ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಭೀಮನಕೆರೆ ಒತ್ತುವರಿ ತೆರವು

Last Updated 29 ಜುಲೈ 2021, 4:14 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಹೋಬಳಿಯ ಭೀಮನಕೆರೆ ಒತ್ತುವರಿಯನ್ನು ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳು ತೆರವುಗೊಳಿಸಿದರು.

ನಾಯಕನಹಟ್ಟಿ ಹೋಬಳಿಯ ಭೀಮನಕೆರೆ ಗ್ರಾಮದ ಕೆರೆಯನ್ನು ರೈತರು ತಮ್ಮ ಜಮೀನಿಗೆ ಹೊಂದಿಕೊಂಡಂತೆ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದರು. ಇನ್ನು ಕೆಲ ರೈತರು ಕೆರೆಯಲ್ಲಿಯೇ ಕೊಳವೆಬಾವಿಯನ್ನು ಕೊರೆಯಿಸಿ ಅಲ್ಲೇ ಬೆಳೆಯನ್ನು ಬೆಳೆಯಲು ಮುಂದಾಗಿದ್ದರು. ಬೃಹತ್ ಬದುಗಳನ್ನು ನಿರ್ಮಿಸಿಕೊಂಡಿದ್ದರು. ಪರಿಣಾಮ ಮಳೆಗಾಲದಲ್ಲಿ ಬೀಳುತ್ತಿದ್ದ ಅಲ್ಪಸ್ವಲ್ಪ ಮಳೆಯ ನೀರು ಕೆರೆಯಲ್ಲಿ ಸಂಗ್ರಹವಾಗುವ ಬದಲು ಜಮೀನುಗಳಲ್ಲಿ ಸಂಗ್ರಹವಾಗುತ್ತಿದ್ದವು. ಇದರಿಂದ ನೀರು ಬೇಗ ಆವಿಯಾಗುತ್ತಿತ್ತು. ಇದರಿಂದ ಗ್ರಾಮದಲ್ಲಿರುವ ಬಹುತೇಕ ಕೊಳವೆಬಾವಿಗಳಿಗೆ ಅಂತರ್ಜಲದ ಕೊರತೆಯಾಗಿ ಕೊಳವೆಬಾವಿಗಳು ಬತ್ತಿಹೋಗಿದ್ದವು. ಸಾರ್ವಜನಿಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಕೆರೆಯ ಒತ್ತುವರಿಯನ್ನು ತೆರವುಗೊಳಿಸಲು ಹಲವು ಬಾರಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು.

‘ಗ್ರಾಮಸ್ಥರ ಅಹವಾಲು ಮತ್ತು ದೂರನ್ನು ಸ್ವೀಕರಿಸಿ ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಒತ್ತುವರಿ ಮಾಡಿಕೊಂಡಿದ್ದ ರೈತರಿಗೆ ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದೆವು. ಆದರೂ ಕೆಲ ರೈತರು ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಅಲ್ಲಿಯೇ ಉಳುಮೆ ಕಾರ್ಯ ಕೈಗೊಂಡಿದ್ದರು. ಆದರೆ ಬುಧವಾರ ಕಂದಾಯ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ಎಲ್ಲ ರೈತರಿಗೆ ಕೆರೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು, 20 ಎಕರೆಯಷ್ಟು ಕೆರೆ ಒತ್ತುವರಿ‌ ತೆರವುಗೊಳಿಸಿದೆವು’ ಎಂದು ಕಂದಾಯ ನಿರೀಕ್ಷಕ ಆರ್.ಚೇತನ್‌ ಕುಮಾರ್ ಹೇಳಿದರು.

ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ತಿಪ್ಪೇರುದ್ರಪ್ಪ, ರವಿ, ಸರ್ವೆ ಅಧಿಕಾರಿ ಪ್ರಸನ್ನ, ಎಎಸ್‌ಐ.ನಾಗರಾಜ್, ಗ್ರಾಮ ಲೆಕ್ಕಾಧಿಕಾರಿ ಶರಣುಬಸವ, ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT