ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು, ದರೋಡೆ: 8 ಜನರ ಸೆರೆ

21 ಪ್ರಕರಣ ಭೇದಿಸಿದ ಪೊಲೀಸರು, ₹12 ಲಕ್ಷ ಮೌಲ್ಯದ ಸ್ವತ್ತು ವಶ
Last Updated 9 ಡಿಸೆಂಬರ್ 2020, 13:11 IST
ಅಕ್ಷರ ಗಾತ್ರ

ಚಿತ್ರದುರ್ಗ: ದ್ವಿಚಕ್ರ ವಾಹನ, ಜಾನುವಾರು, ಚಿನ್ನಾಭರಣ ಕಳವು ಹಾಗೂ ದರೋಡೆ ಸೇರಿದಂತೆ 21 ಪ್ರಕರಣಗಳನ್ನು ಭೇದಿಸಿದ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. 13 ಬೈಕ್‌ ಸೇರಿ ₹12.76 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ, ಅಬ್ಬಿನಹೊಳೆ, ನಾಯಕನಹಟ್ಟಿ, ಚಿತ್ರದುರ್ಗದ ನಗರ, ಕೋಟೆ ಹಾಗೂ ಬಡಾವಣೆ ಠಾಣೆಯ ಪೊಲೀಸರ ಶ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಕು ತೋರಿಸಿ ಬೆದರಿಸಿ ಲಾರಿ ಚಾಲಕನನ್ನು ದರೋಡೆ ಮಾಡಿದ ಆರೋಪಿಗಳನ್ನು ಮರುದಿನವೇ ಬಂಧಿಸಿದ ಚಳ್ಳಕೆರೆ ಪೊಲೀಸರನ್ನು ಅಭಿನಂದಿಸಿದ್ದಾರೆ.

ಬೈಕ್‌ ಕಳವಿಗೆ ನಕಲಿ ಕೀ

‘ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿತ್ರದುರ್ಗದ ಕೋಟೆ ಹಾಗೂ ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸಿಕ್ಕಿಬಿದ್ದಿದ್ದರಿಂದ 13 ದ್ವಿಚಕ್ರ ವಾಹನ ಕಳವು ಪ್ರಕರಣ ಅಂತ್ಯಕಂಡಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹರಿಹರದ ಆಶ್ರಯ ಬಡಾವಣೆಯ ಕಿರಣ್‌ (24) ಹಾಗೂ ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ನಿದ್ರಘಟ್ಟ ಗ್ರಾಮದ ಶ್ರೀಧರ (31) ಬಂಧಿತರು. ಕಿರಣ್‌ ಬಂಧನದಿಂದ ಚಿತ್ರದುರ್ಗದ ಆರು ಹಾಗೂ ದಾವಣಗೆರೆಯ ನಾಲ್ಕು ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ. ಶ್ರೀಧರ ಬಂಧನದಿಂದ ಚಿತ್ರದುರ್ಗದ ಬಡಾವಣೆ ಠಾಣೆ ವ್ಯಾಪ್ತಿಯ ಮೂರು ಪ್ರಕರಣ ಅಂತ್ಯಕಂಡಿವೆ.

‘ಹರಿಹರದ ಕಿರಣ್‌ ಎರಡು ವರ್ಷಗಳಿಂದ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಬಹುತೇಕ ಎಲ್ಲ ಕಂಪೆನಿಯ ದ್ವಿಚಕ್ರ ವಾಹನಗಳ ನಕಲಿ ಕೀಗಳನ್ನು ಆರೋಪಿ ಹೊಂದಿದ್ದ. ನಿರ್ಜನ ಪ್ರದೇಶದಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಹುಡುಕಿ ಕಳವು ಮಾಡುತ್ತಿದ್ದ. ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇಗುಲದ ಬಳಿ ಆರೋಪಿಯು ಪೊಲೀಸರ ಬಲೆಗೆ ಬಿದ್ದಿದ್ದಾನೆ’ ಎಂದು ರಾಧಿಕಾ ಮಾಹಿತಿ ನೀಡಿದರು.

‘ಕಳವು ಮಾಡಿದ ಬೈಕುಗಳನ್ನು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ. ಮಕ್ಕಳು ಅಥವಾ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಣದ ಅಗತ್ಯವಿದೆ ಎಂದು ನಂಬಿಸುತ್ತಿದ್ದ. ಕಡಿಮೆ ಬೆಲೆಗೆ ಸಿಗುತ್ತಿದ್ದ ಬೈಕುಗಳನ್ನು ಜನರು ಖರೀದಿಸುತ್ತಿದ್ದರು’ ಎಂದು ವಿವರಿಸಿದರು.

‘ಆಂಧ್ರಪ್ರದೇಶದ ಶ್ರೀಧರ ಎಸ್ಸೆಸ್ಸೆಲ್ಸಿ ವರೆಗೆ ಚಿತ್ರದುರ್ಗದಲ್ಲಿ ವ್ಯಾಸಂಗ ಮಾಡಿದ್ದ. ನಗರದ ಹೊರವಲಯದ ಬಡಾವಣೆಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ವೆಂಕಟೇಶ್ವರ ಬಡಾವಣೆಯ ಸಮೀಪ ಪೊಲೀಸರನ್ನು ಕಂಡು ಅನುಮಾಸ್ಪದವಾಗಿ ವರ್ತಿಸಿದ ಆರೋಪಿಯನ್ನು ವಶಕ್ಕೆ ಪಡೆದಾಗ ಕಳವು ಪ್ರಕರಣ ಬೆಳಕಿಗೆ ಬಂದಿವೆ’ ಎಂದರು.

ಜೈಲಿನಿಂದ ಹೊರಬಂದು ಕಳವು
ನಿವೃತ್ತ ಎಎಸ್‌ಐ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಿದ ಆರೋಪದ ಮೇರೆಗೆ ಜೈಲುಪಾಲಾಗಿದ್ದ ಸೈಯದ್‌ ಅಕ್ಬರ್‌ (52) ಜಾಮೀನು ಪಡೆದು ಹೊರಬಂದು ಮತ್ತೆ ಕಳವು ಕೃತ್ಯಕ್ಕೆ ಕೈಹಾಕಿ ಸಿಕ್ಕಿಬಿದ್ದಿದ್ದಾನೆ. ಬೀಗ ಹಾಕಿದ ಮನೆಗಳನ್ನು ಹುಡುಕಿ ಕಳವು ಮಾಡುತ್ತಿದ್ದ ಆರೋಪಿಯಿಂದ ಸುಮಾರು ₹7 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

‘ಬಸವೇಶ್ವರ ಟಾಕೀಸ್‌ ಸಮೀಪದ ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿದ್ದ ಆರೋಪಿ ಚಿನ್ನಾಭರಣ ಕಳವು ಮಾಡಿದ್ದ. ಚಿನ್ನಾಭರಣವನ್ನು ಫೈನಾನ್ಸ್‌ನಲ್ಲಿ ಅಡವಿಟ್ಟು ಹಣ ಪಡೆದಿದ್ದ. ಫೈನಾನ್ಸ್‌ ಸಿಬ್ಬಂದಿ ನೀಡಿದ ಸುಳಿವಿನ ಆಧಾರದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿವರಿಸಿದರು.

ಚಳ್ಳಕೆರೆ ಹೊರವಲಯದಲ್ಲಿ ಲಾರಿ ಚಾಲಕನನ್ನು ದರೋಡೆ ಮಾಡಿದ್ದ ಚಿತ್ರದುರ್ಗದ ಮೊಹಮ್ಮದ್‌ ನೂರೂಲ್ಲಾ (26) ಹಾಗೂ ಇಮ್ರಾನ್‌ (23) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಡಿ.6ರಂದು ಆರೋಪಿಗಳು ಕೃತ್ಯ ಎಸಗಿದ್ದರು. ಮರುದಿನ ರಾತ್ರಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ₹ 6,650 ನಗದು ಹಾಗೂ ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ.

ಹಸು ಕಳವಿಗೆ ಬರುತ್ತಿತ್ತು ಲಾರಿ
ಭಾರಿ ಗಾತ್ರದ ಲಾರಿಯನ್ನು ಬಾಡಿಗೆ ಪಡೆದು ಜಿಲ್ಲೆಯಲ್ಲಿ ಸಂಚರಿಸಿ ಹಸುಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಗಂಡಸಿ ಹ್ಯಾಂಡ್‌ಪೋಸ್ಟ್‌ ನಿವಾಸಿ ಅಭಿಷೇಕ್‌ (24) ಹಾಗೂ ಚಿಕ್ಕಮಗಳೂರಿನ ಮಲ್ಲಂದೂರು ಗ್ರಾಮದ ಮೊಹಮ್ಮದ್‌ ಶಾಕೀರ್ (22) ಬಂಧಿತರು. ಆರೋಪಿಗಳಿಂದ ₹1.5 ಲಕ್ಷವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಲಾರಿ ಬಾಡಿಗೆ ಪಡೆದ ಆರೋಪಿಗಳು ಜಿಲ್ಲೆ ಸುತ್ತುತ್ತಿದ್ದರು. ನಿರ್ಜನ ಪ್ರದೇಶದಲ್ಲಿದ್ದ ಹಸುಗಳನ್ನು ಕಳವು ಮಾಡಿ ಹಾಸನಕ್ಕೆ ಕೊಂಡೊಯ್ದು ಜಾನುವಾರು ಜಾತ್ರೆಯಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು ಎಸ್‌ಪಿ ರಾಧಿಕಾ ತಿಳಿಸಿದರು.

ರಸಗೊಬ್ಬರ ಅಂಗಡಿ ಮಾಲೀಕ ಸೆರೆ
ನಕಲಿ ಕೀಟನಾಶಕ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಾಯಕನಹಟ್ಟಿಯ ಗುರುಕೃಪ ಫರ್ಟಿಲೈಸರ್ ಅಂಗಡಿಯ ಮಾಲೀಕ ಬಿ.ಟಿ.ಶಿವಾರೆಡ್ಡಿ (45) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕೊರಾಜನ್‌ ಕೀಟನಾಶಕದ ನಕಲಿ ಉತ್ಪನ್ನವನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಕಂಪೆನಿಯೊಂದು ದೂರು ದಾಖಲಿಸಿತ್ತು. ಕೃಷಿ ಅಧಿಕಾರಿಗಳೊಂದಿಗೆ ದಾಳಿ ನಡೆಸಿದಾಗ ನಕಲಿ ಕೊರಾಜಿನ್‌ ಕೀಟನಾಶಕ ಪತ್ತೆಯಾಗಿದೆ. ಅಂಗಡಿಯ ಪರವಾನಗಿ ಅಮಾನತುಗೊಳಿಸಲಾಗಿದೆ’ ಎಂದು ರಾಧಿಕಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT