ಬುಧವಾರ, ಮೇ 25, 2022
30 °C
ಡಿಎಂಎಫ್ ಅನುದಾನದಲ್ಲಿ ಪೂರೈಕೆ: ಶಿಕ್ಷಕರು, ಅಧಿಕಾರಿಗಳಿಗಿಲ್ಲ ಮಾಹಿತಿ

ಮೊಳಕಾಲ್ಮುರು: ಧೂಳು ಹಿಡಿಯುತ್ತಿದೆ ಸ್ಮಾರ್ಟ್‌ಕ್ಲಾಸ್‌ ಸಾಮಗ್ರಿ

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಾಲ್ಲೂಕಿನ ಹತ್ತಾರು ಸರ್ಕಾರಿ ಶಾಲೆಗಳಿಗೆ ಹಲವು ತಿಂಗಳುಗಳ ಹಿಂದೆ ಸ್ಮಾರ್ಟ್‌ಕ್ಲಾಸ್ ಸಾಮಗ್ರಿಗಳು ಪೂರೈಕೆಯಾಗಿವೆ. ಆದರೆ ಅವು ಧೂಳುಹಿಡಿಯುತ್ತಿವೆ. ಅಲ್ಲದೇ ಇದನ್ನು ಯಾವ ಇಲಾಖೆಯಿಂದ ಪೂರೈಸಲಾಗಿದೆ ಎಂಬ ಮಾಹಿತಿ ಶಿಕ್ಷಕರು, ಬಿಇಒಗೆ ಇಲ್ಲ.

ಕೋವಿಡ್ ಕಾರಣ ಲಾಕ್‌ಡೌನ್ ಅವಧಿಯಲ್ಲಿ ಸ್ಮಾರ್ಟ್‌ಕ್ಲಾಸ್ ಸಾಮಗ್ರಿಗಳು ಸರಬರಾಜಾಗಿವೆ ಆದರೆ ಬಹುತೇಕ ಶಾಲೆಗಳಿಗೆ ಇವುಗಳನ್ನು ಯಾರು ಸರಬರಾಜು ಮಾಡಿದ್ದಾರೆ. ಯಾವ ಅನುದಾನ, ಎಷ್ಟು ಹಣ, ಸರ್ಕಾರದ್ದೋ ಅಥವಾ ಖಾಸಗಿ ಅನುದಾನ ಎಂಬ ಬಗ್ಗೆ ಮಾಹಿತಿ ಇಲ್ಲ. ಸಾಮಗ್ರಿಗಳನ್ನು ಇಳಿಸಿ ಹೋದವರು ಮತ್ತೆ ಶಾಲೆ ಕಡೆ ಮುಖ ಮಾಡಿಲ್ಲ.

‘5 ತಿಂಗಳ ಹಿಂದೆ ಈ ಸಾಮಗ್ರಿಗಳನ್ನು ಶಾಲೆಗಳಿಗೆ ಪೂರೈಸಲಾಗಿದೆ. ನಂತರ ಬಂದು ಅವುಗಳನ್ನು ಜೋಡಣೆ ಮಾಡಿಲ್ಲ. ಶಿಕ್ಷಕರಿಗೆ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿಲ್ಲ. ಇದರಿಂದಾಗಿ ಬಂದಿರುವ ಸಾಮಗ್ರಿಗಳು ಮೂಲೆಯಲ್ಲಿ ಧೂಳುಹಿಡಿಯುತ್ತಿದೆ. ಇದಕ್ಕೆ ಯಾರನ್ನು ಸಂಪರ್ಕ ಮಾಡಬೇಕು ಎಂದು ತಿಳಿಯುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಮಗೂ ಮಾಹಿತಿ ಇಲ್ಲ. ತಿಳಿದುಕೊಂಡು ಸರಿಪಡಿಸುತ್ತೇವೆ ಎನ್ನುತ್ತಿದ್ದಾರೆ’ ಎಂದು ಚಿಕ್ಕೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಒ. ಕರಿಬಸಪ್ಪ ತಿಳಿಸಿದರು.

‘5-6 ತಿಂಗಳ ಹಿಂದೆ ಸಾಮಗ್ರಿಗಳು ಶಾಲೆಗಳಿಗೆ ಸರಬರಾಜಾಗಿವೆ. ನಮ್ಮ ಕಚೇರಿಗೂ ಪೂರೈಕೆ ಮಾಡಿರುವವರು ಮಾಹಿತಿ ನೀಡಿಲ್ಲ. ಈಚೆಗೆ ಈ ಕುರಿತು ಶಾಲೆಯವರು ಪ್ರಶ್ನೆ ಮಾಡಲು ಆರಂಭಿಸಿದ ನಂತರ ಇದರ ಬಗ್ಗೆ ಮಾಹಿತಿ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಯಿತು. ಪ್ರಥಮವಾಗಿ ಡಿಡಿಪಿಐ ಕಚೇರಿಯಲ್ಲೂ ಈ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ಅಚ್ಚರಿಯಾಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

‘ಸಾಮಗ್ರಿಗಳ ಪೂರೈಕೆ ಬಗ್ಗೆ ಸಮಗ್ರವಾಗಿ ಮಾಹಿತಿ ಸಂಗ್ರಹಿಸಿದಾಗ ಜಿಲ್ಲಾ ಖನಿಜ ನಿಧಿ (ಡಿಎಂಎಫ್) ನಿಧಿಯ ಅನುದಾನದಲ್ಲಿ ಕಿಯೋನಿಕ್ಸ್ ಸಂಸ್ಥೆ ಸರಬರಾಜು ಮಾಡಿದೆ. 100 ವಿದ್ಯಾರ್ಥಿಗಳಿಗೂ ಹೆಚ್ಚು ದಾಖಲಾತಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಇವುಗಳನ್ನು ಪೂರೈಸಲಾಗಿದೆ. ತಾಲ್ಲೂಕಿನ 50 ಶಾಲೆಗಳಿಗೆ ಪೂರೈಸಲಾಗಿದೆ. ಈ ಬಗ್ಗೆ ಸಂಸ್ಥೆಯವರು ನೀಡಿದ್ದ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗದ ಕಾರಣ ಗೊಂದಲವಾಗಿದ್ದು ನಿಜ. ಈಗ ಅವರನ್ನು ಸಂಪರ್ಕಿಸಿದ್ದು ಈ ಕುರಿತು ಪತ್ರ ನೀಡಿದಲ್ಲಿ ಜೋಡಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ’ ಎಂದು ಸಮನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು