ಮಂಗಳವಾರ, ಫೆಬ್ರವರಿ 25, 2020
19 °C
ಜನಸ್ಪಂದನಾ ಸಭೆಯಲ್ಲಿ ಸಿ.ಕೆ.ಪುರ ಬಡಾವಣೆಯ ಕೆಲ ನಿವಾಸಿಗಳಿಂದ ಜಿಲ್ಲಾಧಿಕಾರಿಗೆ ಮನವಿ

ರಸ್ತೆ ವಿಸ್ತರಣೆ; ತಾರತಮ್ಯ ನಿವಾರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಚಳ್ಳಕೆರೆ ಗೇಟ್‌ನಿಂದ ಗಾಂಧಿ ವೃತ್ತದವರೆಗೂ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ವಿಸ್ತರಣೆಯಲ್ಲಿನ ತಾರತಮ್ಯ ನಿವಾರಿಸಬೇಕು ಎಂದು ಸಿ.ಕೆ. ಪುರ ಬಡಾವಣೆಯ ಕೆಲ ನಿವಾಸಿಗಳು ಶನಿವಾರ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

ಇಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದ ನಿವಾಸಿಗಳು, ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗೆ ಹದಿನೈದು ಮೀಟರ್ ಅಗಲ ನಿಗದಿ ಮಾಡಲಾಗಿದೆ. ಆದರೆ, ಇಲ್ಲಿಂದ ಮುಂದಿನ ಗಾಂಧಿ ವೃತ್ತದವರೆಗಿನ ಕಾಮಗಾರಿಗೆ 13 ಮೀಟರ್ ನಿಗದಿ ಪಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಿಂದೆ ಚಳ್ಳಕೆರೆ ಗೇಟ್‌ನಿಂದ ಮುರುಘಾಮಠದವರೆಗೂ ರಾಷ್ಟ್ರೀಯ ಹೆದ್ದಾರಿ ಇತ್ತು. ಅಲ್ಲದೆ, ಈ ಹಿಂದೆ ಸಿಮೆಂಟ್‌ ರಸ್ತೆ ನಿರ್ಮಾಣ ಸಂಬಂಧ ಆ ಸಂದರ್ಭದಲ್ಲಿ ಒಂದೇ ಮಾನದಂಡ ಅನುಸರಿಸಲಾಗಿತ್ತು. ಆದರೆ, ಈಗ ಏಕೆ ತಾರತಮ್ಯ ಮಾಡಲಾಗುತ್ತಿದೆ. ಜಿಲ್ಲೆಗೆ ನೀವೆ ಬಹುಮುಖ್ಯ ಅಧಿಕಾರಿ ಆಗಿರುವ ಕಾರಣ ಉಂಟಾಗಿರುವ ತಾರತಮ್ಯ ನಿವಾರಿಸಿ ಎಂದು ಕೋರಿದರು. ನಿಮಗೆ ಅನ್ಯಾಯವಾಗಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ. ಅಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಡಿಸಿ ಪ್ರತಿಕ್ರಿಯಿಸಿದರು.

ಸಲ್ಲಿಕೆಯಾದ 38 ಅರ್ಜಿ: ಕೆರೆಗಳನ್ನು ಅಭಿವೃದ್ಧಿಗೊಳಿಸಿ, ಅವುಗಳ ಒತ್ತುವರಿ ತೆರವುಗೊಳಿಸಿ, ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಘಟಕದಿಂದ ಹೊಸ ಬಸ್‌ಗಳನ್ನು ರಸ್ತೆಗಿಳಿಸಿ, ಅರ್ಹರಿಗೆ ಬಗರ್‌ಹುಕುಂ ಹಕ್ಕುಪತ್ರ ನೀಡಿ, ಪಾಳು ಬಿದ್ದ ಕಟ್ಟಡ, ಅಕ್ರಮವಾಗಿ ನಿರ್ಮಿಸಿಕೊಂಡ ಶೌಚಾಲಯ, ಚರಂಡಿಗಳನ್ನು ತೆರವುಗೊಳಿಸಿ.. ಹೀಗೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಸುಮಾರು 38 ಅರ್ಜಿಗಳು ಸಲ್ಲಿಕೆಯಾದವು.

ರೈತ ಮುಖಂಡ ಭೂತಯ್ಯ, ‘ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅನೇಕ ರೈತರಿಗೆ ಸಂತಸ ಉಂಟಾಗಿದೆ. ವಿವಿಧೆಡೆ ಶೇಂಗಾ ಬೆಳೆ ಉತ್ತಮವಾಗಿ ಬಂದಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರಿಗೆ ಲಾಭ ದೊರೆಯುವಂತಾಗಬೇಕು. ಸರ್ಕಾರ ಈಗಾಗಲೇ ಶೇಂಗಾಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಅದರ ಅನ್ವಯ, ಜಿಲ್ಲೆಯಲ್ಲಿ ಕೂಡಲೇ ಶೇಂಗಾ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಮನವಿ ಸಲ್ಲಿಸಿದರು.

2018ನೇ ಸಾಲಿನ ಬೆಳೆ ವಿಮೆ ಈವರೆಗೂ ರೈತರ ಕೈ ಸೇರಿಲ್ಲ. ಅಲ್ಲದೆ, ಬೆಳೆ ನಷ್ಟ ಪರಿಹಾರದ ಇನ್‌ಪುಟ್ ಸಬ್ಸಿಡಿ ಮೊತ್ತ ಜಿಲ್ಲೆಯಲ್ಲಿ ಸುಮಾರು ಶೇ 30ರಷ್ಟು ರೈತರಿಗೆ ಪಾವತಿಯಾಗಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಅರ್ಹ ರೈತರಿಗೆ ಇನ್‌ಪುಟ್ ಸಬ್ಸಿಡಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರೊಬ್ಬರು ಅರ್ಜಿ ಸಲ್ಲಿಸಿದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ‘ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಕೇಂದ್ರ ಆರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಡಿ. 2ರಂದು ಸಭೆ ಕರೆಯಲಾಗಿದ್ದು, ಅಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಉಳಿದಂತೆ ಬೆಳೆ ವಿಮೆ ಹಾಗೂ ಇನ್‌ಪುಟ್ ಸಬ್ಸಿಡಿ ಪಾವತಿ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಪಡೆದುಕೊಂಡಿದ್ದು, ವರ್ಗಾಯಿಸುವಂತೆ’, ‘ಬಗರ್ ಹುಕುಂ ಸಾಗುವಳಿ ಪತ್ರ ನೀಡುವಂತೆ’, ‘ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಅಕ್ರಮವಾಗಿ ನಗರಸಭೆಯಲ್ಲಿ ಸರ್ಕಾರಿ ಉದ್ಯೋಗ ಪಡೆದವರ ವಿರುದ್ಧ ಕ್ರಮ’, ‘ಚಳ್ಳಕೆರೆಯಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಶೌಚಾಲಯ ಮತ್ತು ಬಚ್ಚಲು ಗುಂಡಿಗಳ ತೆರವು’, ‘ಚರಂಡಿ ನಿರ್ಮಾಣ’, ‘ಚಿತ್ರದುರ್ಗದಲ್ಲಿ ಪಾಳು ಬಿದ್ದಿರುವ ಕಟ್ಟಡಗಳ ತೆರವು’, ‘ಸ್ವಯಂ ಉದ್ಯೋಗಕ್ಕಾಗಿ ಗ್ರಾಮೀಣ ಬ್ಯಾಂಕ್‌ನಲ್ಲಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿ’ ಎಂದು ನಾಗರಿಕರು ಮನವಿ ಸಲ್ಲಿಸಿದರು.

ವೆಂಕಟೇಶ್ವರ ಸ್ವಾಮಿ ದೇಗುಲ ಸಮಿತಿಯ ಸದಸ್ಯರು ಹಿರೇಹಳ್ಳಿ ಗೊಲ್ಲರ ಕಪಿಲೆಯ ವೆಂಕಟೇಶ್ವರ ಸ್ವಾಮಿ ದೇಗುಲ ಸ್ಥಳಕ್ಕೆ ಅನುದಾನ ಬಿಡುಗಡೆಗೊಳಿಸಲು, ಬೆಳೆಸಾಲ ಮನ್ನಾ ಯೋಜನೆ ಸಮರ್ಪಕ ಅನುಷ್ಠಾನ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಸಂದಾಯ ಮಾಡುವಂತೆ, ಸಾಗುವಳಿ ಮಾಡುತ್ತಿರುವ ಜಮೀನು ಮಂಜೂರಾತಿ, ಮನೆ ನಿರ್ಮಾಣಕ್ಕೆ ಮರಳು ಪೂರೈಕೆ, ಖಾತೆ ಬದಲಾವಣೆ, ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ಅನುದಾನ, ವಸತಿ ಸೌಲಭ್ಯಕ್ಕಾಗಿ ಇದೇ ಸಂದರ್ಭದಲ್ಲಿ ಕೆಲವರು ಮನವಿ ಸಲ್ಲಿಸಿದರು.

ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲು ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು