ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರನಕಣಿವೆಯ ಕಾಡುಗೊಲ್ಲರ ಆರಾಧ್ಯದೈವ | ಅ.6ರಂದು ರಂಗನಾಥಸ್ವಾಮಿ ಅಂಬಿನೋತ್ಸವ

Last Updated 29 ಸೆಪ್ಟೆಂಬರ್ 2022, 3:24 IST
ಅಕ್ಷರ ಗಾತ್ರ

ಹಿರಿಯೂರು:ತಾಲ್ಲೂಕಿನ ಮಾರಿಕಣಿವೆ ಸಮೀಪದಹಾರನಕಣಿವೆ ಪ್ರದೇಶದಲ್ಲಿರುವ ಕಾಡುಗೊಲ್ಲರ ಆರಾಧ್ಯದೈವ ಶ್ರೀರಂಗನಾಥಸ್ವಾಮಿ ಅಂಬಿನೋತ್ಸವ ಅಕ್ಟೋಬರ್ 6ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ.

ಸೆಪ್ಟೆಂಬರ್‌ 5ರಿಂದ ಸೆ.8 ರವರೆಗೆ ಅಂಬಿನೋತ್ಸವ ನಡೆಯಲಿದ್ದು, ಸೆ. 5ರಂದು ಗಂಗಾಸ್ನಾನ ಮತ್ತು ಕುದುರೆ ಪೂಜೆ, ಸೆ. 6ರಂದು ಬೆಳಿಗ್ಗೆ 8ಕ್ಕೆ ಹೊಸದುರ್ಗ ತಾಲ್ಲೂಕಿನ ಅಂಚಿಬಾರಿ ಹಟ್ಟಿಯಿಂದ ಹೊರಡುವ ದೇವರ ಮೆರವಣಿಗೆ ಹಾರನಕಣಿವೆಗೆ ಬರಲಿದೆ. ಬೆಳಿಗ್ಗೆ 10ಕ್ಕೆ ಅಂಬಿನೋತ್ಸವ, ಬನ್ನಿಮುಡಿಯುವುದು, ಸಂಜೆ 6 ಕ್ಕೆ ಅಂಚಿಬಾರಿ ಹಟ್ಟಿ ಕಡೆಗೆ ಮೆರವಣಿಗೆ ನಡೆಯಲಿದೆ. ಸೆ. 7ರಂದು ರಾತ್ರಿ 9 ಕ್ಕೆಅಂಚಿಬಾರಿಹಟ್ಟಿಯಲ್ಲಿ ಮಂಗಳಾರತಿ, ಸೆ. 8ರಂದು ಭಕ್ತರಿಂದ ದಾಸೋಹ, ಹೂವಿನ ಪಲ್ಲಕ್ಕಿ ಮತ್ತು ಮದಾಲಸೆ ಪೂಜೆ ನಡೆಯಲಿದೆ.

ರಂಗನಾಥಸ್ವಾಮಿಯ ಉತ್ಸವ ಮೂರ್ತಿ ಅಂಚಿಬಾರಿ ಹಟ್ಟಿ ಗ್ರಾಮದಲ್ಲಿದೆ. ಉತ್ಸವ ಮೂರ್ತಿಯನ್ನು ಹಾರನಕಣಿವೆ ಕ್ಷೇತ್ರಕ್ಕೆ ತರಲಾಗುತ್ತದೆ. ಉತ್ಸವ ಮೂರ್ತಿಯು ಶಿಲಾಮೂರ್ತಿಯ ದರ್ಶನ ಪಡೆದ ನಂತರ ಪಟ್ಟದ ಪೂಜಾರಿ ಎದೆಗೆ ಏರಿಸಿದ ಬಿಲ್ಲಿನಿಂದ ಬನ್ನಿ ಮರಕ್ಕೆ ಕಟ್ಟಿದ ಬಾಳೆ ದಿಂಡಿಗೆ ಬಾಣ ಹೊಡೆಯುವ ಮೂಲಕ ಅಂಬಿನೋತ್ಸವ ಮುಗಿಯುತ್ತದೆ. ಸಂಜೆ ಉತ್ಸವಮೂರ್ತಿ ಅಂಚಿಬಾರಿ ಹಟ್ಟಿಗೆ ತೆರಳುತ್ತದೆ.

ಶಿವ–ವಿಷ್ಣುವಿಗೆ ಮೊದಲ ಪೂಜೆ:ಇಲ್ಲಿ ಹರಿಹರರು ನೆಲೆಸಿದ್ದರಿಂದ ಕ್ಷೇತ್ರಕ್ಕೆ ‘ಹಾರನಕಣಿವೆ’ ಎಂಬ ಹೆಸರು ಬಂದಿದೆ ಎಂದು ಹಿರಿಯರು ಹೇಳುತ್ತಾರೆ. ಅಂಬಿನೋತ್ಸವದಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ.

ರಂಗನಾಥಸ್ವಾಮಿ ದೇಗುಲ ‌ಹಿರಿಯೂರು ಹಾಗೂ ಹೊಸದುರ್ಗತಾಲ್ಲೂಕಿನ ಗಡಿಯಲ್ಲಿದೆ.ಸ್ವಾಮಿಯ ಆಕರ್ಷಕ ಶಿಲಾಮೂರ್ತಿ ಐದೂವರೆ ಅಡಿ ಎತ್ತರವಿದೆ.

ಜಾತ್ರೆಗೆ ತುಮಕೂರು, ಬಳ್ಳಾರಿ, ದಾವಣಗೆರೆ, ಆಂಧ್ರಪ್ರದೇಶ, ತಮಿಳುನಾಡುಗಳಿಂದ ಲಕ್ಷಾಂತರ ಭಕ್ತರು ಎತ್ತಿನ ಗಾಡಿಗಳಲ್ಲಿ ಬರುತ್ತಾರೆ. ದವನ, ಮಂಡಕ್ಕಿ, ಬಾಳೆಹಣ್ಣು, ಹೂವು, ಲೋಹದ ಹಾವು-ಚೇಳನ್ನು ಅರ್ಪಿಸುವುದು ವಾಡಿಕೆ. ಚರ್ಮರೋಗ ಸಂಬಂಧ ಕಾಯಿಲೆ ಇರುವವರು, ಹಾವು ಚೇಳಿನ ಭಯ ಇರುವವರು ಸ್ವಾಮಿಗೆ ಲೋಹದ ಹಾವು–ಚೇಳು ಅರ್ಪಿಸಿದರೆ ಕಾಯಿಲೆ ಹಾಗೂ ಭಯ ನಿವಾರಣೆ ಆಗುತ್ತದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ತೊಂದರೆಯಾಗುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT