ಮಂಗಳವಾರ, ಸೆಪ್ಟೆಂಬರ್ 21, 2021
27 °C
ಸಂಗನಹಳ್ಳಿ ಕೆರೆಗೆ ಹೋಗುವ ಹಳ್ಳ: ಒತ್ತುವರಿ ತೆರವುಗೊಳಿಸಲು ರೈತರ ಆಗ್ರಹ

ಹಳ್ಳ ಒತ್ತುವರಿ: ಜಮೀನಿಗೆ ನುಗ್ಗುತ್ತಿದೆ ನೀರು

ನಾಡಿಗೇರ್‌ ಭರಮಸಾಗರ Updated:

ಅಕ್ಷರ ಗಾತ್ರ : | |

Prajavani

ಭರಮಸಾಗರ: ಹೋಬಳಿಯ ಯಳಗೋಡು ಗ್ರಾಮದ ಸ.ನಂ.65 ಪಿ ವ್ಯಾಪ್ತಿಯ ಗುಹೇಶ್ವರನ ಗುಡ್ಡದಿಂದ ಸಂಗನಹಳ್ಳಿ ಕೆರೆಗೆ ಹೋಗುವ ಹಳ್ಳ ಒತ್ತುವರಿಯಾಗಿ ಹಳ್ಳದ ನೀರು ರೈತರ ಜಮೀನುಗಳಿಗೆ ಹರಿಯುತ್ತಿದೆ. ಇದರಿಂದ ಪ್ರತಿ ವರ್ಷ ಬೆಳೆ ಹಾನಿಯಾಗುತ್ತಿದೆ. ಕೂಡಲೇ ಹಳ್ಳದ ಒತ್ತುವರಿ ತೆರವುಗೊಳಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಹಳ್ಳವು ಒತ್ತುವರಿಯಾಗಿ ಸಂಪೂರ್ಣ ಮುಚ್ಚಿಹೋಗಿರುವುದರಿಂದ ಸ್ವಲ್ಪ ಮಳೆ ಬಂದರೂ ಎತ್ತರದ ಪ್ರದೇಶದಿಂದ ನೀರು ಜಮೀನಿಗೆ ಹರಿಯುತ್ತದೆ. 500 ಎಕರೆ ಜಮೀನುಗಳಿಗೆ ಕಳೆದ 25 ವರ್ಷಗಳಿಂದ ನೀರು ಹರಿದು ಮೆಕ್ಕೆಜೋಳ, ಈರುಳ್ಳಿ ಹಾಗೂ ತರಕಾರಿ ಬೆಳೆಗಳು ನಾಶವಾಗಿ ಅಪಾರ ನಷ್ಟ ಉಂಟಾಗುತ್ತಿದೆ ಎಂದು ರೈತರಾದ ಕಿರಣ್‌ಕುಮಾರ್, ಎಚ್.ಎಸ್.ಮಂಜಣ್ಣ, ವಾಮದೇವಪ್ಪ ದೂರಿದ್ದಾರೆ.

ಈ ಹಿಂದೆ 2017ರಲ್ಲಿಯೂ ಭಾರಿ ಹಾನಿ ಉಂಟಾಗಿದ್ದಾಗ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ ಪರಿಹಾರ ದೊರಕಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಳ್ಳದ ಒತ್ತುವರಿಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿ, ರೈತರಿಗೆ ಆಗುತ್ತಿರುವ ಹಾನಿ ತಪ್ಪಿಸಬೇಕು ಎಂದು ಬಸವರಾಜಪ್ಪ, ಎಚ್.ಎಸ್. ಉಮಾಪತಿ, ನಟರಾಜ ತಿಪ್ಪೇಸ್ವಾಮಿ, ಅಣ್ಣಪ್ಪ ಮನವಿ ಮಾಡಿದ್ದಾರೆ.

‘ಈ ಹಿಂದೆ ಹಳ್ಳ ಒತ್ತುವರಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆವು. ನಂತರ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ತಹಶೀಲ್ದಾರ್‌ಗೆ ಸೂಚಿಸಿದ್ದರು. ಆದರೆ ಈವರೆಗೂ ಕ್ರಮ ಜರುಗಿಸಿಲ್ಲ. ಮುಂದೆ ದೊಡ್ಡ ಮಳೆ ಬಂದರೆ ಜಮೀನು ಸಂಪೂರ್ಣ ಕೆರೆಯಂತಾಗಿ ಬೆಳೆಗಳೆಲ್ಲಾ ನೀರುಪಾಲಾಗುತ್ತವೆ. ಕೂಡಲೇ ಹಳ್ಳದ ಒತ್ತುವರಿ ತೆರವುಗೊಳಿಸಬೇಕು’ ಎಂದು ಹುಲ್ಲೇಹಳ್ ಗ್ರಾಮದ ಸಂತ್ರಸ್ತ ರೈತ ಎಚ್.ಎಸ್. ಮಂಜಣ್ಣ ಒತ್ತಾಯಿಸಿದರು.

...

ಸರ್ಕಾರಿ ಹಳ್ಳ ತೆರವುಗೊಳಿಸಿ ನೀರು ಹರಿಯುವಂತೆ ಮಾಡುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಕೂಡಲೇ ಹಳ್ಳದ ಒತ್ತುವರಿ ತೆರವುಗೊಳಿಸಿ ಮುಚ್ಚಿರುವ ಹಳ್ಳದಲ್ಲಿ ನೀರು ಹರಿಯುವಂತೆ ಮಾಡಬೇಕು.
-ಕಿರಣ್ ಕುಮಾರ್, ರೈತ

...

ಯಳಗೋಡು ಗ್ರಾಮದ ಸರ್ಕಾರಿ ಹಳ್ಳ ಒತ್ತುವರಿಯಾಗಿರುವ ಬಗ್ಗೆ ಮನವಿ ಮೇರೆಗೆ ಸರ್ವೆ ಅಧಿಕಾರಿಗೆ ಅಳತೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ.

-ತಿಪ್ಪೇಸ್ವಾಮಿ, ಕಂದಾಯ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು