ಶುಕ್ರವಾರ, ಆಗಸ್ಟ್ 19, 2022
27 °C
ನಿಜಲಿಂಗಪ್ಪ ಜನ್ಮದಿನಾಚರಣೆಯಲ್ಲಿ ಸ್ಕೌಟ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ

ಜನಾನುರಾಗಿ, ಜನನಾಯಕ ಎಸ್. ನಿಜಲಿಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮುಖ್ಯಮಂತ್ರಿ ಅವಧಿಯಲ್ಲಿ ಜನಾನುರಾಗಿಯಾಗಿ, ಜನಸೇವೆ ಮಾಡಿದ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರು ಎಂದೆಂದಿಗೂ ಜನನಾಯಕರೇ’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ತಾಲ್ಲೂಕಿನ ಸೀಬಾರದ ಎಸ್.ಎನ್‌.ಸ್ಮಾರಕ ಆವರಣದ ಪುಣ್ಯಭೂಮಿಯಲ್ಲಿ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆ ಗುರುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೃಷ್ಣಾ ಮೇಲ್ದಂಡೆ, ಶರಾವತಿ, ಹಾರಂಗಿ, ಕಾಳಿ ಸೇರಿ ನೀರಾವರಿ ಯೋಜನೆ ಹಾಗೂ ಎನ್‌ಜಿಇಎಫ್‌ ಕೈಗಾರಿಕೆ ಒಳಗೊಂಡಂತೆ ಅನೇಕ ಸಂಸ್ಥೆ ಸ್ಥಾಪಿಸಿದರು. ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಿದರು. ಜಾತ್ಯಾತೀತ ನಿಲುವು ಹೊಂದಿದ್ದ ಅವರು, ಮಹಮ್ಮದ್ ಆಲಿಯನ್ನು ಸಚಿವರನ್ನಾಗಿ ಮಾಡಿದರು. ಕಾಂಗ್ರೆಸ್‌ನಲ್ಲಿ ಅತ್ಯುನ್ನತ ಸ್ಥಾನಮಾನ ಗಳಿಸಿದರು ಕೂಡ ದರ್ಪ ತೋರಿಸಲಿಲ್ಲ. ಇಂತಹ ಸತ್ಯನಿಷ್ಠ ರಾಜಕಾರಣಿ ಕುರಿತು ಮಕ್ಕಳು ಮತ್ತು ಯುವಸಮೂಹಕ್ಕೆ ಪರಿಚಯಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ನಿಜಲಿಂಗಪ್ಪ ಅವರು ರಾಷ್ಟ್ರಕಂಡ ಪ್ರಾಮಾಣಿಕ ರಾಜಕಾರಣಿ. ರಾಷ್ಟ್ರಪತಿಯಾಗುವ ಅವಕಾಶ ಸಿಕ್ಕರೂ ಅದನ್ನು ನಿರಾಕರಿಸಿದರು. ಜತೆಯಲ್ಲಿದ್ದ ನೀಲಂ ಸಂಜೀವರೆಡ್ಡಿ ಅವರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ರಾಷ್ಟ್ರಪತಿಯನ್ನಾಗಿ ಮಾಡಿದರು. ಕರ್ನಾಟಕದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ಅವಧಿಯಲ್ಲೇ ಕರ್ನಾಟಕ ಎಂಬುದಾಗಿ ಹೆಸರಿಡಬೇಕು ಎಂಬ ಮಹಾದಾಸೆ ಹೊಂದಿದ್ದರು. ಆದರೆ, ದೇವರಾಜು ಅರಸು ಕಾಲದಲ್ಲಿ ಕೊನೆಗೂ ಇದು ಸಾಧ್ಯವಾಯಿತು’ ಎಂದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಉಪಾಧ್ಯಕ್ಷ ಕೊಂಡಜ್ಜಿ ಷಣ್ಮುಖಪ್ಪ, ‘ಮುಖ್ಯಮಂತ್ರಿಯಾದರೂ ನಿಜಲಿಂಗಪ್ಪ ಸರಳ ಸಜ್ಜನಿಕೆಯಿಂದ ಬದುಕಿದರು. ಊಹೆಗೂ ನಿಲುಕದ ವ್ಯಕ್ತಿತ್ವ ಅವರದ್ದಾಗಿತ್ತು. ಆದರ್ಶಕ್ಕೆ ಮತ್ತೊಂದು ಹೆಸರೇ ನಿಜಲಿಂಗಪ್ಪ ಎಂದರೆ ತಪ್ಪಾಗಲಾರದು’ ಎಂದು ಅಭಿಪ್ರಾಯಪಟ್ಟರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಸ್ಥಾನಿಕ ಮುಖ್ಯಸ್ಥ ಜಿ.ಎಸ್.ಉಜ್ಜಿನಪ್ಪ, ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‌ನ ಎಸ್.ಷಣ್ಮುಖಪ್ಪ, ಡಾ.ರಹಮತ್‌ಉಲ್ಲಾ, ಪ್ರಶಾಂತ್ ಇದ್ದರು.

***

ನಿಜಲಿಂಗಪ್ಪ ಅವರದು ಎಂದೂ ಮರೆಯದ ವ್ಯಕ್ತಿತ್ವ. ಧರ್ಮನಿಷ್ಠೆ ಪ್ರತಿಪಾದಕರಾಗಿ, ಬಸವತತ್ವ ಅನುಯಾಯಿಯಾಗಿ, ನಾಡು-ನುಡಿಗಾಗಿ, ಜನರಿಗಾಗಿ ಶ್ರಮಿಸಿದ ಧೀಮಂತ ನಾಯಕ.

-ಶಿವಮೂರ್ತಿ ಮುರುಘಾ ಶರಣರು, ಮುರುಘಾಮಠ

***

ಯಾರೂ ಎಲ್ಲಿ ಬೇಕಾದರೂ ಸಮಾಧಿಯಾಗಬಹುದು. ಆದರೆ, ನಿಜಲಿಂಗಪ್ಪ ಅವರ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ. ಇಂತಹ ಮಹಾನ್ ನಾಯಕನ ತತ್ವ ಪಾಲಿಸಿದರೆ ನಾಡು ಸಮೃದ್ಧಿಯಾಗಲಿದೆ.

-ಎಚ್. ಹನುಮಂತಪ್ಪ, ಟ್ರಸ್ಟ್‌ನ ಗೌರವ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.