ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹೆದ್ದಾರಿ–45| ಎರಡು ವರ್ಷ ಕಳೆದರೂ ನಿರ್ಮಾಣವಾಗದ ಸೇತುವೆ

ಗುತ್ತಿಗೆದಾರರ ವಿಳಂಬ ನೀತಿಯಿಂದ ರಾಜ್ಯ ಹೆದ್ದಾರಿ–45ರಲ್ಲಿ ಹಾಳುಬಿದ್ದ ಸೇತುವೆ
Last Updated 7 ಫೆಬ್ರುವರಿ 2023, 3:11 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನದ ಎದುರು ಹಾದು ಹೋಗಿರುವ ರಾಜ್ಯ ಹೆದ್ದಾರಿ–45ರಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿ ಎರಡು ವರ್ಷ ಕಳೆದರೂ ಶುರು ಆಗದಿರುವುದರಿಂದ ಜೀವಭಯದಲ್ಲಿಯೇ ವಾಹನ ಸವಾರರು ಸಂಚರಿಸಬೇಕಿದೆ.

ರಾಜ್ಯ ಹೆದ್ದಾರಿ–45ರಲ್ಲಿ ನಾಯಕನಹಟ್ಟಿಯ ದೊಡ್ಡಕೆರೆ ಮತ್ತು ಚಿಕ್ಕಕೆರೆಯ ಕಾಲುವೆಗಳು, ಹಳ್ಳಗಳು ಹಾದುಹೋಗುತ್ತವೆ. ಇದೇ ಹೆದ್ದಾರಿಯಲ್ಲಿ ಪಟ್ಟಣದ ಅನತಿ ದೂರದಲ್ಲೇ ದೊಡ್ಡಹಳ್ಳ ಇದ್ದು, ಇದಕ್ಕೆ 8 ಕಣ್ಣಿನ ಬೃಹತ್ ಸೇತುವೆ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಸೇತುವೆಯೂ ಶಿಥಿಲಗೊಂಡಿದ್ದು, ನಾಯಕನಹಟ್ಟಿ ಪಟ್ಟಣದಿಂದ ಜಿಲ್ಲಾ ಹೆದ್ದಾರಿಯ ಮೂಲಕ ಹಾಯ್ಕಲ್, ಬೆಳಗಟ್ಟ, ಚಿತ್ರದುರ್ಗ ನಗರವನ್ನು ಮತ್ತು ರಾಷ್ಟ್ರೀಯ ಹೆದ್ದಾರಿ 150ಎ ಮಾರ್ಗದಲ್ಲಿರುವ ಚಳ್ಳಕೆರೆ, ಹಿರಿಯೂರು, ಬೆಂಗಳೂರು ಸಂಪರ್ಕಿಸಲು ಈ ರಸ್ತೆ ಪ್ರಮುಖವಾಗಿದೆ. ಜತೆಗೆ ಚಳ್ಳಕೆರೆಯಿಂದ ದಾವಣಗೆರೆ ಭಾಗಕ್ಕೂ ಇದೇ ರಸ್ತೆಯೇ ಸಂಪರ್ಕ ಕಲ್ಪಿಸುತ್ತದೆ.

ಪಟ್ಟಣದಲ್ಲಿ →ಹಾದುಹೋಗಿರುವ ರಾಜ್ಯ ಹೆದ್ದಾರಿ–45ರಲ್ಲಿ ನಿತ್ಯ ನೂರಾರು ವಾಹನಗಳು, ಬಸ್‌ಗಳು, ಖಾಸಗಿ ವಾಹನಗಳು ಸಂಚರಿಸುತ್ತವೆ. ಹಾಗೆ ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರಸ್ವಾಮಿ ಸಮುದಾಯ ಭವನದ ಪಕ್ಕದಲ್ಲಿ ಹಾದುಹೋಗಿರುವ ಚಿಕ್ಕಹಳ್ಳಕ್ಕೆ ಯಾವುದೇ ಸೇತುವೆಗಳಿಲ್ಲ. ಇದರ ಪರಿಣಾಮ ಮಳೆಗಾಲದಲ್ಲಿ ಚಿಕ್ಕಹಳ್ಳದಿಂದ ಹರಿದು ಬರುವ ನೀರು ಮತ್ತು ಪಟ್ಟಣದ ಕೆಲ ವಾರ್ಡ್‌ಗಳ ಚರಂಡಿ ನೀರು ರಾಜ್ಯ ಹೆದ್ದಾರಿಯ ಮೇಲೆ ನಿಲ್ಲುತ್ತದೆ. ಇದರಿಂದ ಬೃಹತ್‌ ಪ್ರಮಾಣದ ಕಂದಕಗಳು ಸೃಷ್ಟಿಯಾಗಿವೆ. ಹಲವು ವರ್ಷಗಳಿಂದ ಈ ಸಮಸ್ಯೆ ಹಾಗೇ ಮುಂದುವರಿಯುತ್ತಿದೆ. 2021ರ ಫೆಬ್ರುವರಿ ತಿಂಗಳಲ್ಲಿ ಚಿಕ್ಕಹಳ್ಳಕ್ಕೆ ಸುಸಜ್ಜಿತ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಅಗೆದು ಪಕ್ಕದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ, ತಾತ್ಕಾಲಿಕ ರಸ್ತೆ ಸಹ ಹದಗೆಟ್ಟು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಜತೆಗೆ ಸೇತುವೆ ನಿರ್ಮಾಣಕ್ಕೆ ಅಗೆದ ಜಾಗಕ್ಕೆ ಕೆಲ ಟ್ರ್ಯಾಕ್ಟರ್‌ಗಳು ಪಟ್ಟಣದಲ್ಲಿ ಉತ್ಪಾದನೆಯಾಗುತ್ತಿರುವ ಹಳೆ ಮನೆಯ ತ್ಯಾಜ್ಯವನ್ನು ತಂದು ಇಲ್ಲಿಯೇ ಸುರಿಯುತ್ತಿದ್ದಾರೆ. ಇದರಿಂದ ತಾತ್ಕಾಲಿಕ ರಸ್ತೆಯಲ್ಲಿ ಗುಂಡಿಗಳು ಬಿದ್ದಿದೆ. ಜತೆಗೆ ಯಾವುದೇ ವಾಹನ ಸಂಚರಿಸಿದರೂ ವಿಪರೀತ ದೂಳು ಆವರಿಸಿ ಸುಗಮ ರಸ್ತೆ ಸಂಚಾರ ಸಾಧ್ಯವಾಗುತ್ತಿಲ್ಲ. ಪರಿಣಾಮ ನಿತ್ಯ ಬೈಕ್ ಸವಾರರು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರು ಇಡೀ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಿಪ್ಪೇರುದ್ರಸ್ವಾಮಿ ಮಹಾಜಾತ್ರೆಗೆ ಅಡ್ಡಿ

ಪಟ್ಟಣದಲ್ಲಿ ಮಾರ್ಚ್ 10ರಂದು ಗುರುತಿಪ್ಪೇರುದ್ರಸ್ವಾಮಿಯ ವಾರ್ಷಿಕ ಮಹಾಜಾತ್ರೆ ನಡೆಯಲಿದ್ದು, ರಸ್ತೆ ಹಾಳಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಲಿದೆ. ಹೀಗಿದ್ದರೂ ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಚಿಕ್ಕಹಳ್ಳಕ್ಕೆ ಸುಸಜ್ಜಿತವಾದ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿಲ್ಲ. ಎರಡು ಜಾತ್ರೆ ಕಳೆದರೂ ಸೇತುವೆ ನಿರ್ಮಾಣ ಕಾಮಗಾರಿ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

***

2021ರ ಫೆಬ್ರುವರಿ ತಿಂಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಅಧಿಕಾರಿಗಳು ಮುಂದಾಗಿದ್ದರು. ಕಾರಣಾಂತರದಿಂದ ಕಾಮಗಾರಿ ಸ್ಥಗಿತವಾಗಿತ್ತು. ಎರಡು ಜಾತ್ರೆಗಳು ಕಳೆದಿವೆ. ಇನ್ನಾದರೂ ಕಾಮಗಾರಿಗೆ ಚಾಲನೆ ನೀಡಬೇಕು.

– ಟಿ. ರುದ್ರಮುನಿ, ನಾಯಕನಹಟ್ಟಿ

ಸೇತುವೆ ಕಾಮಗಾರಿ ನಿರ್ಮಾಣಕ್ಕಿದ್ದ ಎಲ್ಲ ತಾಂತ್ರಿಕ ಸಮಸ್ಯೆಗಳು ಬಗೆಹರಿದಿವೆ. ನಾಳೆಯಿಂದಲೇ ಕಾಮಗಾರಿಯನ್ನು ಆರಂಭಿಸಲಾಗುವುದು.

– ವಿಜಯಬಾಸ್ಕರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT