ಚಿತ್ರದುರ್ಗ: ‘ಕೊನೆ ಉಸಿರು ಇರುವವರೆಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯೇ ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧಿಪತಿಯಾಗಿ ಮುಂದುವರಿಯಬೇಕು. ಶ್ರೀಗಳ ನಿವೃತ್ತಿ ಘೋಷಣೆಗೆ ಒತ್ತಾಯಿಸಿ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ ಸಭೆ ಅನಧಿಕೃತ. ನಿವೃತ್ತಿಗೆ ಒತ್ತಾಯಿಸಿದವರು ಕೂಡಲೇ ಶ್ರೀಗಳ ಪದತಲಕ್ಕೆ ಬಂದು ಕ್ಷಮೆ ಕೋರಬೇಕು’ ಎಂದು ಮಠದ ಭಕ್ತರು ಒಕ್ಕೊರಲಿನಿಂದ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಭಾನುವಾರ ನಡೆದಿದ್ದ ಸಾಧು ಲಿಂಗಾಯತ ಮುಖಂಡರ ಸಭೆಗೆ ಪ್ರತಿಯಾಗಿ ಸೋಮವಾರ ತಾಲ್ಲೂಕಿನ ಸಿರಿಗೆರೆ ಮಠದಲ್ಲಿ ಭಕ್ತರ ಸಭೆ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಮಂದಿ ಭಾವುಕರಾಗಿ ಪ್ರತಿಕ್ರಿಯಿಸಿದರು. ದಾವಣಗೆರೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಸಮಾಜ ಒಡೆಯಲು ಯತ್ನಿಸುತ್ತಿರುವ ಸ್ವಾರ್ಥಿಗಳನ್ನು ಮಠದಿಂದ ಬಹಿಷ್ಕರಿಸಬೇಕು ಎಂದು ಆಗ್ರಹಿಸಿದರು.
‘ಶ್ರೀಗಳು ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅವರ ಪ್ರಯತ್ನದಿಂದಾಗಿ ಈ ಭಾಗದ 45ಕ್ಕೂ ಹೆಚ್ಚು ಕೆರೆಗಳಿಗೆ ನೀರು ಬಂದಿದೆ. ಅವರು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ. 188 ದೇಶಗಳಲ್ಲಿ ಸಿರಿಗೆರೆ ಮಠದ ಕೀರ್ತಿ ಸಾರಿದ್ದಾರೆ. ಶ್ರೀಗಳು ಎರಡನೇ ವಿವೇಕಾನಂದ ಇದ್ದಂತೆ. ಅವರ ವಿರುದ್ಧ ಮತ್ತೆ ಹಗುರವಾಗಿ ಮಾತನಾಡಿದರೆ ಅವರೆಲ್ಲರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಇದು ಸಭೆ ಕೇವಲ ಸಾಂಕೇತಿಕ. ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.
‘ಶ್ರೀಗಳಿಗೆ ದೃಷ್ಟಿ ದೋಷವಿಲ್ಲ, ಆರೋಗ್ಯ ಕೆಟ್ಟಿಲ್ಲ. ಆರೋಗ್ಯವಂತರಾಗಿರುವ ಅವರನ್ನು ಪೀಠ ತ್ಯಾಗ ಮಾಡುವಂತೆ ಯಾರೂ ಕೇಳಕೂಡದು. ಏನೇ ಅಸಮಾಧಾನಗಳಿದ್ದರೂ ಮಠದ ಆವರಣಕ್ಕೆ ಬಂದು ಕೇಳಲಿ. ಅದನ್ನು ಬಿಟ್ಟು ಖಾಸಗಿ ರೆಸಾರ್ಟ್‌ನಲ್ಲಿ ಕುಳಿತು ಪ್ರಶ್ನಿಸಿದರೆ ನಾವು ಸುಮ್ಮನಿರಬೇಕಾ’ ಎಂದು ಪ್ರಶ್ನಿಸಿದರು.
‘ಆದಿಚುಂಚನಗಿರಿ ಮಠ, ಪೇಜಾವರ ಮಠ, ಸಿದ್ಧಗಂಗಾ ಮಠದ ಹಲವು ಶ್ರೀಗಳು ಪೀಠಾಧಿಪತಿಯಾಗಿಯೇ ಐಕ್ಯರಾಗಿದ್ದಾರೆ. ಅದೇ ರೀತಿ ಶಿವಮೂರ್ತಿ ಶಿವಾಚಾರ್ಯರೂ ಮುಂದುವರಿಯಬೇಕು. ಸ್ವಾಮೀಜಿ ಬಯಸಿದರೆ ಎಷ್ಟಾದರೂ ಮರಿ ಸ್ವಾಮಿಗಳನ್ನು ನೇಮಕ ಮಾಡಿಕೊಳ್ಳಲಿ’ ಎಂದರು.
‘ಶಾಸಕ ಶಾಮನೂರು ಶಿವಶಂಕರಪ್ಪ ಬಾಪೂಜಿ ವಿದ್ಯಾಸಂಸ್ಥೆ ಹೇಗೆ ಪಡೆದರು ಎಂಬುದು ಗೊತ್ತಿದೆ. ಹಲವು ಬಾರಿ ಶಾಸಕ, ಸಚಿವರಾಗಿದ್ದಾರೆ. ಅವರೇಕೆ ನಿವೃತ್ತಿ ಘೋಷಣೆ ಮಾಡುವುದಿಲ್ಲ? ಶಾಸಕರು, ಸಚಿವರೇ ಶೈಕ್ಷಣಿಕ ಸಂಸ್ಥೆ ಮಾಡಿಕೊಂಡು ಸೀಟುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಹೀಗಿರುವಾಗ ಮಠದ ಶಾಲೆಗಳು ಸೊರಗುತ್ತಿವೆ ಎಂದು ಪ್ರಶ್ನಿಸುವುದು ಎಷ್ಟು ಸರಿ’ ಎಂದು ಕಿಡಿಕಾರಿದರು.
ವೇದಿಕೆಯಲ್ಲಿ ಸಾಧು ಸದ್ಧರ್ಮ ವೀರಶೈವ ಸಂಘದ ಪದಾಧಿಕಾರಿಗಳು ಹಾಜರಿದ್ದರು. 13 ಜಿಲ್ಲೆಗಳಿಂದ ಬಂದಿದ್ದ ಭಕ್ತರು ಭಾಗವಹಿಸಿದ್ದರು. ಮಠದ ಆವರಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.