ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಗೌರಸಮುದ್ರಕ್ಕೆ ಬೇಕಿದೆ ಆರೋಗ್ಯ ಕೇಂದ್ರ

ಸೀಮಾಂಧ್ರ ಗಡಿಯ ಗ್ರಾಮಸ್ಥರಿಗೆ ತುರ್ತು ಚಿಕಿತ್ಸೆ ಮರೀಚಿಕೆ
Published 19 ಫೆಬ್ರುವರಿ 2024, 6:35 IST
Last Updated 19 ಫೆಬ್ರುವರಿ 2024, 6:35 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಆಂಧ್ರದ ಗಡಿಯಲ್ಲಿರುವ ಸಮೀಪದ ಗೌರಸಮುದ್ರ ಗ್ರಾಮವು ಧಾರ್ಮಿಕ ಕೇಂದ್ರವೂ ಆಗಿದ್ದು, ಸುತ್ತಮುತ್ತಲಿನ ಅನೇಕ ಕುಗ್ರಾಮಗಳಿಗೆ ಕೇಂದ್ರ ಸ್ಥಳವೂ ಆಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸಮರ್ಪಕ ಆರೋಗ್ಯ ಕೇಂದ್ರ ಆರಂಭಿಸುವ ಅಗತ್ಯವಿದೆ. ಈ ಕುರಿತು ಅನೇಕ ಬಾರಿ ಮನವಿ ಮಾಡಿದರೂ ಸರ್ಕಾರ ಮನಸು ಮಾಡುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

ಶಕ್ತಿದೇವತೆ ‘ಗೌಸಂದ್ರ ಮಾರಮ್ಮದೇವಿ’ಯ ಮೂಲವೆಂದು ಈ ಗ್ರಾಮವು ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿದೆ. ಇಲ್ಲಿ ಪ್ರತಿವರ್ಷ ನಡೆಯುವ ದೊಡ್ಡ ಮತ್ತು ಮರಿ ಪರಿಷೆಗಳು ಚಿತ್ರದುರ್ಗ ಜಿಲ್ಲೆಯಲ್ಲಿನ ದೊಡ್ಡ ಜಾತ್ರೆಗಳ ಪೈಕಿ ಒಂದಾಗಿದೆ.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಜತೆಗೆ ನೂರಾರು ಭಕ್ತರು ರಾತ್ರಿ ತಂಗುತ್ತಾರೆ. ಗೌರಸಮುದ್ರ ಸೀಮಾಂಧ್ರ ಗಡಿಯಿಂದ ಕೇವಲ 2 ಕಿ.ಮೀ. ದೂರದಲ್ಲಿದ್ದು, ಗ್ರಾಮಪಂಚಾಯಿತಿ ಕೇಂದ್ರಸ್ಥಳವಾಗಿದೆ.

ಮಲ್ಲಸಮುದ್ರ, ಹನುಮಂತನಹಳ್ಳಿ, ಘಟಪರ್ತಿ, ಬುಕ್ಕಾಂಬುದಿ, ಪಾಲನಾಯಕನ ಕೋಟೆ, ಓಬಣ್ಣಹಳ್ಳಿ, ಬೆಲ್ಲದಾರಹಟ್ಟಿ, ದೇವರಹಳ್ಳಿ, ಹೊಸೂರು ಸೇರಿದಂತೆ ಹಲವು ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿದೆ. ಇಲ್ಲಿನ ಜನರು ಚಿಕಿತ್ಸೆಗಾಗಿ ದೂರದ ಬೇಡರೆಡ್ಡಿಹಳ್ಳಿ, ತಳಕು ಅಥವಾ ಚಳ್ಳಕೆರೆಗೆ ಹೋಗಬೇಕಿದೆ ಎಂದು ಗ್ರಾಮದ ನಿವಾಸಿ ಶಶಿಕುಮಾರ್ ಹೇಳಿದರು.

‘ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರವಿದ್ದು, ಒಬ್ಬ ಸ್ಟಾಫ್ ನರ್ಸ್ ಮಾತ್ರ ಇದ್ದಾರೆ. ರಾತ್ರಿ ವೇಳೆ ತುರ್ತು ಚಿಕಿತ್ಸೆ ಸಿಗುವುದಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನಾರೋಗ್ಯ ಉಂಟಾದರೆ, ‘ದೇವರೇ ಗತಿ’ ಎನ್ನುವ ಸ್ಥಿತಿಯಿದೆ. ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಗ್ರಾಮ ಪಂಚಾಯಿತಿಯಿಂದ ಹಲವು ಸಲ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಮಾಡಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ತಿಂಗಳು ಪಂಚಾಯಿತಿಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಗ್ರಾ.ಪಂ. ಅಧ್ಯಕ್ಷ ಎಂ. ಓಬಣ್ಣ ತಿಳಿಸಿದರು.

ಗೌರಸಮುದ್ರದಲ್ಲಿ ಆರೋಗ್ಯ ಕೇಂದ್ರದ ಅವಶ್ಯಕತೆ ಇರುವ ವಿಷಯ ಗಮನಕ್ಕೆ ಬಂದಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಭರವಸೆ ನೀಡಿದರು.

‘ಗೌರಸಮುದ್ರಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ರೋಗಿಗಳು, ಗರ್ಭಿಣಿಯರು ಚಿಕಿತ್ಸೆಗೆ ಹೋಗಿ ಬರಲು ಬಸ್‌ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಜಾತ್ರೆ ಸಮಯದಲ್ಲಿ ಮಾತ್ರ ಇಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತದೆ. ನಂತರ ಆರೋಗ್ಯ ಇಲಾಖೆಗೆ ಗ್ರಾಮದ ನೆನಪು ಆಗುವುದಿರುವುದು ವಿಪರ್ಯಾಸ’ ಎಂದು ದೇವಸ್ಥಾನ ಸಮಿತಿ ಮಾಜಿ ಸದಸ್ಯ ಎಂ. ಚಂದ್ರಣ್ಣ ಟೀಕಿಸಿದರು.

ಎಂ.ಓಬಣ್ಣ
ಎಂ.ಓಬಣ್ಣ
ಆಸ್ಪತ್ರೆ ಆರಂಭಕ್ಕೆ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಸ್ಥಳ ನೀಡಲು ಗ್ರಾಮ ಪಂಚಾಯಿತಿ ಸಿದ್ಧವಿದೆ.
–ಎಂ. ಓಬಣ್ಣ ಅಧ್ಯಕ್ಷ ಗೌರಸಮುದ್ರ ಗ್ರಾಮ ಪಂಚಾಯಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT