ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರಕ್ಕೆ ಭಕ್ತಿಪೂರ್ವಕ ನಿಧಿ ಸಮರ್ಪಣೆ

ಸಣ್ಣ ಹಳ್ಳಿಯನ್ನೂ ತಲುಪಲಿದ್ದೇವೆ: ನಟಿ ಮಾಳವಿಕಾ ಅವಿನಾಶ್
Last Updated 17 ಜನವರಿ 2021, 14:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಆಂಜನೇಯನ ವೇಷ ಧರಿಸಿದ್ದ ಚಿಣ್ಣರು ಅನೇಕರನ್ನು ಆಕರ್ಷಿಸಿದರು. ನಗರದ ವಿ.ಪಿ. ಬಡಾವಣೆಯಲ್ಲಿ ಭಾನುವಾರ ನಟಿ ಮಾಳವಿಕಾ ಅವಿನಾಶ್ ಹತ್ತಾರು ಮನೆಗಳಿಗೆ ಭೇಟಿ ನೀಡಿದರು. ಶ್ರೀರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರು ಭಕ್ತಿಪೂರ್ವಕವಾಗಿ ನಿಧಿ ಅರ್ಪಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ₹5 ಲಕ್ಷ ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ. ಇದು ದೇಶದ ಪ್ರತಿಯೊಬ್ಬರ ಮಂದಿರವಾಗಬೇಕು ಎಂಬ ಮಹತ್ತರ ಉದ್ದೇಶ ಹೊಂದಲಾಗಿದೆ’ ಎಂದರು.

ಎಲ್ಲವೂ ಪಾರದರ್ಶಕ: ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅನ್ನು ಸುಪ್ರೀಂಕೋರ್ಟ್‌ ಆದೇಶದಂತೆ ಸ್ಥಾಪಿಸಲಾಗಿದೆ. ಶ್ರೀಮಂತರು, ಬಡವರೆನ್ನದೇ ₹10ರಿಂದ ₹2 ಸಾವಿರದವರೆಗೂ ನಗದು ರಸೀದಿ ಮೂಲಕ ನಿಧಿ ಸಂಗ್ರಹಿಸಲಾಗುತ್ತಿದೆ. ಅದಕ್ಕೂ ಹೆಚ್ಚಿನ ಮೊತ್ತವನ್ನು ಚೆಕ್‌ ಮೂಲಕ ಟ್ರಸ್ಟ್‌ ಹೆಸರಿಗೆ ಸಮರ್ಪಿಸಬಹುದು. ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ’ ಎಂದು ಹೇಳಿದರು.

‘ದೊಡ್ಡ ಮೊತ್ತ ಕೊಟ್ಟವರು ಮಹನೀಯರು ಅಂತಲ್ಲ. ಚಿಕ್ಕ ಮೊತ್ತ ಕೊಟ್ಟವರು ಸಣ್ಣವರಂತಲ್ಲ. ನಾನೂ ಮಂದಿರ ನಿರ್ಮಾಣಕ್ಕೆ ನಿಧಿ ನೀಡಿದ್ದೇವೆ ಎಂಬ ಆತ್ಮತೃಪ್ತಿ, ಸಂತೃಪ್ತಿ ಮನೋಭಾವ ಎಲ್ಲರಲ್ಲೂ ಬರಬೇಕು. ಪ್ರತಿಯೊಬ್ಬ ಭಾರತೀಯನೂ ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಸದುದ್ದೇಶವಿದೆ’ ಎಂದರು.

‘ವ್ಯವಸ್ಥಿತವಾಗಿ ಕಾರ್ಯೋನ್ಮುಖರಾಗಲು ಆರ್‌ಎಸ್‌ಎಸ್‌ ಹಾಗೂ ವಿಶ್ವ ಹಿಂದೂ ಪರಿಷತ್ ಮೂಲಕ ದೇಶದ ವಿವಿಧೆಡೆ ನಿಧಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಫೆ.5ರ ವರೆಗೂ ಸಂಗ್ರಹಿಸಲಾಗುವುದು. ನಿಧಿ ಸಮರ್ಪಣಾ ಅಭಿಯಾನ ಎಲ್ಲೆಡೆ ಯಶಸ್ವಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಎಂಟತ್ತು ಮನೆಗಳಿರುವ ಹಳ್ಳಿಗಳನ್ನು ಬಿಡುವುದಿಲ್ಲ. ಮನೆ-ಮನೆ ಅಭಿಯಾನದ ಉದ್ದೇಶವೇ ಇದಾಗಿದೆ. ಸಾಧ್ಯವಾದಷ್ಟು ಎಲ್ಲರೂ ತೊಡಗಿಕೊಳ್ಳಬೇಕು. ನಮ್ಮ ಸಖ್ಯತೆ ಪುನರ್‌ ಸ್ಥಾಪಿಸಬೇಕು. ದೇಶ ವಾಸಿಗಳು ಒಗ್ಗೂಡಬೇಕು ಎಂಬ ಕಲ್ಪನೆಯೂ ಇದರಲ್ಲಿದೆ. ಭವ್ಯ ಮಂದಿರ ನಿರ್ಮಾಣದ ಗುರಿಯನ್ನಷ್ಟೇ ಹೊಂದಿದ್ದೇವೆ’ ಎಂದರು.

‘ನಿಧಿ ಸಂಗ್ರಹಕ್ಕೆ ಹೆಸರಾಂತ ಕಲಾವಿದರು, ಕ್ರಿಕೆಟಿಗರ ಪ್ರೋತ್ಸಾಹವೂ ಇದೆ. ಸಂಸದೆ ಸುಮಲತಾ ಈಗಾಗಲೇ ನಿಧಿ ಸಮರ್ಪಿಸಿದ್ದಾರೆ. ನಾನೂ ಬೆಂಗಳೂರಿನಲ್ಲಿರುವ ಎಲ್ಲ ಕ್ರಿಕೆಟ್‌ ಆಟಗಾರರ ಮನೆಗೂ ತೆರಳಿ ನಿಧಿ ಸಂಗ್ರಹಿಸಲಿದ್ದೇನೆ’ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.

‘ಗುಂಪು ಕಟ್ಟಿಕೊಂಡು ಮಾಡುವ ಕೆಲಸ ಇದಲ್ಲ. ಅದಕ್ಕಾಗಿ ಐದು ಜನರ ತಂಡವನ್ನು ರಚಿಸಲಾಗಿದೆ. ಕೆಲ ಕಲಾವಿದರು ನಿಧಿ ಸಂಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ’ ಎಂದರು.

ಆರ್‌ಎಸ್‌ಎಸ್‌ ಮುಖಂಡರಾದ ರಾಜ್‌ಕುಮಾರ್,ವಿಎಚ್‌ಪಿ ಮುಖಂಡ ಪ್ರಭಂಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT