ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಳಕಳಿಯ ಧಾರ್ಮಿಕ ನಾಯಕ: ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ

ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮ ಇಂದಿನಿಂದ
Last Updated 20 ಸೆಪ್ಟೆಂಬರ್ 2022, 1:48 IST
ಅಕ್ಷರ ಗಾತ್ರ

ಸಮಾಜದಲ್ಲಿ ಹಾಸೊಹೊಕ್ಕಾಗಿದ್ದ ಮೌಢ್ಯಗಳ ನಿವಾರಣೆಗೆ ಶ್ರಮಿಸಿರುವ ಕೆಲವೇ ಮಠಗಳಲ್ಲಿ ಸಿರಿಗೆರೆಯ ತರಳಬಾಳು ಮಠ ಪ್ರಮುಖವಾದುದು. ಮಠದ ಸಮಾಜಮುಖಿ ಕೆಲಸಗಳಿಗೆ ಭದ್ರ ಬುನಾದಿ ಹಾಕಿದ ಕೀರ್ತಿ 20ನೇ ಗುರು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಗೆ (1914-1992) ಸಲ್ಲುತ್ತದೆ.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಸಿರಿಗೆರೆಯಲ್ಲಿ 1946ರಲ್ಲಿ ಪ್ರಾರಂಭಿಸಿದ ಪ್ರೌಢಶಾಲೆ ಮತ್ತು ಉಚಿತ ವಿದ್ಯಾರ್ಥಿ ನಿಲಯಗಳಲ್ಲಿ ಸಹಪಂಕ್ತಿ ಭೋಜನ ಆರಂಭಿಸುವ ಮೂಲಕ ಅಸ್ಪೃಶ್ಯತೆ ನಿವಾರಣೆ ಹಾಗೂ ಜಾತ್ಯತೀತತೆಯ ಅರಿವು ಮೂಡಿಸಿದ್ದರು. ಸಿರಿಗೆರೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಜಿ. ದುಗ್ಗಪ್ಪ ಹರಿಜನ ಅವರೊಂದಿಗೆ ಸಹಭೋಜನ ಮಾಡುವಷ್ಟು ಆಪ್ತರಾಗಿದ್ದರು.

ಜಗಳೂರಿನ ಆದರ್ಶ ರಾಜಕಾರಣಿ ಜೆ.ಎಂ. ಇಮಾಮ್ ಸಾಬ್ ಮುಂತಾದವರೊಂದಿಗೆ ನಿಕಟ ಒಡನಾಟ ಹೊಂದಿದ್ದರು. ಶಿಷ್ಯರ ಬಹಿಷ್ಕಾರ ಬೆದರಿಕೆಗಳಿಗೆ ಬಗ್ಗದೆ ಚಿತ್ರದುರ್ಗ ಜಿಲ್ಲೆಯ ದೊಗ್ಗನಾಳಿನಲ್ಲಿ ನಡೆದ ಹರಿಜನ ಸಮುದಾಯದವರೊಬ್ಬರ ಮದುವೆಯಲ್ಲಿ ಭಾಗವಹಿಸಿದ್ದರು. ಭರಮಸಾಗರದಲ್ಲಿ ಮಸೀದಿಯನ್ನು ಉದ್ಘಾಟಿಸಿದರು. ಕೂಡಲಿ ಶೃಂಗೇರಿ ಸ್ವಾಮೀಜಿ ಉತ್ಸವ ನಡೆಸಿದ್ದರು.

1962ರಲ್ಲಿ ಹುಟ್ಟುಹಾಕಿದ ತರಳಬಾಳು ವಿದ್ಯಾಸಂಸ್ಥೆಯು ಇಂದು ಮಧ್ಯ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ, ಶಿಶುವಿಹಾರದಿಂದ ಮೊದಲ್ಗೊಂಡು ಎಂಜಿನಿಯರಿಂಗ್ ಕಾಲೇಜುಗಳವರೆಗೆ 274 ಶಾಲೆ-ಕಾಲೇಜು-ಹಾಸ್ಟೆಲ್‍ಗಳನ್ನು ನಡೆಸುತ್ತಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಸಂಸ್ಥೆಯ ಆಶ್ರಯದಲ್ಲಿ ಇಂದು 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರವಚನ, ಸಂಗೀತ, ನಾಟಕ, ಸಾಹಿತ್ಯ ಪ್ರಕಟಣೆಗಳ ಮೂಲಕ ಶರಣರ ಜೀವನಾದರ್ಶಗಳು ಜನಮನದಲ್ಲಿ ಮೂಡುವಂತೆ ಮಾಡಲು ಅಕ್ಕನ ಬಳಗ, ಅಣ್ಣನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನ ಹಾಗೂ ಶರಣ ಸಮ್ಮೇಳನಗಳನ್ನು ಹುಟ್ಟುಹಾಕಿದರು. ಬೇರೆ ಬೇರೆ ಕಡೆ ನಡೆಯುವ ಶ್ರೀಮಠದ ತರಳಬಾಳು ಹುಣ್ಣಿಮೆ ಮಹೋತ್ಸವವು ಇಂದಿಗೂ ಶರಣತತ್ವ ಪ್ರಚಾರದ ಬಹುದೊಡ್ಡ ಪ್ರಭಾವಿ ಮಾಧ್ಯಮವಾಗಿದೆ. ಕಾಲ, ಕಾಯಕ ಹಾಗೂ ಕಾಸುಗಳ ಮಹತ್ವವನ್ನು ತಮ್ಮ ಜೀವನುದ್ದಕ್ಕೂ ಅರಿತು ನಡೆದವರು ಸ್ವಾಮೀಜಿ.

ಮೂಢನಂಬಿಕೆಗಳ ಕಡು ವಿರೋಧಿಯಾಗಿದ್ದ ಸ್ವಾಮೀಜಿಯವರು, ಮಕ್ಕಳ ಫಲ ಬೇಡಿ ಮಠಕ್ಕೆ ಬಂದ ಮುಗ್ಧ ಭಕ್ತರಿಗೆ ತಿಳಿ ಹೇಳಿ ವೈದ್ಯರಲ್ಲಿಗೆ ಕಳುಹಿಸುತ್ತಿದ್ದರು. ಕನ್ನಡ ಮತ್ತು ಸಂಸ್ಕೃತ ವಿದ್ವಾಂಸರಾಗಿದ್ದ ಅವರು ಹಲವಾರು ಕೃತಿಗಳನ್ನೂ ರಚಿಸಿದ್ದರು. ‘ಶತಮಾನೋತ್ಸವ ಸಂದೇಶ’, ‘ಅಣ್ಣ ಬಸವಣ್ಣ’, ‘ಮರಣವೇ ಮಹಾನವಮಿ’, ‘ಶರಣಸತಿ ಲಿಂಗಪತಿ’, ಮತ್ತು ‘ವಿಶ್ವಬಂಧು ಮರುಳಸಿದ್ಧ’ ಸ್ವಾಮೀಜಿ ಅವರು ರಚಿಸಿದ ನಾಟಕಗಳು.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ 1979ರ ಫೆಬ್ರುವರಿ 11ರಂದು ಅಧಿಕಾರವನ್ನು ವಹಿಸಿಕೊಟ್ಟ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು 1992ರ ಸೆಪ್ಟೆಂಬರ್‌ 24ರಂದು ಇಹಲೋಕ ತ್ಯಜಿಸಿದರು. ತಮ್ಮ ಗುರುಗಳು ತೋರಿದ ದಾರಿಯಲ್ಲಿ ಸಾಗುತ್ತಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಇಂದು ಶಿಕ್ಷಣ, ಸಾಹಿತ್ಯ, ವಿಜ್ಞಾನ, ಧರ್ಮ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಅಹರ್ನಿಶಿ ತೊಡಗಿಕೊಂಡು ಸರ್ವರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.

ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.20ರಿಂದ 24ರವರೆಗೆ ಸಿರಿಗೆರೆಯ ಗುರುಶಾಂತೇಶ್ವರ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ಮಹಾಮಂಟಪದಲ್ಲಿ ನಡೆಯಲಿದೆ.

(ಲೇಖಕರು: ನಿವೃತ್ತ ಪ್ರಾಂಶುಪಾಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT