ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣೆ: ದೇಶದಲ್ಲಿ ಚಿತ್ರದುರ್ಗ 229ನೇ ಸ್ಥಾನ

ರಾಜ್ಯದಲ್ಲಿ ಕಳೆದ ಬಾರಿ 23; ಈ ಬಾರಿ 11ನೇ ನಗರ
Last Updated 3 ಜುಲೈ 2018, 17:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ವಚ್ಛ ಸರ್ವೇಕ್ಷಣೆ 2018 ಸಮೀಕ್ಷೆಯಲ್ಲಿ ಚಿತ್ರದುರ್ಗ ರಾಜ್ಯದ 11ನೇ ನಗರ ಎಂಬ ಕೀರ್ತಿಗೆ ಪಾತ್ರವಾಗಿದೆ. ದೇಶದಲ್ಲಿ 229ನೇ ಸ್ಥಾನ ಪಡೆದುಕೊಂಡಿದೆ.

ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ನಗರ ದೇಶದಲ್ಲಿ 337ನೇ ಸ್ಥಾನ ಪಡೆದುಕೊಂಡಿತ್ತು. ಈ ವರ್ಷದಲ್ಲಿ ನಡೆದ ಸಮೀಕ್ಷೆಯಲ್ಲಿ 108 ಸ್ಥಾನ ಕೆಳಗೆ ಇಳಿದಿದೆ. ನಗರದ ಸ್ವಚ್ಛತೆಗೆ ಮಹತ್ವ ನೀಡಿದ್ದೇ ಸ್ಥಾನ ಮೇಲಕ್ಕೇರಲು ಕಾರಣ ಎನ್ನಲಾಗಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಛ ಭಾರತ ಅಭಿಯಾನದಡಿ ಈ ವರ್ಷ ದೇಶದ 4,041 ನಗರ ಹಾಗೂ ಪಟ್ಟಣಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ಚಿತ್ರದುರ್ಗ ನಗರವೂ ಸ್ಥಾನ ಪಡೆದಿತ್ತು. ನಗರಾಭಿವೃದ್ಧಿ ಸಚಿವಾಲಯದ ತಂಡ ನಗರಕ್ಕೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನೂ ಪಡೆದಿತ್ತು ಎನ್ನುತ್ತಾರೆ ನಗರಸಭೆ ಪರಿಸರ ಎಂಜಿನಿಯರ್ ಜಾಫರ್.

ಜನವರಿಯಿಂದ ಏಪ್ರಿಲ್ ತಿಂಗಳವರೆಗೂ ಆಗಿಂದಾಗ್ಗೆ ಸಮೀಕ್ಷೆ ನಡೆಯುತ್ತದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಸಮೀಕ್ಷೆ ಫಲಿತಾಂಶ ಬಹಿರಂಗವಾಗುತ್ತದೆ. ಕಳೆದ ವರ್ಷ ಜೂನ್‌ನಲ್ಲಿ ಫಲಿತಾಂಶ ಬಂದಾಗ ಚಿತ್ರದುರ್ಗವನ್ನು ಉತ್ತಮ ಸ್ಥಾನಕ್ಕೇರಿಸುವ ಸಂಕಲ್ಪವನ್ನು ನಗರಸಭೆ ಮಾಡಿತ್ತು. ಅದರಂತೆ ನಗರದ ಸ್ವಚ್ಛತೆಗಾಗಿ ವಿವಿಧ ಕ್ರಮ ಅನುಸರಿಸಿತ್ತು ಎನ್ನುತ್ತಾರೆ ಅವರು.

ಮೂರು ಹಂತದಲ್ಲಿ ಸಮೀಕ್ಷೆ:ಸರ್ವೇಕ್ಷಣಾ ತಂಡ ಮೂರು ಹಂತದಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸುತ್ತದೆ. ಅದಕ್ಕಾಗಿ 4,000 ಅಂಕ ನಿಗದಿ ಮಾಡಿದೆ. ಮೊದಲ ಹಂತದಲ್ಲಿ ನಗರಸಭೆಯಿಂದ ಸ್ವಚ್ಛತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತದೆ. ಕಸ ಸಂಗ್ರಹ ವಾಹನಗಳ ಸಂಖ್ಯೆ, ಕಸದ ವಿಂಗಡಣೆ ಹಾಗೂ ನಿರ್ವಹಣೆ ಬಗ್ಗೆ ಮೊದಲ ಹಂತದಲ್ಲಿ ತಂಡಕ್ಕೆ ಮಾಹಿತಿ ಸಿಗುತ್ತದೆ. ಇದಕ್ಕೆ 1,400 ಅಂಕ ನಿಗದಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಸರ್ವೇಕ್ಷಣಾ ತಂಡ ನಗರಕ್ಕೆ ಪ್ರತ್ಯಕ್ಷವಾಗಿ ಭೇಟಿ ನೀಡುತ್ತದೆ. ನಗರದ ಪ್ರಮುಖ ಸ್ಥಳಗಳಲ್ಲಿ ಕಸವನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ. ಸ್ವಚ್ಛತಾ ಸಿಬ್ಬಂದಿಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆಯುತ್ತದೆ. ಇದಕ್ಕೆ 1,200 ಅಂಕ ನಿಗದಿ ಮಾಡಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅವಕಾಶ:ಮೂರನೇ ಹಂತದಲ್ಲಿ ವಿಶೇಷವಾಗಿ ಸಾರ್ವಜನಿಕರನ್ನು ಭೇಟಿಯಾಗಿದ್ದ ತಂಡ ಮಾಹಿತಿ ಪಡೆದಿದೆ. ಈ ಹಂತಕ್ಕೆ 1,400 ಅಂಕಗಳನ್ನು ನಿಗದಿ ಮಾಡಲಾಗಿದೆ. ಎರಡೂ ಹಂತಗಳಿಗಿಂತಲೂ ಸರ್ವೇಕ್ಷಣಾ ತಂಡ ಸಾರ್ವಜನಿಕ ಭೇಟಿ ಹಂತಕ್ಕೆ ಮೊದಲ ಆದ್ಯತೆ ನೀಡುತ್ತದೆ. ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಫಲಿತಾಂಶ ಈಗ ಪ್ರಕಟಗೊಂಡಿದೆ.

‘ನಾನು ಅಧ್ಯಕ್ಷನಾಗಿದ್ದಾಗ ಸ್ವಚ್ಛತೆಗೆ ಸಾಧ್ಯವಾದಷ್ಟು ಆದ್ಯತೆ ನೀಡಿದ್ದೆ. ನಗರ ವ್ಯಾಪ್ತಿಯಲ್ಲಿನ ಬಹುತೇಕ ಹೊಂಡ, ಪುಷ್ಕರಣಿಗಳಲ್ಲಿನ ಹೂಳನ್ನು ಎತ್ತುವ ಮೂಲಕ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದೆ. ಸ್ವಚ್ಛ ಸರ್ವೇಕ್ಷಣೆಯಡಿ ಸಹಿ ಸಂಗ್ರಹ, ಕಸ ವಿಲೇವಾರಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮನೆ ಮನೆಗೆ ಅಭಿಯಾನದ ಸ್ಟಿಕ್ಕರ್, ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಸೈಕಲ್ ಜಾಥಾ, ಮ್ಯಾರಥಾನ್ ಓಟ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿದ್ದೆವು’ ಎನ್ನುತ್ತಾರೆ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಂಜುನಾಥ ಗೊಪ್ಪೆ.

ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತೆಗಾಗಿ ರ‍್ಯಾಂಕಿಂಗ್‌ ನೀಡಲು 500 ನಗರಗಳಲ್ಲಿ (ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಜನ ಸಂಖ್ಯೆಯ) ಎರಡನೇ ಸರ್ವೇಕ್ಷಣಾ ಸಮೀಕ್ಷೆ ನಡೆದಿದ್ದು, 229 ಸ್ಥಾನ ಪಡೆದಿರುವುದು ಸಂತಸದ ವಿಚಾರ ಎನ್ನುತ್ತಾರೆ ಪೌರಾಯುಕ್ತ ಚಂದ್ರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT