ಸೋಮವಾರ, ಜನವರಿ 18, 2021
27 °C
ಅಯ್ಯಪ್ಪಸ್ವಾಮಿ ದೇಗುಲದಲ್ಲೇ ಇರುಮುಡಿಯೊಂದಿಗೆ ಪಡಿ ಹತ್ತಲು ವ್ಯವಸ್ಥೆ

ಶಬರಿಮಲೆ ಅಯ್ಯಪ್ಪನ ದರ್ಶನ ಮತ್ತಷ್ಟು ಕಠಿಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋಟ್ಯಂತರ ಭಕ್ತರ ಆರಾಧ್ಯ ದೈವ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಭಕ್ತರ ಸಂಖ್ಯೆ ಮಿತಿಗೊಳಿಸಲಾಗಿದೆ. ಕೇರಳಕ್ಕೆ ಪ್ರಯಾಣ ಬೆಳೆಸುವ ಮಾಲಾಧಾರಿಗಳಿಗೆ ಕಲ್ಲು, ಮುಳ್ಳು ಹಾದಿಗಿಂತಲೂ ಈ ಬಾರಿ ಸ್ವಾಮಿಯ ದರ್ಶನ ಕಠಿಣವಾಗಿ ಪರಿಣಮಿಸಿದೆ.

ಕೋವಿಡ್ ಕಾರಣಕ್ಕೆ ಜನಜಂಗುಳಿ ನಿಯಂತ್ರಿಸಲು ಕೇರಳ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ದೇವರ ದರ್ಶನಕ್ಕೆ ಮುಂಗಡವಾಗಿ ಹೆಸರು ನೋಂದಾಯಿಸಬೇಕಿದೆ. ಹೆಸರು ನೋಂದಣಿಗೆ ಭಕ್ತರು ಮುಗಿಬಿದ್ದಿದ್ದು, ಅವಕಾಶ ಸಿಗುವುದು ಕಷ್ಟಕರವಾಗಿದೆ.

ಮಾಲಾಧಾರಿಗಳು ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಹೋಗಬೇಕಿದೆ. ಇನ್ನೂ ಶಬರಿಮಲೆ 30 ಕಿ.ಮೀ ದೂರದಲ್ಲಿದ್ದಾಗ ಪುನಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ಇದ್ದರೆ ಸ್ವಾಮಿಯ ದರ್ಶನ. ಇಲ್ಲದಿದ್ದರೆ, ಕೇರಳದ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕಿದೆ. ಇದು ಭಕ್ತರನ್ನು ಗೊಂದಲಕ್ಕೂ ನೂಕಿದೆ.

ಕೋವಿಡ್ ಕಾರಣಕ್ಕೆ ಪಂಪಾ ನದಿ ಸ್ನಾನ ನಿಷೇಧಿಸಲಾಗಿದೆ. ಪಡಿ ಹೊತ್ತು ಹದಿನೆಂಟು ಮೆಟ್ಟಿಲು ಹತ್ತುವ ಭಕ್ತರು ತುಪ್ಪದ ಕಾಯಿಯನ್ನು ಸ್ವಾಮಿಗೆ ಸಮರ್ಪಿಸುತ್ತಿದ್ದರು. ಅದಕ್ಕೆ ಈ ಬಾರಿ ಅವಕಾಶವಿಲ್ಲ. ಬಹುದೂರದ ಪಯಣದ ಬಳಿಕ ಸರತಿಯಲ್ಲಿ ಸ್ವಾಮಿ ದರ್ಶನ ಪಡೆದವರಿಗೆ ಕೂತು ಸುಧಾರಿಸಿಕೊಳ್ಳಲಿಕ್ಕೂ ಅನುಮತಿ ನೀಡಿಲ್ಲ.

60 ದಿನದ ವ್ರತಾಚರಣೆಯೂ ಈಗಾಗಲೇ ಆರಂಭವಾಗಿದ್ದು, ಮಾಲಾಧಾರಿಗಳು ಶ್ರದ್ಧಾಭಕ್ತಿಯ ಆಚರಣೆಗೆ ಮುಂದಾಗಿದ್ದಾರೆ. ಕೋವಿಡ್‌ನಿಂದಾಗಿ ಈ ಬಾರಿ ಮಾಲಾಧಾರಿಗಳ ಸಂಖ್ಯೆ ಕಡಿಮೆಯಾದಂತೆ ಕಾಣುತ್ತಿದೆ.

‘2018ಕ್ಕೂ ಮುನ್ನ ಇಡೀ ಜಿಲ್ಲೆಯಿಂದ ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ 15 ಸಾವಿರದಿಂದ 18 ಸಾವಿರ ದಾಟುತ್ತಿತ್ತು. ಪ್ರಸಕ್ತ ವರ್ಷ ಈ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಕೇರಳ ಸರ್ಕಾರ ಭಕ್ತರ ಸಂಖ್ಯೆ ಮಿತಿಗೊಳಿಸಿರುವುದೇ ಮುಖ್ಯ ಕಾರಣ’ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ ಅಭಿಪ್ರಾಯಪಟ್ಟಿದೆ.

ಮಾಲಾಧಾರಿಗಳಿಗೆ ಉಂಟಾಗುವ ಅನನುಕೂಲ ಮನಗಂಡು ಅಯ್ಯಪ್ಪಸ್ವಾಮಿ ಸೇವಾ ಸಮಾಜ ‘ಭವನಂ ಸನ್ನಿಧಾನಂ’ ಎಂಬ ಘೋಷವಾಕ್ಯದೊಂದಿಗೆ ಇರುವಲ್ಲೇ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅನುಕೂಲ ಮಾಡಿಕೊಡಲು ಮುಂದಾ ಗಿವೆ.  ಕೇರಳದ ಶಬರಿಮಲೆ ಮಾದರಿಯಲ್ಲೇ ಶಾಸ್ತ್ರೋಕ್ತವಾಗಿ 18 ಮೆಟ್ಟಿಲುಗಳೊಂದಿಗೆ ನಿರ್ಮಾಣ ವಾಗಿರುವ ಅಯ್ಯಪ್ಪನ ದೇಗುಲಗಳಲ್ಲೇ ಸ್ಥಳೀಯ ಮಾಲಾಧಾರಿಗಳು ಹಾಗೂ ಆಯಾ ರಾಜ್ಯದ ವಿವಿಧ ಭಾಗಗಳ ಮಾಲಾಧಾರಿಗಳಿಗೆ ಇರುಮುಡಿಯೊಂದಿಗೆ ಪಡಿ ಹತ್ತಲು ಸೂಕ್ತ ವ್ಯವಸ್ಥೆ ಕಲ್ಪಿಸಿದೆ.

ಶಬರಿಮಲೆ ಯಾತ್ರೆಗೆ ಹೋಗಲು ಸಾಧ್ಯವಾಗದ ಮಾಲಾಧಾರಿಗಳಿಗೆ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿ ದೇಗುಲದಲ್ಲೇ 18 ಮೆಟ್ಟಿಲು (ಪಡಿ) ಹತ್ತಲು 2021ರ ಜ. 15ರವರೆಗೂ ಅವಕಾಶ ಕಲ್ಪಿಸ
ಲಾಗಿದೆ. ಸ್ನಾನಕ್ಕಾಗಿ ಆವರಣದ ಕೆಳಭಾಗದಲ್ಲಿ 18 ಶವರ್‌ಗಳನ್ನು ನಿರ್ಮಿಸಲಾಗಿದೆ.

***

ರಾಜ್ಯದ ಆರು ಕಡೆ ಅವಕಾಶ

ಬೆಂಗಳೂರು ನಗರವೊಂದರಲ್ಲೇ 30ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ದೇಗುಲಗಳಿವೆ. ಆದರೆ, 18 ಮೆಟ್ಟಿಲು ಇರುವ ದೇಗುಲ ಇರುವುದು ಒಂದೇ. ಅದೇ ರೀತಿ ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ, ಬಾಗಲಕೋಟೆ, ನಂಜನಗೂಡಿನಲ್ಲಿ 18 ಮೆಟ್ಟಿಲು ಇರುವ ಸ್ವಾಮಿಯ ದೇಗುಲ ಇವೆ. ಈ ಆರು ಕಡೆ ಪಡಿ ಹತ್ತುವ ಮೂಲಕ ಈ ಬಾರಿಯ ವ್ರತಾಚರಣೆ ಪೂರ್ಣಗೊಳಿಸಬಹುದು ಎಂದು ಅಯ್ಯಪ್ಪಸ್ವಾಮಿ ಸೇವಾ ಸಮಾಜ ಮನವಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು