ಮಂಗಳವಾರ, ಆಗಸ್ಟ್ 16, 2022
21 °C
ಹತ್ತು ಪ್ರಕರಣ ಭೇದಿಸಿದ ಪೊಲೀಸರು, 15 ಆರೋಪಿಗಳ ಬಂಧನ

₹ 60 ಲಕ್ಷ ಮೌಲ್ಯದ ಸ್ವತ್ತು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರೈಸ್‌ ಪುಲ್ಲಿಂಗ್‌, ಹಣ ಡಬ್ಲಿಂಗ್‌, ದ್ವಿಚಕ್ರ ವಾಹನ, ಅನ್ನಭಾಗ್ಯದ ಅಕ್ಕಿ ಹಾಗೂ ಅಂಗಡಿ ಕಳವು ಸೇರಿ ಹತ್ತು ಪ್ರಕರಣ ಭೇದಿಸಿದ ಚಿತ್ರದುರ್ಗ ಜಿಲ್ಲೆಯ ಪೊಲೀಸರು 15 ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಾರು ₹ 60 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.

ಹೊಳಲ್ಕೆರೆ ಪೊಲೀಸರಿಗೆ ದಾಖಲೆ ಇಲ್ಲದ ₹23.83 ಲಕ್ಷ ನಗದು ಪತ್ತೆಯಾಗಿದೆ. ಕಳವಾಗಿದ್ದ ಕುರಿ, ಹಸುಗಳು ಪತ್ತೆಯಾಗಿವೆ. ಚಳ್ಳಕೆರೆಯಲ್ಲಿ ಕಳವಾಗಿದ್ದ 25ಕ್ಕೂ ಹೆಚ್ಚು ಮೊಬೈಲ್‌ ಫೋನ್‌ಗಳು ಸಿಕ್ಕಿವೆ. ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸಿ ಲಾರಿ ಹಾಗೂ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

ವಿಡಿಯೊ ನೀಡಿದ ಸುಳಿವು

ಹಣ ಡಬ್ಲಿಂಗ್‌, ರೈಸ್‌ ಪುಲ್ಲಿಂಗ್‌ ಸೇರಿ ಹಲವು ರೀತಿಯ ವಂಚನೆಗೆ ಹೊಂಚು ಹಾಕಿದ್ದ ಮಹಾರಾಷ್ಟ್ರದ ಆರು ಜನರ ತಂಡ ಹೊಳಲ್ಕೆರೆ ಪೊಲೀಸರ ಬಲೆಗೆ ಬಿದ್ದಿದೆ. ಮೊಬೈಲ್‌ ವಿಡಿಯೊ ನೀಡಿದ ಸುಳಿವು ಆರೋಪಿಗಳು ಜೈಲು ಕಂಬಿ ಎಣಿಸುವಂತೆ ಮಾಡಿದೆ.

‘ನ.26ರಂದು ಸಂಜೆ ಹೊಳಲ್ಕೆರೆ ಖಾಸಗಿ ಬಸ್‌ ನಿಲ್ದಾಣದ ಸಮೀಪ ಗುಂಪೊಂದರ ನಡುವೆ ವಾಗ್ವಾದ ನಡೆಯುತ್ತಿತ್ತು. ಗಸ್ತಿನಲ್ಲಿದ್ದ ಪೊಲೀಸರು ಗುಂಪಿನ ಬಳಿಗೆ ತೆರಳಿದಾಗ ಅನುಮಾನಸ್ಪದವಾಗಿ ವರ್ತಿಸಿದ್ದಾರೆ. ಮೊಬೈಲ್‌ ವಶಕ್ಕೆ ಪಡೆದು ಪರಿಶೀಲಿಸಿದಾಗ ವಿದೇಶಿ ಕರೆನ್ಸಿ ವರ್ಗಾವಣೆ, ಹಳೆ ನೋಟು ಬದಲಾವಣೆ ಹಾಗೂ ರೈಸ್‌ ಪುಲ್ಲಿಂಗ್‌ಗೆ ಸಂಬಂಧಿಸಿದ ಸುಳಿವು ಸಿಕ್ಕಿತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಚು ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿದ ಎರಡು ಕಾರುಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ₹ 23.83 ಲಕ್ಷ ಪತ್ತೆಯಾಯಿತು. ಇಷ್ಟೊಂದು ಹಣಕ್ಕೆ ದಾಖಲೆ ಹಾಜರುಪಡಿಸುವಲ್ಲಿ ತಂಡ ವಿಫಲವಾಗಿದೆ. ಕಳವು ಅಥವಾ ವಂಚನೆ ಮಾಡಿದ ಹಣ ಇರಬಹುದು ಎಂಬ ಅನುಮಾನವಿದೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ ಹೊರಟಿದ್ದ ತಂಡ ಮುಗ್ಧರನ್ನು ವಂಚಿಸಲು ಸಿದ್ಧತೆ ಮಾಡಿಕೊಂಡಿತ್ತು’ ಎಂದು ವಿವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸುರೇಶ್‌ ಶಿಂಧೆ (40), ಹಾಸನದ ಮಧುಸೂದನ್‌ ಗೌಡ (30), ಮಹಾರಾಷ್ಟ್ರದ ದಿನೇಶ್‌ (33), ರಾಜೇಂದ್ರ ಭಾಸ್ಕರ್‌ (42), ನೀತಾ ಗಾಯಕವಾಡ್ (38), ಜಮೀರ್ ಮುಭಾರಕ್‌ (32) ಬಂಧಿತರಾಗಿದ್ದಾರೆ.

ಕಳವಿಗೆ ಮಕ್ಕಳ ಬಳಕೆ:

ಮಕ್ಕಳನ್ನು ಬಳಸಿಕೊಂಡು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಜಾಲವನ್ನು ಭೇದಿಸಿದ ಚಳ್ಳಕೆರೆ ಠಾಣೆಯ ಪೊಲೀಸರು ಬಾಲಕನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿ ನೀಡಿದ ಸುಳಿವಿನ ಆಧಾರದ ಮೇರೆಗೆ ಐದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ದ್ವಿಚಕ್ರ ವಾಹನ ಕಳವು ಮಾಡಿ ತರುತ್ತಿದ್ದ ಬಾಲಕರು ಆರೋಪಿಗಳಿಗೆ ಒಪ್ಪಿಸುತ್ತಿದ್ದರು.

‘ಕುರಿ ಕಳವು ಪ್ರಕರಣದಲ್ಲಿ ದಾದಾಪೀರ್‌, ರೋಷನ್‌ ಹಾಗೂ ರಾಜ ಎಂಬಾತನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ. ಐದು ಕುರಿ, ಒಂದು ದ್ವಿಚಕ್ರ ವಾಹನ ಹಾಗೂ ಕಾರು ಪತ್ತೆಯಾಗಿವೆ. ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಜಿ.ರಾಧಿಕಾ ಮಾಹಿತಿ ನೀಡಿದರು.

ಅನ್ನಭಾಗ್ಯ ಅಕ್ಕಿ ವಶ

ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪ್ರಕರಣ ಭೇದಿಸಿದ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ಕ್ಯಾಂಟರ್‌ ಹಾಗೂ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಉಜ್ಜಣ್ಣರ ಬಸವರಾಜ (28) ಹಾಗೂ ಕರಿಬಸಜ್ಜ (25) ಬಂಧಿತ ಆರೋಪಿಗಳು. ನ.30ರಂದು ಅನ್ನಭಾಗ್ಯದ ಅಕ್ಕಿ ತುಂಬಿದ ಕ್ಯಾಂಟರ್‌ಗಳನ್ನು ಇವರು ಚಾಲನೆ ಮಾಡುತ್ತಿದ್ದರು. ತಿಂಗಳ ಹಿಂದೆಯಷ್ಟೇ ಇಂತಹದೇ ಪ್ರಕರಣವನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಯಲಿಗೆ ಎಳೆದಿದ್ದರು.

ಅಂಗಡಿ ಹಾಗೂ ಹಸು ಕಳವು ಪ್ರಕರಣ ಭೇದಿಸಿದ ತುರುವನೂರು ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ಪಾಂಡುರಂಗ, ಕೆ.ವಿ.ಶ್ರೀಧರ್‌, ಸಿಪಿಐ ಕೆ.ಎನ್‌.ರವೀಶ್‌, ಬಾಲಚಂದ್ರ ನಾಯಕ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು