ಸೋಮವಾರ, ಮೇ 23, 2022
30 °C
ಜಿಲ್ಲೆಯ ಎಲ್ಲೆಡೆ ರಾಮನವಮಿ ಸಂಭ್ರಮ, ಪಾನಕ, ಕೋಸಂಬರಿ ವಿತರಣೆ

ಶ್ರೀರಾಮ ಸ್ಮರಣೆಯಲ್ಲಿ ಮಿಂದೆದ್ದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಭಾನುವಾರ ಶ್ರೀರಾಮ ನವಮಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು ಪ್ರತಿ ಮನೆ–ಮನಗಳಲ್ಲಿ ಶ್ರೀರಾಮನ ಜಪ ಮೊಳಗಿತು. ಶ್ರೀರಾಮ ಸ್ಮರಣೆಯಲ್ಲಿ ಭಕ್ತ ಸಮೂಹ ಮಿಂದೆದ್ದಿತು.

ಎರಡು ವರ್ಷ ಕೋವಿಡ್‌ ಕಾರಣಕ್ಕೆ ಸರಳವಾಗಿ ನಡೆದಿದ್ದ ಶ್ರೀರಾಮ ನವಮಿ ಪ್ರಸಕ್ತ ವರ್ಷ ಕಳೆಗಟ್ಟಿತ್ತು. ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ಸಡಗರದಿಂದ ಆಚರಿಸಲಾಯಿತು. ದೇವರ ವಿಗ್ರಹ, ಉತ್ಸವ ಮೂರ್ತಿ, ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು. ಹಲವು ದೇಗುಲಗಳಲ್ಲಿ ಪ್ರಸಾದ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

ಶ್ರೀರಾಮ ನವಮಿಗೆ ದೇಗುಲಗಳಲ್ಲಿ ಶನಿವಾರದಿಂದಲೇ ಸಿದ್ಧತೆಗಳು ನಡೆದಿದ್ದವು. ತಳಿರು ತೋರಣಗಳಿಂದ ದೇಗುಲಗಳನ್ನು ಸಿಂಗರಿಸಲಾಗಿತ್ತು. ತರಹೇವಾರಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪೂಜಾ ಕೈಂಕರ್ಯಗಳು ಬೆಳಿಗ್ಗೆಯಿಂದಲೇ ನಡೆದವು. ದೇವರ ದರ್ಶನ ಪಡೆದವರಿಗೆ ಪ್ರಸಾದ ವಿತರಿಸಲಾಯಿತು. ಗಲ್ಲಿ, ಬೀದಿಗಳಲ್ಲಿಯೂ ಭಕ್ತ ಸಮೂಹ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೋಸಂಬರಿ, ಪಾನಕ ವಿತರಿಸಿತು.

ತ್ಯಾಗರಾಜ ಬೀದಿಯ ಬಾಲರಾಮ ಮಂದಿರದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣರ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಂಗಯ್ಯನಬಾಗಿಲು ಸಮೀಪದ ಶ್ರೀರಾಮ ಮಂದಿರದಲ್ಲಿ ನಸುಕಿನಂದಲೇ ಪೂಜಾ ಕೈಂಕರ್ಯಗಳು ನಡೆದವು. ದೇವರ ದರ್ಶನ ಪಡೆದ ಎಲ್ಲ ಭಕ್ತರು ಕೋಸಂಬರಿ, ಪಾನಕ ಸೇವಿಸಿ ಪುನೀತರಾದರು.

ಬುರುಜನಹಟ್ಟಿಯ ತಗ್ಗಿನ ಹನುಮಪ್ಪನಸ್ವಾಮಿಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಸಿಹಿನೀರು ಹೊಂಡದಲ್ಲಿ ಗಂಗಾಪೂಜೆ ನೆರವೇರಿಸಲಾಯಿತು. ಕೋಟೆ ಆಂಜನೇಯಸ್ವಾಮಿ ದೇಗುಲದ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು. ಸಿಹಿನೀರು ಹೊಂಡದ ರಸ್ತೆ, ಕೋಣನಹಟ್ಟಿ ಸೇರಿ ಹಲವೆಡೆ ಮೆರವಣಿಗೆ ಸಾಗಿತು.

ಆನೆಬಾಗಿಲ ಬಳಿಯ ಪ್ರಸನ್ನ ಆಂಜನೇಯಸ್ವಾಮಿ, ಸುವೃಷ್ಟಿ ಆಂಜನೇಯಸ್ವಾಮಿ ದೇವಸ್ಥಾನ, ನೆಹರೂ ನಗರದ ವೀರಾಂಜನೇಯಸ್ವಾಮಿ ದೇಗುಲ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದ ಮುಂಭಾಗದಲ್ಲಿರುವ ರಕ್ಷಾ ಆಂಜನೇಯಸ್ವಾಮಿ ದೇಗುಲ, ಹೊಳಲ್ಕೆರೆ ಮುಖ್ಯರಸ್ತೆಯಲ್ಲಿನ 8ನೇ ಮೈಲಿ ಬಯಲು ಆಂಜನೇಯಸ್ವಾಮಿ, ತಮಟಕಲ್ಲು ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಶ್ರೀರಾಮ ನವಮಿ ಅಂಗವಾಗಿ ವಿಶೇಷ ಪೂಜೆಗಳು ನಡೆದವು.

ಶ್ರದ್ಧಾಭಕ್ತಿಯ ಶೋಭಾಯಾತ್ರೆ

ಜೈಶ್ರೀರಾಮ ಬಳಗದ ವತಿಯಿಂದ ಶ್ರೀರಾಮ ಭಾವಚಿತ್ರದ ಶೋಭಾಯಾತ್ರೆ ನಗರದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಕನಕ ವೃತ್ತದಿಂದ ಆರಂಭವಾದ ಶೋಭಾಯಾತ್ರೆ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಬಿ.ಡಿ.ರಸ್ತೆ ಮಾರ್ಗವಾಗಿ ರಂಗಯ್ಯನಬಾಗಿಲು ತಲುಪಿತು. ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯ ಹರೀಶ್, ಶ್ರೀರಾಮ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‍ಕುಮಾರ್ ಇದ್ದರು.

ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ದೇವಾಲಯದ ಬಳಿ ಶ್ರೀರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ನಗರಾಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಟಿ.ಬದರಿನಾಥ್, ಬಿಜೆಪಿ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರಾದ ರಂಗಸ್ವಾಮಿ, ರುದ್ರೇಶ್ ಇದ್ದರು.

ಮಠಾಧೀಶರಿಂದ ವಿಶೇಷ ಪೂಜೆ

ವಿವಿಧ ಮಠಾಧೀಶರು ಭೋವಿ ಬಾಲಕರ ವಿದ್ಯಾರ್ಥಿ ನಿಲಯದ ಶ್ರೀರಾಮ ಮಂದಿರದ ಆವರಣದಲ್ಲಿ ಶ್ರೀರಾಮ ನವಮಿ ಆಚರಿಸಿದರು. ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಹಡಪದ ಗುರುಪೀಠ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಇದ್ದರು.

ಮಾರುತಿ ನಗರದ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಯೋಗ ಕೇಂದ್ರ ಹಾಗೂ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆ ಶ್ರೀರಾಮ ವಿಗ್ರಹದ ಮೆರವಣಿಗೆ ನಡೆಸಿತು. ಎ.ಎಸ್.ರಂಗಪ್ಪ, ರವಿ ಕೆ.ಅಂಬೇಕರ್, ಚಿತ್ರದುರ್ಗ ಕೋಟೆ ವಾಯು ವಿಹಾರಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಸೇರಿ ಅನೇಕರು ‍ಪಾಲ್ಗೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.