ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ನಗರದ ಮತದಾನ ಹೆಚ್ಚಳವೇ ಸವಾಲು

ಚಿತ್ರದುರ್ಗ, ಹಿರಿಯೂರಿನಲ್ಲಿ ಆಸಕ್ತಿ ತೋರದ ಮತದಾರ, ಜಿಲ್ಲಾ ಸ್ವೀಪ್‌ ಸಮಿತಿಯಿಂದ ಜಾಗೃತಿ
Published 13 ಏಪ್ರಿಲ್ 2024, 7:18 IST
Last Updated 13 ಏಪ್ರಿಲ್ 2024, 7:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಚುನಾವಣಾ ಆಯೋಗ ಲೋಕಸಭಾ ಚುನಾವಣೆ ಘೋಷಿಸಿದ ದಿನದಿಂದ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮಿತಿ ಮತದಾನ ಜಾಗೃತಿ ಹಾಗೂ ಶೇಕಡವಾರು ಮತದಾನ ಪ್ರಮಾಣ ಹೆಚ್ಚಳ ಕಾರ್ಯಕ್ಕೆ ನಿತ್ಯ ಶ್ರಮಿಸುತ್ತಿದೆ.

ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 70.71ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಕನಿಷ್ಠ ಶೇ 5ರಷ್ಟು ಮತದಾನ ಪ್ರಮಾಣ ಹೆಚ್ಚಳಕ್ಕೆ ರೂಪುರೇಷೆ ಸಿದ್ಧಗೊಳಿಸಿ ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತಿದೆ. ಈ ಮೂಲಕ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಮುಂದಾಗಿದೆ.

ಮತದಾನದ ದಿನ ರಜೆ ಇರುತ್ತದೆ. ಅದರ ಹಿಂದಿನ ಅಥವಾ ಮುಂದಿನ ದಿನ ರಜೆ ಇದ್ದರೆ, ವಾರಾಂತ್ಯವಾಗಿದ್ದರೆ ಮತದಾನವನ್ನು ಮರೆಯುವ ನಗರ ಪ್ರದೇಶದ ಜನರು ಪ್ರವಾಸದ ಮೋಜಿಗೆ ನಗರ ಬಿಟ್ಟು ಹೊರಡುತ್ತಾರೆ. ಈ ಕಾರಣದಿಂದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ನಗರ ಪ್ರದೇಶಗಳಲ್ಲೇ ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವುದೂ ಆತಂಕದ ವಿಷಯವಾಗಿದೆ.

ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಕಾಳಜಿವಹಿಸಿ ಮತದಾರರಿಗೆ ಮತದಾನದ ಮಹತ್ವ ತಿಳಿಸುವ ಕಾರ್ಯ ನಡೆಸುತ್ತಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 535 ಮತಗಟ್ಟೆಗಳಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಚಿತ್ರದುರ್ಗ, ಹಿರಿಯೂರು ಕ್ಷೇತ್ರದಲ್ಲೇ ಅತೀ ಕಡಿಮೆ ಮತದಾನವಾಗಿರುವುದು ಅಚ್ಚರಿಯ ಸಂಗತಿ. ಈ ಅಂಕಿ ಸಂಖ್ಯೆ ಆಧಾರದಲ್ಲಿ ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ ಮತದಾನ ಪ್ರಮಾಣ ಹೆಚ್ಚಳ ಮಾಡಬೇಕೆಂದು ಸರಣಿ ಕಾರ್ಯಕ್ರಮ ರೂಪಿಸಿದ್ದಾರೆ.

ಯುವ ಮತದಾರರನ್ನು ಆಕರ್ಷಿಸಲು ನಗರ ಸೇರಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಗೃತಿ ಫಲಕ ಹಾಕಲಾಗಿದೆ. ಯುವಕರನ್ನು ಮತದಾನಕದತ್ತ ಪ್ರೇರೇಪಿಸಬೇಕೆಂದು ಆಯ್ದ ಪ್ರದೇಶದಲ್ಲಿ ಸೆಲ್ಫಿ ಪಾಯಿಂಟ್‌ ಸ್ಥಾಪಿಸಲಾಗಿದೆ. ಕಡಿಮೆ ಮತದಾನ ಆಗಿರುವ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಚುನಾವಣಾ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಮನೆಮನೆಗೆ ತೆರಳಿ ಏ. 26ರಂದು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಜತೆಗೆ ರಂಗೋಲಿ ಸ್ಪರ್ಧೆ, ಬೈಕ್‌ ರ‍್ಯಾಲಿ, ಜಾಥಾ, ಬೀದಿನಾಟಕ ಸೇರಿ ಇತರೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಮೊದಲ ಹಂತದಲ್ಲಿ ಶೇ 50ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗಿದೆ. ಸರಸ್ವತಿ ಕಾನೂನು ಕಾಲೇಜು, ಸಿ.ಕೆ.ಪುರ, ಕೆಳಗೋಟೆ, ಮುನ್ಸಿಪಲ್‌ ಕಾಲೊನಿ ಭಾಗದ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5ರಂತೆ ಒಟ್ಟು 30 ಸಖಿ (ಪಿಂಕ್) ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ತಲಾ 1ರಂತೆ ಆರು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 6 ‘ಯಂಗ್ ಬೂತ್‌’ ಹಾಗೂ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಚಿತ್ರದುರ್ಗದ ಐತಿಹಾಸಿಕ ಕೋಟೆ, ವಿ.ವಿ.ಸಾಗರ, ಇತರೆ ಚಿತ್ರಗಳನ್ನು ಬರೆಸಲು ಸಿದ್ಧತೆ ನಡೆಸಲಾಗಿದೆ.

ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೇ ಸ್ವಯಂ ಇಚ್ಛೆಯಿಂದ ಮತದಾನ ಮಾಡಬೇಕು. ಯಾರಾದರೂ ಆಮಿಷಕ್ಕೆ ಒಳಪಡಿಸಲು ಪ್ರಯತ್ನಿಸಿದರೆ ಅಂತಹ ವಿಚಾರಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿಗೆ ಹಾಗೂ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಅಧಿಕಾರಿಗಳ ತಂಡ ಮನವಿ ಮಾಡುತ್ತಿದೆ.

ಎಸ್‌.ಜೆ.ಸೋಮಶೇಖರ್‌
ಎಸ್‌.ಜೆ.ಸೋಮಶೇಖರ್‌

ಜಿಲ್ಲೆಯ ಗ್ರಾಮೀಣ ಭಾಗಕ್ಕಿಂತಲೂ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಯುವ ಮತದಾರರನ್ನು ಸೆಳೆಯಲು ಸಾಮಾಜಿಕ ಜಾಲತಾಣ ಬಳಸಿಕೊಳ್ಳಲಾಗುತ್ತಿದೆ.

-ಎಸ್‌.ಜೆ.ಸೋಮಶೇಖರ್‌ ಜಿಲ್ಲಾ ಪಂಚಾಯಿತಿ ಸಿಇಒ

2019ರ ಚುನಾವಣೆಯ ಮತದಾನ ಪ್ರಮಾಣ ತಾಲ್ಲೂಕು;ಶೇಕಡಾವರು ಮೊಳಕಾಲ್ಮುರು;72.68 ಚಳ್ಳಕೆರೆ;72.22 ಚಿತ್ರದುರ್ಗ;68.7 1 ಹಿರಿಯೂರು;67.62 ಹೊಸದುರ್ಗ;72.94 ಹೊಳಲ್ಕೆರೆ;72.71 ಒಟ್ಟು;70.71

‘ವಲಸೆ’ ಮುಖ್ಯ ಕಾರಣ ಜೀವನ ನಿರ್ವಹಣೆಗೆ ವರ್ಷದಿಂದ ವರ್ಷಕ್ಕೆ ಉದ್ಯೋಗ ಅರಸಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿರುವುದೇ ಮತದಾನ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ. ಮತಗಟ್ಟೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡ ಸಂಗ್ರಹಿಸಿದ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ‘ನಗರಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಮಾಣ ಕೊಂಚ ಹೆಚ್ಚಾಗಿದೆ. ಆದರೆ ವಲಸೆಯಿಂದ ಪೂರ್ಣ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಬಹುತೇಕರು ಮತದಾನಕ್ಕೆ ನಿರ್ಲಕ್ಷ್ಯ ವಹಿಸುವುದು ಕುಸಿತಕ್ಕೆ ಕಾರಣ’ ಎನ್ನುತ್ತಾರೆ ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷ ಎಸ್‌.ಜೆ.ಸೋಮಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT