ಸಿರಿಗೆರೆ: ‘ತರಳಬಾಳು ಬೃಹನ್ಮಠದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಅಂಥ ಖದೀಮರಿಗೆ ಇನ್ನು ಮುಂದೆ ಮಠಕ್ಕೆ ಪ್ರವೇಶ ನೀಡುವುದಿಲ್ಲ’ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸಿರಿಗೆರೆ ಸಮೀಪದ ಕೊಳಹಾಳ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಬಸವೇಶ್ವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ನೋಡಿಕೊಂಡು ಮೌನವಾಗಿರಲು ಸಾಧ್ಯವಿಲ್ಲ. ಇಂತಹ ಪರಿಪಾಠವನ್ನು ಕೂಡಲೇ ನಿಲ್ಲಿಸಬೇಕು. ಘನತೆ ಹೊಂದಿರುವ ಪೀಠದ ವಿರುದ್ಧ ದಾವಣಗೆರೆಯ ರೆಸಾರ್ಟ್‌ನಲ್ಲಿ ಸಭೆ ನಡೆಸಿದ್ದು ನನಗೆ ನೋವು ತಂದಿದೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಇಂತಹ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಭಾವಿಸಿರಲಿಲ್ಲ’ ಎಂದರು.
‘ನಮ್ಮ ಪೂರ್ವಾಶ್ರಮದ ಸಂಬಂಧಿಗಳಿಗೆ ನಾವು ಮಠದಿಂದ ಹಣಕಾಸಿನ ನೆರವು ನೀಡಿಲ್ಲ. ವೃದ್ಧಾಪ್ಯದ ಅಂಚಿನಲ್ಲಿದ್ದ ನಮ್ಮ ಪೂರ್ವಾಶ್ರಮದ ತಾಯಿ ಒಮ್ಮೆ ಭೇಟಿಯಾಗಿ ನಮಗೇ ₹ 25,000 ನೀಡಿದ್ದರು. ಏಕೆ ಎಂದು ಕೇಳಿದಾಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ತರಳಬಾಳು ಕೇಂದ್ರದಲ್ಲಿ ಕೈಗಡ ಪಡೆದಿದ್ದ ವಿಷಯ ತಿಳಿಸಿದರು. ಜನರ ಕಷ್ಟಕ್ಕೆ ನೆರವಾಗುವ ನಾವು ಪೂರ್ವಾಶ್ರಮದ ತಾಯಿ ಅನಾರೋಗ್ಯದ ಸಂದರ್ಭದಲ್ಲಿಯೂ ನೆರವು ನೀಡಿಲ್ಲ’ ಎಂದು ಭಾವುಕರಾದರು.
‘ನಾನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆದಾಗ ವೈದ್ಯ ಶರಣ್ ಪಾಟೀಲ್ ಅವರು ಆಸ್ಪತ್ರೆ ವೆಚ್ಚ ಸ್ವೀಕರಿಸಲು ನಿರಾಕರಿಸಿದ್ದರು. ಆದರೂ ನಾನು ಬಡರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮಗೆ ಬಂದಿದ್ದ ಪಾದಕಾಣಿಕೆ ಹಣದಲ್ಲಿ ₹ 25 ಲಕ್ಷ ನೀಡಿದ್ದೆ’ ಎಂದರು.
‘ತರಳಬಾಳು ಮಠ ಮತ್ತು ಶಿಷ್ಯ ಸಮುದಾಯ ಜೇನುಗೂಡು ಇದ್ದಂತೆ. ಅದಕ್ಕೆ ಕಲ್ಲು ಹೊಡೆಯುವ ಪ್ರಯತ್ನವನ್ನು ಯಾರೂ ಮಾಡಬಾರದು. ನಮ್ಮ ಧರ್ಮ ಗುರುವಿನ ಪರವಾಗಿ ಸಾಮಾಜಿಕ ಚಿಂತಕರು, ಹೋರಾಟಗಾರರು, ರೈತರು ಸದಾ ನಿಲ್ಲುತ್ತಾರೆ’ ಎಂದು ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.