ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋವಿಡ್ ಆತಂಕದಲ್ಲೂ ಸಂಕ್ರಾಂತಿ ಸಂಭ್ರಮ

Last Updated 14 ಜನವರಿ 2022, 6:47 IST
ಅಕ್ಷರ ಗಾತ್ರ

ಚಿತ್ರದುರ್ಗ:ಸೂರ್ಯ ದೇವನ ಆರಾಧನೆಯ ಮಕರ ಸಂಕ್ರಾಂತಿಯನ್ನು ಜ.14 ಅಥವಾ 15 ಈ ಎರಡು ದಿನದಲ್ಲಿ ಯಾವಾಗ ಆಚರಿಸಬೇಕೆಂಬ ಗೊಂದಲದಲ್ಲೇ ಗುರುವಾರ ಹಬ್ಬದ ಖರೀದಿ ಜೋರಾಗಿತ್ತು.

ಇಲ್ಲಿನ ಗಾಂಧಿ ವೃತ್ತ, ಸಂತೆಹೊಂಡ ಹಾಗೂ ಮೇದೆಹಳ್ಳಿ ರಸ್ತೆಯಲ್ಲಿ ಹೂ, ಹಣ್ಣು, ಕಬ್ಬು, ಕಡಲೆ ಕಾಯಿ, ಅವರೆ ಕಾಯಿ, ಗೆಣಸಿನ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಪ್ರಮುಖ ಆಕರ್ಷಣೆಯಾದ ಎಳ್ಳು -ಬೆಲ್ಲ, ಸಕ್ಕರೆ ಅಚ್ಚುಗಳಿಗೆ ಬೇಡಿಕೆ ಹೆಚ್ಚಾಗಿತ್ತು.

ಮಾರುಕಟ್ಟೆಯಲ್ಲಿ ಜೋಡಿ ಕಬ್ಬಿಗೆ ₹ 70 ರಿಂದ 80, ಸೇವಂತಿಗೆ ಒಂದು ಮಾರಿಗೆ ₹ 40 ರಿಂದ 50, ಬಾಳೆಹಣ್ಣು ಕೆಜಿಗೆ ₹ 50, ಸೇಬು ₹ 100 ರಿಂದ 120, ಸಿದ್ಧ ಎಳ್ಳು-ಬೆಲ್ಲ ಕೆ.ಜಿಗೆ ₹ 200-250ಗೆ ಮಾರಾಟ ಮಾಡಲಾಯಿತು. ಉಳಿದಂತೆ ಸಜ್ಜೆ, ಜೋಳದ ರೊಟ್ಟಿ, ಶೇಂಗಾ ಪುಡಿ, ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆ ಬೀಜ, ಹುರಿಗಡಲೆಗಳ ಮಿಶ್ರಣವನ್ನು ಜನತೆ ಖರೀದಿಸಿದ್ದು ಕಂಡು ಬಂದಿತು.

ಜ.14 ಮತ್ತು 15 ಎರಡೂ ದಿನಗಳಲ್ಲಿ ಹಬ್ಬ ಆಚರಣೆಗೆ ಸಮಯವಿದೆ. ಆದರೆ, ವಾರಾಂತ್ಯದ ಕರ್ಫ್ಯೂ ಹಾಗೂ ಶುಕ್ರವಾರವೇ ಧರ್ನುಮಾಸ ಕೊನೆಯಾಗುವುದರಿಂದ ಹಬ್ಬವನ್ನು ಜ.14 ರಂದು ಆಚರಿಸಲು ಬಹುತೇಕರು ನಿರ್ಧರಿಸಿದ್ದಾರೆ. ಈಗಾಗಲೇ, ನಗರದ ದೇವಸ್ಥಾನಗಳಲ್ಲಿ ಪೂಜಾ ಕಾರ್ಯದ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದರು.

ಮೇಲುದುರ್ಗದ ಏಕನಾಥೇಶ್ವರಿ, ಸಂಪಿಗೆ ಸಿದ್ದೇಶ್ವರ, ಗಣಪತಿ, ಹಿಡಂಬೇಶ್ವರ, ಗೋಪಾಲಸ್ವಾಮಿ, ಕೋಟೆ ರಸ್ತೆಯ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ನಗರ ಪೊಲೀಸ್ ಠಾಣೆ ಆವರಣದ ಕಣಿವೆ ಮಾರಮ್ಮ, ಮೇದೆಹಳ್ಳಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ 6 ಕ್ಕೆ ಪೂಜೆಗಳು ಪ್ರಾರಂಭವಾಗಲಿವೆ.

ಕೋವಿಡ್ ಮಾರ್ಗಸೂಚಿಯಂತೆ ಈ ವರ್ಷ ಎಲ್ಲ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮಾಸ್ಕ್ ಧರಿಸಿ, ಅಂತರ ಕಾಯ್ದು ಕೊಂಡು ದೇವರ ದರ್ಶನ ಪಡೆಯಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT