ಸೋಮವಾರ, ಜನವರಿ 18, 2021
25 °C
ಸಂಕ್ರಾಂತಿ ಪೂಜೆಗೆ ಸಜ್ಜಾಗುತ್ತಿವೆ ನಗರದ ದೇಗುಲಗಳು

ಜ. 14ಕ್ಕೆ ದೇಗುಲಗಳಲ್ಲಿ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಂಕ್ರಾಂತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ನಗರ ಹಾಗೂ ಕೋಟೆಯೊಳಗಿನ ಐತಿಹಾಸಿಕ ದೇಗುಲಗಳಲ್ಲಿ ಜ. 14 ರಂದು ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ, ಭಾನುವಾರದಿಂದಲೇ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರನ್ನು ಆಕರ್ಷಿಸಲು ದೇಗುಲದ ಮುಖ್ಯ ದ್ವಾರದಿಂದ ದೀಪಾಲಂಕಾರ ಮಾಡಲಾಗುತ್ತಿದೆ.

ಬರಗೇರಮ್ಮ ದೇವತೆ: ಇಲ್ಲಿನ ಹೊಳಲ್ಕೆರೆ ರಸ್ತೆಯಲ್ಲಿ ಇರುವ ಬರಗೇರಮ್ಮ ದೇಗುಲದಲ್ಲಿ ಹಬ್ಬದ ಅಂಗವಾಗಿ ದೇವತೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಅಂದು ದೇವಿಯ ಮೂರ್ತಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಪೂಜಾ ಕಾರ್ಯಕ್ರಮ ಬೆಳಿಗ್ಗೆ 5.30ಕ್ಕೆ ನಡೆಯಲಿದೆ.

ರಾತ್ರಿ 10ರವರೆಗೆ ಭಕ್ತರಿಗೆ ದೇವತೆಯ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ದೇಗುಲಕ್ಕೆ ಬರುವಂಥ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

ಏಕನಾಥೇಶ್ವರಿ ದೇವಿ: ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ದೇಗುಲದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದೆ. ಅಂದು ಬೆಳಿಗ್ಗೆ 5.30ಕ್ಕೆ ದೇವತೆಗೆ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ಹಾಗೂ ಪೂಜಾ ಕಾರ್ಯಕ್ರಮವೂ ನಡೆಯಲಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ.

ತಿಪ್ಪಿನಘಟ್ಟಮ್ಮ ದೇವಿ: ಇಲ್ಲಿನ ಜೋಗಿಮಟ್ಟಿ ರಸ್ತೆಯ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯ ದೇಗುಲದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ 14ರಂದು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 3ಕ್ಕೆ ಮಹಾಭಿಷೇಕ, ಬೆಳಿಗ್ಗೆ 5ಕ್ಕೆ ದೇವಿಯ ಮೂರ್ತಿಗೆ ವಿಶೇಷ ಪುಷ್ಪಾಲಂಕಾರ, ಬೆಳಿಗ್ಗೆ 6ಕ್ಕೆ ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 9ರ ವರೆಗೆ ಭಕ್ತರಿಗೆ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ.

ಇಲ್ಲಿನ ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವಿ, ದೊಡ್ಡಪೇಟೆಯ ರಾಜ ಉತ್ಸವಾಂಬ ಉಚ್ಚಂಗಿಯಲ್ಲಮ್ಮ ದೇವಿ, ಕಣಿವೆಮಾರಮ್ಮ ದೇವಿ ದೇಗುಲದಲ್ಲಿ ಹಬ್ಬದ ಅಂಗವಾಗಿ ಅಂದು ಬೆಳಿಗ್ಗೆ 5.30ಕ್ಕೆ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ಸೇವೆ ನಡೆಯಲಿದೆ. ರಾತ್ರಿ 9ರವರೆಗೆ ಭಕ್ತರಿಗೆ ದರ್ಶನಕ್ಕೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇಗುಲ ಅಭಿವೃದ್ಧಿ ಸಮಿತಿ ತಿಳಿಸಿದೆ.

ಬೆಟ್ಟದ ಗಣಪತಿ, ಹಿಡಂಬೇಶ್ವರ ಸ್ವಾಮಿ, ಸಂಪಿಗೆ ಸಿದ್ದೇಶ್ವರ ಸ್ವಾಮಿ, ಕೊಲ್ಲಾಪುರದ ಮಹಾಲಕ್ಷ್ಮಿ, ಅಂತರಘಟ್ಟಮ್ಮ ದೇವಿ ಸೇರಿ ಇನ್ನೂ ಅನೇಕ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

13ಕ್ಕೆ ಆಭರಣ ಮೆರವಣಿಗೆ: ಇಲ್ಲಿನ ರಾಜ ಬೀದಿಗಳಲ್ಲಿ 13 ರಂದು ಸಂಜೆ 5ಕ್ಕೆ ಅಯ್ಯಪ್ಪಸ್ವಾಮಿಯ ಆಭರಣದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ಕುಮಾರ್ ತಿಳಿಸಿದ್ದಾರೆ.

ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ 14ರಂದು ಸಂಜೆ 5ಕ್ಕೆ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ವಾಮಿಯ 21ನೇ ವರ್ಷದ ದೀಪೋತ್ಸವ ಕೂಡ ಜರುಗಲಿದೆ ಎಂದು ತಿಳಿಸಿದ್ದಾರೆ.

ಮಹೇಶ್ವರ ಜಾತ್ರೆ: ಮಹಿಳೆಯರಿಗಿಲ್ಲ ಅವಕಾಶ

ತಾಲ್ಲೂಕಿನ ಭೀಮಸಮುದ್ರ ಹೋಬಳಿಯ ಬಸವಾಪುರ ಮಜುರೆಯ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ದೇಗುಲದಲ್ಲಿ ಇದೇ 12ರಂದು
ಮಹೇಶ್ವರ ಜಾತ್ರೆ ಹಾಗೂ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಮಹೇಶ್ವರನ ಜಾತ್ರಾ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಸಂಜೆ 6ಕ್ಕೆ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವದಲ್ಲಿ ಸ್ತ್ರೀಯರು ಪಾಲ್ಗೊಳ್ಳಬಹುದು ಎಂದು ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ವಿ.ಮಲ್ಲಿಕಾರ್ಜನಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.