ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಶರಣರದ್ದು ಸ್ವಪ್ರತಿಷ್ಠೆ ಇರದ ಜೀವನಮೌಲ್ಯ

ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿ ವಿ. ಕಟ್ಟಿಮನಿ
Last Updated 9 ಆಗಸ್ಟ್ 2021, 3:18 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ‘ವಚನಕಾರರ ನಡೆ-ನುಡಿಯಲ್ಲಿ ಅಂತರವಿರಲಿಲ್ಲ. ಸ್ವಪ್ರತಿಷ್ಠೆಯನ್ನು ದೂರಸರಿಸಿ ಸ್ವಪರೀಕ್ಷೆಯ ಮೂಲಕ ತಮ್ಮನ್ನು ತಾವು ನಿಕಷಕ್ಕೆ ಒಡ್ಡಿಕೊಳ್ಳುತ್ತಿದ್ದುದು ಬಸವಾದಿ ಶಿವಶರಣರ ಜೀವನಮೌಲ್ಯ ವಿಧಾನವಾಗಿತ್ತು’ ಎಂದು ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಸ್ವಿ ವಿ. ಕಟ್ಟಿಮನಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 8ನೇ ದಿನವಾದ ಭಾನುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ತಳವಾರ ಕಾವಿದೇವಯ್ಯ’ ವಿಷಯ ಕುರಿತು ಮಾತನಾಡಿದರು.

‘ಮತ್ತೆ ಕಲ್ಯಾಣ ಪಂಡಿತಾರಾಧ್ಯ ಶ್ರೀಗಳ ಸುಂದರ ಕನಸು. ಶಿವಸಂಚಾರದಂತೆ ಜನರಲ್ಲಿ ಕಲ್ಯಾಣವನ್ನು ಕುರಿತು ಜಾಗೃತಿ ಮೂಡಿಸುವ ದಿಟ್ಟಹೆಜ್ಜೆ. ಶಿವಸಂಚಾರ ನಿರ್ಮಾಣ ಮಾಡಿರುವ ಸಾಂಸ್ಕೃತಿಕ ವಾತಾವರಣ ಬಹುದೊಡ್ಡದು. ಮಾತು ಮತ್ತು ಕೃತಿಒಂದೇ ಆಗಿದ್ದುದು 12ನೇ ಶತಮಾನದ ಶರಣ ಸಮಾಜ. ಪ್ರತಿಯೊಬ್ಬರೂ ಒಂದೊಂದು ಕಾಯಕ ಮಾಡುತ್ತಿದ್ದರು. ಈಗ ಮಾತನಾಡುವುದು, ಬರೆಯುವುದು, ಉಪದೇಶ ಮಾಡುವುದು, ದುಡಿಯುವುದೇ ಒಂದೊಂದು ಕಾಯಕವಾಗಿದೆ’ ಎಂದು ವಿಶ್ಲೇಷಿಸಿದರು.

‘ಶರಣರು ಕಾಯಕ, ಸಾಮಾಜಿಕನಿಷ್ಠರಾಗಿರುವಂತೆ ದಾಸೋಹ ನಿಷ್ಠರೂ ಆಗಿದ್ದರು. ಹೀಗಾಗಿ ಅನುಭವಮಂಟಪದಲ್ಲಿ ತಳವರ್ಗದವರೂ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮನನ್ನು ಪ್ರಶ್ನಿಸಬಹುದಿತ್ತು. ಇಂದು ಕಾಯಕದ ಬಗೆಗೆ ಗೌರವವಿಲ್ಲ’ ಎಂದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘12ನೇ ಶತಮಾನ ವಿಶ್ವದ ಇತಿಹಾಸದಲ್ಲೇ ಅವಿಸ್ಮರಣೀಯ. ಶರಣರು ಬಸವಕಲ್ಯಾಣದ ಅನುಭವ ಮಂಟಪದ ಮೂಲಕ ಏರುಪೇರುಗಳಿಲ್ಲದ, ಸರ್ವಸಮಾನತೆಯ, ಸಕಲ ಜೀವಾತ್ಮರ ಒಳಿತು ಬಯಸುವ ಕಾರ್ಯ ಮಾಡಿದರು. ಅದರಿಂದಾಗಿಯೇ ಬಸವಕಲ್ಯಾಣ ಆಕರ್ಷಣೆಯ ಕೇಂದ್ರವಾಗಿತ್ತು. ಅಲ್ಲಿ ರಾಜ–ಪ್ರಜೆ, ಆಳು–ಅರಸ, ಬಡವ–ಶ್ರೀಮಂತ, ಅಧಿಕಾರಿ–ಸೇವಕ ಎನ್ನುವ ಅಂತರಗಳಿರಲಿಲ್ಲ. ಶರಣರು ಶೋಷಣೆ, ಲಿಂಗತಾರತಮ್ಯ, ಅಸಮಾನತೆ, ಪಟ್ಟಭದ್ರಹಿತಾಸಕ್ತಿ, ಪುರೋಹಿತಶಾಹಿಯ ವಿರುದ್ಧ ಸಿಡಿದೆದ್ದವರು. ಅವರಿಗೆ ಆಚಾರ, ಕಾಯಕ, ಸಮಾನತೆ ಮುಖ್ಯವಾಗಿತ್ತು. ಇವೆಲ್ಲವನ್ನೂ ಜನರಿಗೆ ತಿಳಿಯಪಡಿಸುವ ಸದಾಶಯವೇ ಮತ್ತೆ ಕಲ್ಯಾಣ’ ಎಂದರು.

ಸಿಡ್ನಿಯಿಂದ ಸ್ನೇಹ ಚಂದ್ರಶೇಖರ್ ಸ್ವಾಗತಿಸಿದರು. ಶಿವಸಂಚಾರದ ಎಚ್.ಎಸ್.ನಾಗರಾಜ್, ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಶರಣ್ ತಂಡ ವಚನ ಗೀತೆ ಹಾಡಿತು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT