯನಹಟ್ಟಿ ಮಾರ್ಗವಾಗಿ ಹೊಸಪೇಟೆ ರಸ್ತೆಯಲ್ಲಿ ಸಂಚರಿಸಬೇಕಾಯಿತು.

ಮೆದೇಹಳ್ಳಿ ರಸ್ತೆ ಮಾರ್ಗದ ಕೆಳಸೇತುವೆಗೂ ನೀರಿನ ಹರಿವು ಹೆಚ್ಚಾಗಿತ್ತು. ಮಲ್ಲಾಪುರ ಸಮೀಪದ ಕೆಳಸೇತುವೆ ಮಾರ್ಗದಲ್ಲಿ ಶುಕ್ರವಾರ ಮುಂಜಾನೆ ವಾಹನ ಸವಾರರು, ಪಾದಚಾರಿಗಳು ರಸ್ತೆ ಮಾರ್ಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಯಿತು. ಪಿಳ್ಳೆಕೇರನಹಳ್ಳಿ ಹಾಗೂ ಮಲ್ಲಾಪುರ ಗ್ರಾಮಗಳ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲೂ ನೀರು ರಸ್ತೆಯ ಮೇಲೆ ಹರಿದು ವಾಹನ ಸವಾರರಿಗೆ ತೊಂದರೆ ಉಂಟು ಮಾಡಿತು.

ಮನೆಗಳಿಗೆ ನುಗ್ಗಿದ ನೀರು

ನಗರ ವ್ಯಾಪ್ತಿಯ ಗುಮಾಸ್ತರ ಕಾಲೊನಿ, ಕೆಳಗೋಟೆ, ಗೋಪಾಲಪುರ ರಸ್ತೆ, ಹೊಸ ಭೋವಿ ಕಾಲೊನಿ ಸೇರಿ ಕೆಲ ತಗ್ಗು ಪ್ರದೇಶಗಳ ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ಕೆಲವರ ನಿದ್ದೆಗೆಡಿಸಿದೆ. ಮಳೆ ನೀರನ್ನು ಹೊರಗೆ ಹಾಕುವಷ್ಟರಲ್ಲಿ ಹೈರಾಣಾಗಿದ್ದಾರೆ.

ತಾಲ್ಲೂಕಿನ ಸಜ್ಜನಕೆರೆ ಗ್ರಾಮದ ಹಳೆ ಮನೆಯ ಗೋಡೆಗಳು ಕುಸಿದಿವೆ. ಮಲ್ಲಾಪುರದಲ್ಲೂ ಒಂದಿಷ್ಟು ಮನೆಗಳ ಗೋಡೆಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಇದೆ.

***

ಮಳೆಯಿಂದಾಗಿ ಮನೆ, ರೈತರ ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿದ್ದಲ್ಲಿ ತಕ್ಷಣ ಮಾಹಿತಿ ನೀಡಿ. ಕೂಡಲೇ ಪರಿಶೀಲಿಸಿ, ಪರಿಹಾರ ನೀಡಲು ಅನುಕೂಲವಾಗಲಿದೆ.

–ವೆಂಕಟೇಶಯ್ಯ, ತಹಶೀಲ್ದಾರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು