ಮೊಳಕಾಲ್ಮುರು: ಮುಖ್ಯಶಿಕ್ಷಕ, ಸಹ ಶಿಕ್ಷಕರ ಮಧ್ಯೆ ಸಾಮರಸ್ಯ ಕೊರತೆ, ಮುಖ್ಯಶಿಕ್ಷಕರಿಗೇ ಬೆದರಿಸುವ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ, ಸ್ವಚ್ಛತೆ ಕಾಣದ ಅಡುಗೆ ಕೋಣೆ, ಕೊಳೆತ ಸ್ಥಿತಿಯಲ್ಲಿನ ತರಕಾರಿಗಳು, ಚಾವಣಿಯಲ್ಲಿ ನೇತಾಡುವ ವಿದ್ಯುತ್ ದೀಪಗಳು...
– ಇದು ತಾಲ್ಲೂಕಿನ ದೇವಸಮುದ್ರ ಇಂದಿರಾಗಾಂಧಿ ವಸತಿ ಶಾಲೆಗೆ ಶುಕ್ರವಾರ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ತೆರಳಿದ್ದ ವೇಳೆ ಕಂಡುಬಂದ ಚಿತ್ರಣ.
‘ಸಿಬ್ಬಂದಿ ಪರಸ್ಪರ ಬೈಯುವ, ಜಗಳವಾಡುವ ವಿಡಿಯೊಗಳು ಸಾರ್ವಜನಿಕವಾಗಿ ಹರಿದಾಡುತ್ತಿವೆ. ಇದು ಸರ್ಕಾರವು ಹೆಮ್ಮೆಯಿಂದ ಹೇಳಿಕೊಳ್ಳುವ ವಸತಿ ಶಾಲೆ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ. ಇಲಾಖೆ ಹಂತದಲ್ಲಿ ಬಗೆಹರಿಯಬೇಕಾದ ಇದು ತಾರಕಕ್ಕೇರುತ್ತಿರುವ ಕಾರಣ ನಾನು ಬಂದು ಪರಿಶೀಲಿಸಿದ್ದೇನೆ. ವರ್ತನೆ ತಿದ್ದಿಕೊಳ್ಳಲು ಕೊನೆ ಅವಕಾಶ ನೀಡುತ್ತಿದ್ದು, ಸರಿಪಡಿಸಿಕೊಳ್ಳದಿದ್ದಲ್ಲಿ ನನ್ನ ಹಂತದಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
‘250 ವಿದ್ಯಾರ್ಥಿಗನ್ನು ಹೊಂದಿರುವ ಈ ಶಾಲೆಗೆ ಸಿಬ್ಬಂದಿ ಮತ್ತು ಅಡುಗೆ ಸಾಮಗ್ರಿ ಸರಬರಾಜು ಗುತ್ತಿಗೆಯನ್ನು ಬೈಲಹೊಂಗಲದ ಸಂಸ್ಥೆಗೆ ನೀಡಲಾಗಿದೆ. ಅವರು ಭೇಟಿ ಮಾಡುವುದಿಲ್ಲ. ಜತೆಗೆ ಹಣ ಪಡೆದಿದ್ದಕ್ಕೆ ರಶೀದಿಗಳನ್ನು ನೀಡುತ್ತಿಲ್ಲ’ ಎಂದು ಮುಖ್ಯಶಿಕ್ಷಕ ನಾಗೇಂದ್ರ ಹೇಳಿದರು.
ಸ್ಥಳೀಯ ಸಂಸ್ಥೆಗಳಿಗೆ ಗುತ್ತಿಗೆ ನೀಡುವಂತೆ ಮನವಿ ಮಾಡಲಾಗುವುದು. ಈ ಸಂಸ್ಥೆಯ ಗುತ್ತಿಗೆಯನ್ನು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ನಂತರ ವಸತಿ ನಿಲಯವನ್ನು ಪರಿಶೀಲಿಸಿದರು.
ಜೋತು ಬಿದ್ದಿದ್ದ ವಿದ್ಯುತ್ ದೀಪಗಳನ್ನು ಸರಿಪಡಿಸುವಂತೆ, ಮಂಚಗಳಿಗೆ ರಾಡ್ ಹಾಕಿಸಲು, ಸಮರ್ಪಕವಾಗಿ ಔಷಧಿ ವಿತರಿಸಲು, ಆವರಣದಲ್ಲಿ ಸಸಿಗಳನ್ನು ಹಾಕಿಸಲು ಸೂಚಿಸಿದರು.
ಅಡುಗೆ ಕೋಣೆ ಪರಿಶೀಲನೆ ವೇಳೆ ನೊಣ, ಗುಂಡಾಡಿಗಳು ತರಕಾರಿಗಳ ಮೇಲೆ ಕುಳಿತಿದ್ದವು. ಊಟದ ಸಭಾಂಗಣದಲ್ಲಿ ಸ್ವಚ್ಛತೆ ಇಲ್ಲದಿರುವುದಕ್ಕೆ, ಅಕ್ಕಿ ಮುಗ್ಗು ಬಂದಿರುವುದಕ್ಕೆ, ಸ್ವಚ್ಛತೆ ಮರೀಚಿಕೆಯಾಗಿರುವುದಕ್ಕೆ ವಾರ್ಡನ್ ಅನ್ನು ತರಾಟೆಗೆ ತೆಗೆದುಕೊಂಡರು.
‘ತಕ್ಷಣವೇ ಗುತ್ತಿಗೆದಾರರನ್ನು ಕರೆಯಿಸಿ ಸಿಬ್ಬಂದಿಯಿಂದ ₹ 20 ಚಾಪಾ ಕಾಗದದ ಮೇಲೆ ಲಿಖಿತ ಹೇಳಿಕೆಯನ್ನು ಪಡೆಯಬೇಕು’ ಎಂದು ಶಾಸಕರು ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ನಿರೀಕ್ಷಕ ಶಿವಕುಮಾರ್, ತಹಶೀಲ್ದಾರ್ ಎಂ.ವಿ. ರೂಪಾ, ಎಸ್‌ಟಿ ಅಧಿಕಾರಿ ಚಿದಾನಂದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕುಮಾರಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.