ಮಂಗಳವಾರ, ಆಗಸ್ಟ್ 9, 2022
20 °C
ಪ್ರತಿವರ್ಷ ಮುಂಗಾರಿನಲ್ಲಿ ಗ್ರಾಮಸ್ಥರಿಗೆ ವಿವಿಧ ಸಸಿ ವಿತರಣೆ

ಶ್ರೀಗಂಧದ ಸಸಿ ವಿತರಿಸಿದ ಸಾಣೇಹಳ್ಳಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿವರ್ಷ ಮುಂಗಾರಿನಲ್ಲಿ ವಿವಿಧ ಸಸಿ ತರಿಸಿ ಗ್ರಾಮಸ್ಥರಿಗೆ, ಭಕ್ತರಿಗೆ, ಆಸಕ್ತರಿಗೆ ವಿತರಿಸುವರು. ಈ ಬಾರಿ ಶುಕ್ರವಾರ ಮನೆಗೊಂದರಂತೆ ಶ್ರೀಗಂಧದ ಸಸಿಗಳನ್ನು ನೀಡಿದರು.

ಈ ಬಾರಿ ಮುಂಗಾರು ಅತ್ಯಂತ ಚುರುಕಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತಲಿದೆ. ಬಿತ್ತನೆಗೆ ಸಕಾಲವಾಗಿರುವಂತೆ ಗಿಡ–ಮರಗಳನ್ನು ನೆಡಲೂ ಸಹ ಅತ್ಯಂತ ಸಕಾಲ. ಪ್ರತಿವರ್ಷದಂತೆ ಈ ವರ್ಷವೂ ಶ್ರೀಮಠದ ಆವರಣ, ಹೊಲ, ತೋಟಗಳಲ್ಲಿ ಶ್ರೀಗಂಧ, ನೇರಲ, ಪೇರಲ, ಮಹಾಘನಿ, ತೆಂಗು, ಅಡಿಕೆ, ಮಾವು, ಬೇವು ಮುಂತಾದ ವೈವಿಧ್ಯಮಯ ಗಿಡಗಳನ್ನು ನೆಡಲಾಗುತ್ತಿದೆ.

ಶ್ರೀಮಠದ ಆವರಣದಲ್ಲಿ ಈ ಹಿಂದೆ ನೆಟ್ಟಿರುವ ನೇರಲ, ಪೇರಲ, ಮಾವು, ಸೀತಾಫಲ, ರಾಮಫಲ, ಲಕ್ಷ್ಮಣಫಲ, ನೆಲ್ಲಿ, ಅಂಜೂರ ಮುಂತಾದ ಮರ–ಗಿಡಗಳು ಫಲಬಿಟ್ಟಿವೆ. ಪರಿಸರ ಪ್ರಿಯರ ಕಣ್ಣಿಗೆ ಹಬ್ಬವಾಗಿರುವಂತೆ ಹಕ್ಕಿಪಕ್ಷಿಗಳು ಹಣ್ಣುಗಳ ಸವಿರುಚಿಯನ್ನು ಸವಿಯುತ್ತಿವೆ. ಮಠದಂತೆ ಮನೆಯಂಗಳ, ಹೊಲ–ಗದ್ದೆಗಳೂ ಹಸಿರಿನಿಂದ ಕಂಗೊಳಿಸಬೇಕು. ಪರಿಸರ ಶುದ್ಧವಾಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಪ್ರತಿವರ್ಷ ವಿವಿಧ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾಣೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ, ಸದಸ್ಯರಾದ ನಾಗಭೂಷಣ್, ಸ್ವಾಮಿ, ಚೇತನ್, ಜಗದೀಶ್ ಪಟೇಲ್, ನಾರಾಯಣಸ್ವಾಮಿ, ಗ್ರಾಮಸ್ಥರಾದ ಪರಮೇಶ್ವರಯ್ಯ, ಚನ್ನಬಸವಯ್ಯ, ಕೃಷ್ಣಪ್ಪ, ಶ್ರೀಮಠದ ಸಿಬ್ಬಂದಿ ವರ್ಗ ಹಾಜರಿದ್ದರು.

ಶ್ರೀಮಠದ ಆವರಣದಲ್ಲಿ ಸಾಂಕೇತಿಕವಾಗಿ ನಾಲ್ಕಾರು ಜನಕ್ಕೆ ಸ್ವಾಮೀಜಿ ಸಸಿ ವಿತರಿಸಿದರು. ನಂತರ ಟ್ರ್ಯಾಕ್ಟರ್‌ನಲ್ಲಿ ಗಂಧದ ಗಿಡಗಳನ್ನು ಇಟ್ಟುಕೊಂಡು ಗ್ರಾಮದ ಪ್ರತಿ ಮನೆಗೂ ತಲುಪಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.