ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಲಾಕ್ ಡೌನ್ ಪರಿಣಾಮ, ಸಂಕಷ್ಟದಲ್ಲಿ ರೇಷ್ಮೆಸೀರೆ ನೇಕಾರರು

ಕಚ್ಚಾವಸ್ತು ಪೂರೈಕೆ ಸ್ಥಗಿತ, ಮಾರಾಟವೂ ಇಲ್ಲ
Last Updated 9 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯಲು ಲಾಕ್‌ಡೌನ್‌ ಘೋಷಿಸಿರುವುದರ ಪರಿಣಾಮ ರೇಷ್ಮೆಸೀರೆ ನೇಕಾರರ ಜೀವನ ನಿರ್ವಹಣೆ ಮೇಲೆ ದುಷ್ಪರಿಣಾಮ ಬೀರಿದೆ.

ಮೊಳಕಾಲ್ಮುರು ನೂರಾರು ವರ್ಷಗಳಿಂದ ಗುಣಮಟ್ಟದ ಕೈಮಗ್ಗ ರೇಷ್ಮೆಸೀರೆಗಳಿಗೆ ಪ್ರಸಿದ್ಧವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹೊರ ರಾಜ್ಯಗಳಿಗೂ ಇಲ್ಲಿಂದ ರೇಷ್ಮೆಸೀರೆಗಳನ್ನು ರಪ್ತು ಮಾಡಲಾಗುತ್ತದೆ. ಆದರೆ ಕೊರೊನಾ ಕರಿ ನೆರಳು ಉದ್ಯಮದ ಮೇಲೆ ಬಿದ್ದಿದ್ದು, ಕುಟುಂಬ ನಿರ್ಬಹಣೆ ಹೇಗೆಂಬ ಆತಂಕದಲ್ಲಿ ನೇಕಾರರಿದ್ದಾರೆ.

ತಾಲ್ಲೂಕಿನ ಕೊಂಡ್ಲಹಳ್ಳಿ, ಮೊಳಕಾಲ್ಮುರು, ನೆರೆಯ ರಾಯದುರ್ಗ ರೇಷ್ಮೆಸೀರೆ ನೇಯ್ಗೆಗೆ ಪ್ರಸಿದ್ಧ. 5 ಸಾವಿರಕ್ಕೂ ಹೆಚ್ಚು ಮಗ್ಗಳಿದ್ದವು. ಜಾಗತೀಕರಣದ ಪರಿಣಾಮ ಸಾವಿರ ಆಸುಪಾಸಿನಲ್ಲಿ ಮಗ್ಗಗಳಿವೆ. ಕಚ್ಚಾ ವಸ್ತುಗಳಾದ ಸಿದ್ಧ ರೇಷ್ಮೆತಡಿ, ಜರಿಯ ಕೊರತೆಯಿಂದಾಗಿ ನೇಯ್ಗೆ ಸ್ಥಗಿತವಾಗಿದೆ. ಲಾಕ್‌ಡೌನ್‌ ಘೋಷಣೆಗೆ ಮುಂಚಿತವಾಗಿ ದಾಸ್ತಾನು ಮಾಡಿದ್ದ ಕಚ್ಚಾವಸ್ತು ಕೊನೆಯಾಗುವ ತನಕ ಮಾತ್ರ ಮಗ್ಗದ ಸದ್ದು ಕೇಳಿಸಿತು. ಈಗ ಸಂಪೂರ್ಣ ಸ್ಥಬ್ಧವಾಗಿದೆ ಎನ್ನುತ್ತಾರೆ ನೇಕಾರ ಪಿ.ಎನ್. ಶ್ರೀನಿವಾಸುಲು.

ರೇಷ್ಮೆಸೀರೆಗೆ ಮುಖ್ಯವಾಗಿ ಬೇಕಾಗುವ ಜರಿ ಸೂರತ್‌ನಿಂದ ಬರುತ್ತಿತ್ತು. ಈಗ ಸರಬರಾಜು ಸ್ಥಗಿತವಾಗಿದೆ. ನೆರೆಯ ಆಂಧ್ರಪ್ರದೇಶದ ರಾಯದುರ್ಗ, ಕಲ್ಯಾಣದುರ್ಗದಿಂದ ಸ್ಪಲ್ಪ ಕಚ್ಚಾ ವಸ್ತು ಬರುತ್ತಿತ್ತು. ವಾಹನಗಳ ಪ್ರವೇಶ ನಿಷೇಧವಿರುವ ಕಾರಣ ಇದು ಸಹ ಸ್ಥಗಿತಗೊಂಡಿದೆ. ಸೀರೆ ನೇಯ್ಗೆ ಮಾಡಿಸುವವರು ಮಾರಾಟ ಹಾಗೂ ಕಚ್ಚಾವಸ್ತು ಇಲ್ಲದ ಕಾರಣ ದಿನಕ್ಕೆ 1, 1/2 ಗಜ ನೇಯ್ಗೆ ಮಾಡಿ ಸಾಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.

ಕೆಲ ಸೀರೆ ನೇಯಿಸುವ ಮಾಸ್ಟರ್ ವೀವರ್ಸ್ ನೇಕಾರರಿಗೆ ಕೈಲಾದಷ್ಟು ಆರ್ಥಿಕ, ದಿನಸಿ ವ್ಯವಸ್ಥೆ ಮಾಡುತ್ತಿದ್ದಾರೆ. ಹೊಣೆ ಹೊತ್ತಿರುವ ಜವಳಿ ಅಭಿವೃದ್ಧಿ ನಿಗಮ ಏನೂ ಸಂಬಂಧವಿಲ್ಲ ಎಂಬ ರೀತಿ ವರ್ತಿಸುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಸಹ ಇತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೊಂಡ್ಲಹಳ್ಳಿ ನಾಗೇಶ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT