ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಪಾಲಂಕೃತ ವಾಹನದಲ್ಲಿ ಶಿವಮೂರ್ತಿ ಮುರುಘಾ ಶರಣರ ಮೆರವಣಿಗೆ

Last Updated 15 ಅಕ್ಟೋಬರ್ 2021, 15:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಳೆ ಸುರಿಸುತ್ತಿದ್ದ ಮೋಡಗಳು ಚದುರಿ ನೀಲಿ ಆಗಸದಲ್ಲಿ ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ. ಮೆರವಣಿಗೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರು ಆಗಸದತ್ತ ದಿಟ್ಟಿಸಿದರು. ದೂರದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್‌ ಭುವಿಯ ಸಮೀಪಕ್ಕೆ ಬಂದಿತು. ಶಿವಮೂರ್ತಿ ಮುರುಘಾ ಶರಣರು ಆಸೀನರಾಗಿದ್ದ ಪುಷ್ಪಾಲಂಕೃತ ವಾಹನದ ಮೇಲೆ ಹೂಮಳೆ ಸುರಿಸಿತು.

ಕೋವಿಡ್‌ ಕಾರಣಕ್ಕೆ 2020ರಲ್ಲಿ ಸರಳವಾಗಿ ನಡೆದಿದ್ದ ಶರಣ ಸಂಸ್ಕೃತಿ ಉತ್ಸವ ಪ್ರಸಕ್ತ ವರ್ಷ ವೈಭವಕ್ಕೆ ಮರಳಿದೆ. ಸಾಂಕ್ರಾಮಿಕ ರೋಗದ ಭೀತಿಯಿಂದ ಹೊರಬಂದ ಭಕ್ತರು, ಉತ್ಸವಕ್ಕೆ ಹುಮ್ಮಸ್ಸು ತುಂಬಿದರು. ವಿಜಯದಶಮಿಯ ದಿನವಾದ ಶುಕ್ರವಾರ ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದಿಂದ ಏಳು ಸುತ್ತಿನ ಕೋಟೆಗೆ ಮೆರವಣಿಗೆ ಮೂಲಕ ಸಾಗಿದರು. ಈ ವೈಭವದ ಮೆರವಣಿಗೆ ದಸರಾ ಮಹೋತ್ಸವವನ್ನು ನೆನಪಿಸುವಂತಿತ್ತು.

ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಬೆಳಿಗ್ಗೆ ಮುರುಗಿ ಶಾಂತವೀರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು. ಅದಾಗಲೇ ಶ್ರೀಮಠದ ಅಂಗಳದಲ್ಲಿ ಸಿಂಗರಿಸಿದ್ದ ಪುಷ್ಪಾಲಂಕೃತ ವಾಹನದ ಕಡೆಗೆ ಸಾಗಿದರು. ಈ ವೇಳೆ ಭಕ್ತರು ಹರ್ಷೋದ್ಘಾರ ಮಾಡಿದರು. ಭಕ್ತರ ಜಯಘೋಷಗಳ ನಡುವೆ ಶರಣರು ಪುಷ್ಪಾಲಂಕೃತ ವಾಹನದಲ್ಲಿ ಆಸೀನರಾದರು.

ಕನಕಪುರದ ಮರಳೆ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಚಮ್ಮಾಳ ಬಾರಿಸುವ ಮೂಲಕ ಜನಪದ ಕಲಾಮೇಳಕ್ಕೆ ಚಾಲನೆ ನೀಡಿದರು. ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೆಬ್ಬಾಳು ವಿರಕ್ತ ಮಠದ ಮಹಾಂತರುದ್ರೇಶ್ವರ ಸ್ವಾಮೀಜಿ, ಉತ್ಸವ ಸಮಿತಿಯ ಕಾರ್ಯಧ್ಯಕ್ಷ ಕೆ.ಎಸ್.ನವೀನ್ ಇದ್ದರು. ಹಲವು ಜಾತಿ–ಧರ್ಮದ ಮುಖಂಡರು, ಭಕ್ತರು ಶರಣರಿಗೆ ಗೌರವ ವಂದನೆ ಸಲ್ಲಿಸಿದರು. ಪುಷ್ಪಾಲಂಕೃತ ವಾಹನದ ಮುಂದೆ ಕಲಾತಂಡಗಳು ಸಾಗಿದವು.

ಮುರುಘಾ ಮಠದಿಂದ ಹೊರಟ ಮೆರವಣಿಗೆ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ನಗರ ಪ್ರವೇಶಿಸಿತು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಮನೆಯ ಮುಂಭಾಗದಲ್ಲಿ ಶರಣರಿಗೆ ಭಕ್ತಿ ಸಮರ್ಪಿಸಿದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗಾಂಧಿ ವೃತ್ತ, ಪ್ರವಾಸಿ ಮಂದಿರ, ಅಂಬೇಡ್ಕರ್‌ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಕೋಟೆಯ ಮೇಲುದುರ್ಗ ತಲುಪಿತು.

ಮೆರವಣಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀಪಕ್ಕೆ ಬರುತ್ತಿದ್ದಂತೆ ವೈಭವ ಪಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಶರಣರನ್ನು ಕಣ್ತುಂಬಿಕೊಂಡರು. ಕಟ್ಟಡ, ಮನೆಯ ಚಾವಣಿ ಏರಿ ಮೆರವಣಿಗೆ ನೋಡಿದರು. ಶರಣರು ಸಾಗುತ್ತಿದ್ದ ಪುಷ್ಪಾಲಂಕೃತ ವಾಹನ ಗಾಂಧಿ ವೃತ್ತಕ್ಕೆ ಬರುವ ಹೊತ್ತಿಗೆ ಸೂರ್ಯನ ಬಿಸಿಲಿನ ಪ್ರಕರತೆ ಹೆಚ್ಚಿತ್ತು. ಆಗಸದಲ್ಲಿ ಸದ್ದು ಮಾಡುತ್ತ ಬಂದ ಹೆಲಿಕಾಪ್ಟರ್‌ ಸಾರ್ವಜನಿಕರ ಗಮನ ಸೆಳೆಯಿತು. ಹಲವು ಸುತ್ತು ಹಾಕಿದ ಹೆಲಿಕಾಪ್ಟರ್‌ ಶರಣರ ಮೇಲೆ ಆಗಸದಿಂದ ಹೂಮಳೆ ಸುರಿಸಿತು. ಆಗ ಭಕ್ತರು ಕರತಾಡನ ಮಾಡಿದರು. ಜೈಕಾರಗಳನ್ನು ಹಾಕಿ ಭಕ್ತಿ ಸಮರ್ಪಿಸಿದರು.

ಕಲಾ ತಂಡಗಳ ಆಕರ್ಷಣೆ

ಶರಣ ಸಂಸ್ಕೃತಿ ಉತ್ಸವ ಜಾನಪದ ಕಲಾಮೇಳಗಳಿಂದ ರಂಗು ಪಡೆಯಿತು. ನಾಡಿನ ಹಲವೆಡೆಯಿಂದ ಬಂದಿದ್ದ ಕಲಾತಂಡಗಳು ಜನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸಿದವು. ಸುಮಾರು ಒಂದೂವರೆ ಕಿ.ಮೀ ವರೆಗೆ ಕಲಾಮೇಳಗಳಿದ್ದವು.

ಉರುಮೆ, ನಾಸಿಕ್ ಡೋಲು, ಪಟ ಕುಣಿತ, ಪೂಜಾಕುಣಿತ, ವೀರಾಗಾಸೆ, ಝಾಂಜ್ ಮೇಳ, ಜಗ್ಗಲಗಿ ಮೇಳ, ನಗಾರಿ, ಝಾಂಜ್ ಪಥಕ, ಹುಲಿವೇಷ ಕುಣಿತ, ಡೊಳ್ಳು, ಕಹಳೆತಂಡ, ನಂದಿ ಧ್ವಜ, ಭೂತಕೋಲ, ಸೋಮನಕುಣಿತ, ಗಾರುಡಿಗೊಂಬೆ, ಕೀಲುಕುದುರೆಗಳು ಆಕರ್ಷಕ ಪ್ರದರ್ಶನ ನೀಡಿದವು. ಅನೇಕರು ಕಲಾಮೇಳ ಹಾಗೂ ಕಲಾವಿದರೊಂದಿಗೆ ಸೆಲ್ಫಿ ಫೋಟೊ ಸೆರೆಹಿಡಿದು ಸಂಭ್ರಮಿಸಿದರು.

ಚಂಡೆ, ಖಾಸಾ ಬೇಡರ ಪಡೆ, ಜಟ್ಟಿ ವೀರಭದ್ರ ಕುಣಿತ, ಯಕ್ಷಗಾನ ಗೊಂಬೆಗಳು, ಭರ್ಜಿ ಕುಣಿತ, ತಪ್ಪಡಿ ಮಹಿಳೆಯರ ತಂಡ, ಚಿನಕೋಲು ಮೇಳ, ಪೋತರಾಜರ ಕುಣಿತ, ಛತ್ರಿ ಕುಣಿತ, ಹರಿಗೆ ಕುಣಿತ, ಮೇಳ ವಾದ್ಯ, ಕತ್ತಿ ಗುರಾಣಿ ಕುಣಿತದ ತಂಡ, ಮೇಳ ವಾದ್ಯ ಬೆಂಕಿ ಕರಗಗಳು ಗಮನ ಸೆಳೆದವು. ಬಿರು ಬಿಸಿಲಿನಲ್ಲಿಯೂ ಹಾಡುತ್ತ–ಕುಣಿಯುತ್ತ ಸಾಗುತ್ತಿದ್ದ ಪರಿಗೆ ಪ್ರೇಕ್ಷಕರು ಮನಸೋತರು.

ಮಹಿಳಾ ವೀರಗಾಸೆ, ವೀರ ಮಕ್ಕಳ ಕುಣಿತ, ಬೀಸು ಕಂಸಾಳೆ, ನಂದಿಕೋಲು ಸಮಾಳ, ಕೀಲು ಕುದುರೆ, ನವಿಲು ಕುಣಿತ, ಪುರುಷರ ಡೊಳ್ಳು ಕುಣಿತ, ಸ್ವಾಗತ ಛತ್ರಿಕುಣಿತ, ಕರಡಿಮಜಲು, ಗೊರವರಕುಣಿತ, ಕೋಲಾಟ ತಂಡಗಳು ಅದ್ಭುತ ಪ್ರದರ್ಶನ ನೀಡಿದವು.

ಸ್ತಬ್ಧಚಿತ್ರದಲ್ಲಿ ಕೋವಿಡ್‌ ಜಾಗೃತಿ

ಕಲಾಮೇಳಗಳೊಂದಿಗೆ ಹಲವು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಕೋವಿಡ್‌ ಜಾಗೃತಿಗೆ ಬಸವೇಶ್ವರ ವೈದ್ಯಕೀಯ ಕಾಲೇಜು ವತಿಯಿಂದ ರೂಪಿಸಿದ್ದ ಸ್ತಬ್ಧಚಿತ್ರ ಗಮನ ಸೆಳೆಯಿತು. ಮಾಸ್ಕ್‌ ಧರಿಸುವ ಮಹತ್ವವನ್ನು ಸಾರಿತು. ಅಂತರ ಕಾಪಾಡಿಕೊಳ್ಳುವ, ಸ್ಯಾನಿಟೈಸರ್‌ ಬಳಕೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿತು. ಇದರ ಹಿಂಭಾಗದಲ್ಲಿ ಸಾಗುತ್ತಿದ್ದ ‘ನಿಫಾ’ ಸೋಂಕಿನ ಸ್ತಬ್ಧ ಚಿತ್ರ ಮಾರ್ಮಿಕ ಸಂದೇಶವನ್ನು ರವಾನಿಸಿತು.

ಧಾರ್ಮಿಕ ಹಾಗೂ ಐತಿಹಾಸಿಕ ಪುಣ್ಯಪುರುಷರ ಸ್ತಬ್ಧಚಿತ್ರಗಳು ಇದ್ದವು. ಸೋಲಾರ್ ಗ್ರೀನ್ ಹೌಸ್, ಮಳೆನೀರು ಸಂಗ್ರಹ, ಒಂಟಿಕಲ್ಲು ಬಸವಣ್ಣ, ಮುರುಘಾ ಶರಣರು, ಬಸವಣ್ಣನವರ ಸಾಮಾಜಿಕ ಕಾರ್ಯಗಳನ್ನು ಬಿಂಬಿಸುವ ಮಾದರಿ, ಕೋವಿಡ್ ಲಸಿಕೆಯ ಬಗೆಗಿನ ಕುರಿತಾದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಉತ್ಸವ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು, ದಣಿದ ಕಲಾವಿದರಿಗೆ ನೀರು, ಪಾನಕ, ಮಜ್ಜಿಗೆ, ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಉತ್ಸವದಲ್ಲಿ ಸಾಗುತ್ತಿದ್ದ ಶರಣರ ವಾಹನ ಬಳಿ ಬರುತ್ತಿದ್ದ ಭಕ್ತರು ಫಲಪುಷ್ಪ ಕಾಣಿಕೆಗಳನ್ನು ಸಮರ್ಪಿಸಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT