ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ | ರಾಮಾಯಣದ ನಂಟಿನ ರಾಮೇಶ್ವರ ಸನ್ನಿಧಿ

ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಉದ್ಘಾಟನೆ
Published 22 ಜನವರಿ 2024, 7:54 IST
Last Updated 22 ಜನವರಿ 2024, 7:54 IST
ಅಕ್ಷರ ಗಾತ್ರ

ಹೊಸದುರ್ಗ: ರಾಮಾಯಣ ಕಾಲದ ಪುರಾಣ ಪ್ರಸಿದ್ಧ ಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಗುಡ್ಡದ ನೇರಲಕೆರೆಯ ದಶರಥ ರಾಮೇಶ್ವರಸ್ವಾಮಿ ಸನ್ನಿಧಿಯಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಗುಹೆಯ ಒಳಗೆ ಶಿವಲಿಂಗವಿದ್ದು, ದಶರಥ ಮಹಾರಾಜ ಅದನ್ನು ಸ್ಥಾಪಿಸಿದ. ಶ್ರೀರಾಮನೂ ಅದಕ್ಕೆ ಪೂಜೆ ಸಲ್ಲಿಸಿದ್ದ ಎಂಬ ಐತಿಹ್ಯವಿದೆ. ರಾಮಾಯಣ ಕಾಲದ್ದು ಎಂದು ಪ್ರಸಿದ್ಧಿ ಪಡೆದಿರುವ ಕಾರಣ ಆಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಅಂಗವಾಗಿ ಸೋಮವಾರ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ದೇವಾಲಯದ ಆವರಣವನ್ನು ಪುಷ್ಪಗಳಿಂದ ಅಲಂಕರಿಸಲಾಗಿದೆ. ಗುಡ್ಡದ ನೇರಲಕೆರೆಯ ಗ್ರಾಮದ ಪ್ರವೇಶದ್ವಾರದ ಸುತ್ತಲೂ ಕೇಸರಿ ಬಣ್ಣದ ಧ್ವಜಗಳು ರಾರಾಜಿಸುತ್ತಿವೆ. ದೀಪಾಲಂಕಾರ ಮನೋಹರವಾಗಿದ್ದು, ಸ್ವಾಮಿಗೆ ಬೆಳಿಗ್ಗೆಯಿಂದಲೇ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಹಲವು ಪೂಜಾ ಕಾರ್ಯಗಳು ನಡೆಯಲಿವೆ. ರಾಮಮಂದಿರ ಉದ್ಘಾಟನೆ ಅಂಗವಾಗಿ ವಿವಿಧೆಡೆಯಿಂದ ಸಾವಿರಾರು ಭಕ್ತರು ಬರುವ ನೀರಿಕ್ಷೆಯಿದೆ. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.

ಪವಿತ್ರ ಸ್ಥಳಗಳಲ್ಲಿ ಒಂದು:

ರಾಮಾಯಣ ಕಾಲದ ಐತಿಹಾಸಿಕ ಸ್ಥಳಗಳನ್ನು ಸಂಶೋಧಿಸಲು ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸ ಮಂಡಳಿಯವರು 2017ರಂದು ಮಾರ್ಚ್‌ 26ರಂದು ಈ ಕ್ಷೇತ್ರಕ್ಕೆ ಭೇಟಿ ನೀಡಿ, ‘ರಾಮಾಯಣಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಲ್ಲಿ ಇದೂ ಒಂದು’ ಎಂಬುದಾಗಿ ಗುರುತಿಸಿದ್ದರು. ಈ ಕ್ಷೇತ್ರದ ಮಹಿಮೆ ಅರಿತ ಪ್ರೊ. ಅಶುತೋಷ್‌ ಮನೋಜ್‌ ಅವರು ರಾಮಮಂದಿರ ನಿರ್ಮಾಣದ ಕುರಿತು ಸ್ವಾಮಿಯಲ್ಲಿ ಭವಿಷ್ಯ ಕೇಳಿದ್ದರು. ಆಗ 2018ರ ನಂತರ ರಾಮಮಂದಿರ ನಿರ್ಮಾಣಕ್ಕೆ ಶುಭದಿನ ಬರಲಿದೆ. ಆಯೋಧ್ಯೆಯ ವಿವಾದಿತ ಜಾಗದಲ್ಲಿಯೇ ರಾಮಮಂದಿರ ನಿರ್ಮಾಣವಾಗಲಿದೆ ಎಂದು ನುಡಿದಿತ್ತು ಎಂದು ದೇವಸ್ಥಾನದ ಧರ್ಮದರ್ಶಿ ಸಮಿತಿ ಸಂಚಾಲಕ ಎನ್.‌ಕೆ. ರವಿಕುಮಾರ್‌ ಹೇಳಿದರು. 

ರಾಮನ ಪ್ರತಿಷ್ಠಾಪನೆ ಸ್ಥಳದಲ್ಲಿದೆ ಗಂಗಾಜಲ, ಮೃತ್ತಿಕೆ:

ಎರಡು ವರ್ಷಗಳ ಹಿಂದೆ ಬಜರಂಗದಳದ ಪ್ರಭಂಜನ್‌ ಅವರು ಕ್ಷೇತ್ರಕ್ಕೆ ಭೇಟಿ ನೀಡಿ, ಪವಿತ್ರ ಮೃತ್ತಿಕೆ ಹಾಗೂ ಗಂಗಾಜಲವನ್ನು ಬೆಳ್ಳಿಯ ಹೊದಿಕೆಯೊಂದಿಗೆ ಆಯೋಧ್ಯೆಗೆ ತಲುಪಿಸಿದ್ದರು. ಆ ಪವಿತ್ರ ಗಂಗಾಜಲವನ್ನು ಶ್ರೀರಾಮನ ಪ್ರತಿಷ್ಠಾಪನೆಯ ಜಾಗದಲ್ಲಿನ ಪೀಠದ ಕೆಳಗೆ ಹಾಕಲಾಗಿದೆ. ಆ ಸಮಯದಲ್ಲಿ ಕರ್ನಾಟಕದಿಂದ ತಲುಪಿದ ಏಕೈಕ ಮೃತ್ತಿಕೆ ಹಾಗೂ ಗಂಗಾಜಲ ಇದು ಎನ್ನುತ್ತಾರೆ ಸ್ಥಳೀಯರು.

ದಶರಥ ರಾಮೇಶ್ವರ ದೇವಾಲಯದಲ್ಲಿನ ಶ್ರವಣಕುಮಾರನ ಮೂರ್ತಿ
ದಶರಥ ರಾಮೇಶ್ವರ ದೇವಾಲಯದಲ್ಲಿನ ಶ್ರವಣಕುಮಾರನ ಮೂರ್ತಿ

ಐತಿಹಾಸಿಕ ಹಿನ್ನೆಲೆ:

ವಜ್ರಗಿರಿಯ ದಟ್ಟಾರಣ್ಯದಲ್ಲಿ ಶ್ರವಣಕುಮಾರನು ತಂದೆ ತಾಯಿಯ ಬಾಯಾರಿಕೆ ಈಡೇರಿಸಲು ನೀರು ತರಲು ಹೋದಾಗ, ದಶರಥ ಮಹಾರಾಜ ಬಿಟ್ಟ ಬಾಣಕ್ಕೆ ಶ್ರವಣಕುಮಾರ ಬಲಿಯಾದ. ಆಗ ಶ್ರವಣಕುಮಾರನ ತಂದೆ–ತಾಯಿ ದಶರಥನಿಗೆ ಶಾಪ ನೀಡುತ್ತಾರೆ. ಆಗ ದಶರಥನು ಶಾಪವಿಮೋಚನೆಗಾಗಿ ವಜ್ರಗಿರಿ (ತಾಲ್ಲೂಕಿನ ಮತ್ತೋಡು ಹೋಬಳಿ ಗುಡ್ಡದನೇರಲಕೆರೆ) ಅರಣ್ಯದಲ್ಲಿ ಒಂದು ಶಿವಲಿಂಗ ಸ್ಥಾಪಿಸಿ, ಪೂಜೆ ನೆರವೇರಿಸಿದ. ವನವಾಸ ಪೂರೈಸಿ ಆಯೋಧ್ಯೆಗೆ ಹಿಂದಿರುಗುತ್ತಿದ್ದ ಶ್ರೀರಾಮ ಇದೇ ಶಿವಲಿಂಗಕ್ಕೆ ಪೂಜೆ ನೇರವೇರಿಸಿದ್ದ. ದಶರಥ ಪ್ರತಿಷ್ಠಾಪಿಸಿದ್ದ ಶಿವಲಿಂಗಕ್ಕೆ, ದಶರಥ ಹಾಗೂ ಶ್ರೀರಾಮ ಇಬ್ಬರೂ ಪೂಜೆ ಸಲ್ಲಿಸಿದ್ದರಿಂದ ಈ ಕ್ಷೇತ್ರ ದಶರಥ ರಾಮೇಶ್ವರ ಎಂದು ಹೆಸರುವಾಸಿಯಾಗಿದೆ. ಇದಕ್ಕೆ ಇಂಬು ನೀಡುವಂತೆ ಶ್ರೀಕ್ಷೇತ್ರ ಕಾಡಿನಲ್ಲಿದ್ದು, ಇಂದಿಗೂ ಗುಹೆ ಮುಂಭಾಗದಲ್ಲಿರುವ ಪರ್ವತವನ್ನು ಶ್ರವಣಕುಮಾರನ ಪರ್ವತ ಎನ್ನಲಾಗುತ್ತಿದೆ ಎಂದು ಗುಡ್ಡದನೇರಲಕೆರೆ ಗ್ರಾಮದ ನಾಗರಾಜ್‌ ಓಣಿಮನೆ ಮಾಹಿತಿ ನೀಡಿದರು.

ಕ್ಷೇತ್ರಕ್ಕೆ ಬಂದ ಹಲವು ಯತಿಗಳು, ಸನ್ಯಾಸಿ, ಪುರೋಹಿತರು, ಸಿದ್ಧರು, ಸಾಧು ಸಂತರು, ಋಷಿಗಳು ಸೇರಿದಂತೆ ಹಲವರು ಇಲ್ಲಿನ ಪುಷ್ಕರಿಣಿಯಲ್ಲಿ ಮಿಂದೆದ್ದು, ಸ್ವಾಮಿಗೆ ಪೂಜೆ ಸಲ್ಲಿಸಿ ಹೋಗಿದ್ದಾರೆ ಎಂಬುದು ಸ್ಥಳೀಯರ ನಂಬಿಕೆ.

ದಶರಥ ರಾಮೇಶ್ವರ ಸ್ವಾಮಿ ಮೂರ್ತಿ
ದಶರಥ ರಾಮೇಶ್ವರ ಸ್ವಾಮಿ ಮೂರ್ತಿ

ದಟ್ಟಾರಣ್ಯದ ಮಧ್ಯದಲ್ಲಿ ನೆಲೆಸಿರುವ ದಶರಥ ರಾಮೇಶ್ವರ ಸ್ವಾಮಿ ಸನ್ನಿಧಾನದಲ್ಲಿ ವಾನರಗಳ (ಕೋತಿ) ದಂಡೇ ಇದೆ. ಮೊದಲು ವಾನರರಿಗೆ ಸೇವೆ, ನಂತರ ದೇವರಿಗೆ ನೈವೇದ್ಯ ಆನಾದಿಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ. ದೇವಾಲಯದಿಂದ ಸ್ವಲ್ಪ ದೂರದಲ್ಲಿ ಶ್ರವಣಕುಮಾರ ಹಾಗೂ ಅವರ ತಂದೆ–ತಾಯಿಯರ ಸಮಾಧಿ ಎನ್ನಲಾದ ಸ್ಥಳ ಇದೆ.

ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆಯ ಪ್ರವೇಶದ್ವಾರವನ್ನು ಸಿಂಗರಿಸಿರುವುದು
ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆಯ ಪ್ರವೇಶದ್ವಾರವನ್ನು ಸಿಂಗರಿಸಿರುವುದು
ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆಯ ಪ್ರವೇಶದ್ವಾರವನ್ನು ಸಿಂಗರಿಸಿರುವುದು
ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆಯ ಪ್ರವೇಶದ್ವಾರವನ್ನು ಸಿಂಗರಿಸಿರುವುದು
ಪುರಾತತ್ವ ಇಲಾಖೆಯಿಂದ ಸಾಕಷ್ಟು ಸಂಶೋಧನೆಗಳು ನಡೆಯಬೇಕಿದೆ. ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಕ್ಷೇತ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು.
ಎನ್.‌ಕೆ. ರವಿಕುಮಾರ್‌ ಸಂಚಾಲಕ ದೇವಾಲಯ ಧರ್ಮದರ್ಶಿ ಸಮಿತಿ
ದಶರಥ ರಾಮೇಶ್ವರಸ್ವಾಮಿಯ ಭವಿಷ್ಯ ನಿಜವಾಗುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇಲ್ಲಿ ಗಂಗಾಪೂಜೆಗಾಗಿ ಸುತ್ತಲಿನ ಭಕ್ತರು ಬರುತ್ತಾರೆ. ಈ ಪವಿತ್ರ ಜಲವನ್ನು ಮನೆಗೆ ಕೊಂಡೊಯ್ಯುತ್ತಾರೆ.
ನಾಗರಾಜ್‌ ಓಣಿಮನೆ ಗುಡ್ಡದನೇರಲಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT