ಚಿತ್ರದುರ್ಗ: ಜಿಲ್ಲೆಯಾದ್ಯಂತ ಮಂಗಳ ವಾರ ತಡರಾತ್ರಿ ಉತ್ತಮ ಮಳೆ ಯಾಗಿದ್ದು, ಹಳ್ಳ–ಕೊಳ್ಳಗಳು ತುಂಬಿ ಹರಿದಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.
ಚಳ್ಳಕೆರೆ ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಯಲ್ಲಿ 11 ಸೆಂ.ಮೀ. ಮಳೆಯಾಗಿದೆ. ಇದು ಬುಧವಾರ ರಾಜ್ಯದಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಯಕನಹಟ್ಟಿ ಪೊಲೀಸ್ ಠಾಣೆ ಹಾಗೂ ಮನಮೈನಹಟ್ಟಿ ಗ್ರಾಮದ ಏಕಾಂತೇಶ್ವರ ಮಠದ ಮುಂಭಾಗದ ಜನವಸತಿ ಪ್ರದೇಶಕ್ಕೆ, ಚಳ್ಳಕೆರೆ ನಗರದ ರಹೀಂ ನಗರದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಪಾವಗಡ ರಸ್ತೆಯಲ್ಲಿ ಹಳ್ಳ ತುಂಬಿ ಹರಿದಿದ್ದು, ರೈಲ್ವೆ ಗೇಟ್, ಕಾಟಪ್ಪನಹಟ್ಟಿ, ಹಳೆ ಟೌನ್ ರಸ್ತೆ ಸಂಪರ್ಕ ಕಳೆದುಕೊಂಡಿದೆ. ಚಿತ್ರದುರ್ಗದ ಸಿಹಿ ನೀರು ಹೊಂಡ ಕೋಡಿ ಬಿದ್ದ ಪರಿಣಾಮ ಸಂತೆಹೊಂಡ ಭರ್ತಿಯಾಗಿದೆ.
ಶಿವಮೊಗ್ಗ ವರದಿ: ಜಿಲ್ಲೆಯ ಆನಂದಪುರ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು.
ದಾವಣಗೆರೆ ವರದಿ: ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಬಸವಾಪಟ್ಟಣ ಸಮೀಪ ಹಳ್ಳವೊಂದು ಮೈದುಂಬಿ ಹರಿದಿದೆ.
ಬಳ್ಳಾರಿ/ ಹೊಸಪೇಟೆ ವರದಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕೆಲವೆಡೆ ಬುಧವಾರ ನಸುಕಿನಲ್ಲಿ ವ್ಯಾಪಕ ಮಳೆಯಾಗಿದೆ. ಕಂಪ್ಲಿ ತಾಲ್ಲೂಕಿನಲ್ಲಿ ಮತ್ತೆ ಏಳು ಮನೆಗಳು ಕುಸಿದಿವೆ ಹಾಗೂ ಕಂಪ್ಲಿ ಸಕ್ಕರೆ ಕಾರ್ಖಾನೆ–ಚಿಕ್ಕಜಾಯಿಗನೂರು ಹಾಗೂ ಜವುಕು–ಜೀರಿಗನೂರು ಸಂಪರ್ಕ ಸೇತುವೆಗಳು ಕೊಚ್ಚಿ ಹೋಗಿವೆ.
ಕರಾವಳಿ: ಭಾರಿ ಮಳೆ ಸಾಧ್ಯತೆ
ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಸಾಧಾರಣ ಮಳೆ, ಇದೇ 25ರವರೆಗೂ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರಿಯುವ ಸಂಭವವಿದ್ದು, ಶುಕ್ರವಾರದಿಂದ ಮೂರು ದಿನಗಳು ಉಡುಪಿ, ದಕ್ಷಿಣ ಕನ್ನಡದ ಜತೆಗೆ ಉತ್ತರ ಕನ್ನಡ ಜಿಲ್ಲೆಗೂ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.