ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಹಾಲುರಾಮೇಶ್ವರದಲ್ಲಿ ಶಿವರಾತ್ರಿ ಸಂಭ್ರಮ

ಕರ್ನಾಟಕದ ‘ದಕ್ಷಿಣ ಕಾಶಿ’ ಖ್ಯಾತಿ ಪಡೆದ ಕ್ಷೇತ್ರದಲ್ಲಿ ಇಂದಿನಿಂದ ಉತ್ಸವ
Last Updated 25 ಫೆಬ್ರುವರಿ 2022, 4:28 IST
ಅಕ್ಷರ ಗಾತ್ರ

ಹೊಸದುರ್ಗ: ಕರ್ನಾಟಕದ ‘ದಕ್ಷಿಣ ಕಾಶಿ’ ಎಂದು ಖ್ಯಾತಿ ಪಡೆದಿರುವ ಪುಣ್ಯಕ್ಷೇತ್ರ ಹಾಲುರಾಮೇಶ್ವರದಲ್ಲಿ ಇಂದಿನಿಂದ ಶಿವರಾತ್ರಿ ಮಹೋತ್ಸವ ನಡೆಯಲಿದೆ. ಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ಸಿದ್ಧತೆಗಳು ನಡೆದಿವೆ.

ತಾಲ್ಲೂಕಿನ ಮಾಡದಕೆರೆ ಹೋಬಳಿಯ ದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದಟ್ಟ ಅರಣ್ಯಗಳ ಮಧ್ಯೆ ಹಾಲುರಾಮೇಶ್ವರ ದೇವಾಲಯವಿದೆ.

ಹಾಲುರಾಮೇಶ್ವರ ಕ್ಷೇತ್ರದಲ್ಲಿ ಜಾತಿ, ಧರ್ಮದ ಭೇದವಿಲ್ಲ. ಗಂಗಾಮಾತೆಯ ಕೊಳದಲ್ಲಿ ಪ್ರಸಾದ ಕೇಳಲು ಬರುವ ಎಲ್ಲ ಜನರಿಗೂ ಹೊರೆಯಾಗದಂತೆ₹ 11 ಶುಲ್ಕ ಪಡೆಯಲಾಗುತ್ತದೆ. ಬಡವ ಶ್ರೀಮಂತ ಎಂಬ ಭೇದವಿಲ್ಲ. ಸರದಿ ಪ್ರಕಾರ ಪ್ರಸಾದ ಕೇಳಬಹುದು.

ಇಲ್ಲಿ ಯಾವುದೇ ಧರ್ಮ, ಜಾತಿಯವರಾಗಲಿ ಪೂಜೆಗೆ ಬಂದಾಗ ಸಲಕರಣೆ ನೀಡಲು ಮಾತ್ರ ಅರ್ಚಕರಿರುತ್ತಾರೆ. ಲಿಂಗಭೇದವಿಲ್ಲದೆ ಅವರವರೇ ದೇವರನ್ನು ಮುಟ್ಟಿ ಪೂಜೆ ಮಾಡುವ ಅವಕಾಶವಿದೆ.

ಗಂಗೋದ್ಭವ ಪ್ರತೀತಿ: ವಾಲ್ಮೀಕಿ ಋಷಿ ಹಾಗೂ ಸುದತಿ ದೇವಿಯವರು ಉತ್ತರ ಭಾರತದ ತೀರ್ಥಯಾತ್ರೆ ಮುಗಿಸಿ, ದಕ್ಷಿಣ ಭಾರತದ ರಾಮೇಶ್ವರದ ಕಡೆಗೆ ಪಯಣಿಸುತ್ತಾರೆ. ಮಾರ್ಗ ಮಧ್ಯೆ ದಟ್ಟಾರಣ್ಯಗಳ ಹಾಲುರಾಮೇಶ್ವರ ಕ್ಷೇತ್ರದಲ್ಲಿ ವಿರಮಿಸುತ್ತಾರೆ.

ಕಾಶಿಯಲ್ಲಿ ಸುದತಿ ಗಂಗಾಸ್ನಾನ ಮಾಡುವಾಗ ಗಂಗಾಮಾತೆ ಪ್ರತ್ಯಕ್ಷವಾಗಿ ಬಾಗಿನ ಬಿಡು ಎಂದು ಕೋರಿದಳಂತೆ. ಪ್ರವಿತ್ರ ಸ್ಥಳಗಳಲ್ಲಿ ತೀರ್ಥಸ್ನಾನ ಮಾಡಿದಾಗ ಮಹಿಳೆಯರು ಬಾಗಿನ ಅರ್ಪಿಸುವುದು ಭಾರತೀಯ ಸಂಪ್ರದಾಯ. ಅದರಂತೆ ಸುದತಿ ದೇವಿ ತಮ್ಮ ಕೈಯಲ್ಲಿದ್ದ ತವರು ಮನೆಯ ಉಡುಗೊರೆ ವಜ್ರದ ಕಡಗವನ್ನೇ ಅರ್ಪಿಸಿದಳು.

ಈ ವಿಚಾರವನ್ನು ಪತಿಯಿಂದ ಮುಚ್ಚಿಟ್ಟಳು. ಪತಿ ವಾಲ್ಮೀಕಿ ಮಹರ್ಷಿ ವಜ್ರದ ಕಡಗ ಇಲ್ಲದಿದ್ದನ್ನು ಕಂಡು ಕೋಪಗೊಳ್ಳುವರು ಎಂಬ ಭಯದಿಂದ ದಟ್ಟರಣ್ಯ ನಡುವಿನ ಒಂದು ಹುತ್ತದೊಳಗೆ ಕೈಯಿಟ್ಟು ಪ್ರಾಣ ತ್ಯಜಿಸಲು ನಿರ್ಣಯಿಸುತ್ತಾಳೆ. ಸುದತಿ ದೇವಿ ಹುತ್ತದೊಳಗೆ ಕೈಯಿಟ್ಟು ಪ್ರಜ್ಞೆ ತಪ್ಪಿದಾಗ ಗಂಗಾಮಾತೆ ಸುದತಿಯ ವಜ್ರದ ಕಡಗದೊಂದಿಗೆ ರಭಸವಾಗಿ ಹರಿದಳು.

ಇದನ್ನು ಕಂಡು ವಾಲ್ಮೀಕಿ ಮಹರ್ಷಿಗೆ ಆಶ್ಚರ್ಯ. ಆಗ ಪತಿಗೆ ನಡೆದ ವೃತ್ತಾಂತವನ್ನು ಸುದತಿ ದೇವಿ ವಿವರಿಸಿದಳು. ವಾಲ್ಮೀಕಿ ಮಹರ್ಷಿ ತಮ್ಮ ತಪಶಕ್ತಿ ಧಾರೆಯೆರೆದು, ಇಲ್ಲಿಗೆ ಬರುವ ಭಕ್ತರ ಕಷ್ಟಗಳು ದೂರವಾಗಿ, ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ಸಂಕಲ್ಪಿಸಿದರು ಎಂಬುದು ಪ್ರತೀತಿ.

ಶ್ರೀರಾಮನ ಭೇಟಿ: ಹಾಲುರಾಮೇಶ್ವರ ಸಮೀಪ ದೊಡ್ಡಗಟ್ಟ ಬಳಿ ಶಬರಿವನ ಎಂಬ ಪವಿತ್ರ ಸ್ಥಳವಿದೆ. ಹಿಂದೆ ಶ್ರೀರಾಮನು ಶಬರಿಗೆ ಇಲ್ಲೇ ದರ್ಶನ ನೀಡಿದನೆಂಬ ಪ್ರತೀತಿ ಇದೆ. ಶ್ರೀರಾಮನು ಅಪ್ಪಟ ಶಿವಭಕ್ತ. ಶಬರಿವನಕ್ಕೆ ಹೋಗುವಾಗ ಈಗಿನ ಹಾಲುರಾಮೇಶ್ವರ ಕ್ಷೇತ್ರದಲ್ಲಿ ದೈನಂದಿನ ಪೂಜೆಗಾಗಿ ಒಂದು ಈಶ್ವರ ಲಿಂಗ ಪ್ರಾಣ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಿದ್ದ ಎಂಬುದು ಒಂದು ನಂಬಿಕೆ.

ಹಾಲುರಾಮೇಶ್ವರ ಹೆಸರು ಬಂದದ್ದು ಹೀಗೆ: ಇಲ್ಲಿನ ನೀರು ಹಾಲಿನ ಬಣ್ಣ ಹೊಂದಿದ್ದು, ವಾಲ್ಮೀಕಿ ಅವರು ರಾಮೇಶ್ವರಕ್ಕೆ ಹೊರಟಿದ್ದರಿಂದ ಇದನ್ನು ಹಾಲುರಾಮೇಶ್ವರ ಮಹಾಕ್ಷೇತ್ರ ಎಂದು ನಾಮಕರಣ ಮಾಡಿದ್ದಾರೆ ಎಂಬುದು ಪ್ರತೀತಿ.

‌ಗಂಗಾ ಹೊಂಡದಲ್ಲಿ ಭಕ್ತ ಅದೃಷ್ಟಾನುಸಾರ ಬೇಡಿದ ಪ್ರಸಾದಗಳು ಪ್ರಾಪ್ತವಾಗುತ್ತವೆ. ಭಕ್ತರು ತಮ್ಮ ನೋವು ನಿವಾರಿಸಿಕೊಂಡು ನೆಮ್ಮದಿ ಕಂಡಿರುವ ಉದಾಹರಣೆಗಳಿವೆ ಎನ್ನುತ್ತಾರೆ ಅರ್ಚಕಎಚ್. ಮುರುಗೇಶ್.

ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಶ್ರೀಹಾಲುರಾಮೇಶ್ವರ ಅಭಿವೃದ್ಧಿ ಟ್ರಸ್ಟ್ ಆರಂಭಿಸಿ ಸರ್ಕಾರದಿಂದ ಅನುದಾನ ತಂದು ದೇವಾಲಯದ ಜೀರ್ಣೋದ್ಧಾರಕ್ಕೆ ಶ್ರಮಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷಎಂ. ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT