ಗುರುವಾರ , ಮಾರ್ಚ್ 30, 2023
23 °C

ಮಕ್ಕಳಿಗೆ ಅರಿವು, ಆಚಾರ ಕಲಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ಶಿಶುವಿಹಾರ, ಕಾನ್ವೆಂಟ್‌ಗಳಲ್ಲಿ ಮಕ್ಕಳು ಅಕ್ಷರ ಕಲಿಯಬಹುದೇ ಹೊರತು ಅರಿವು-ಆಚಾರ–ವಿಚಾರಗಳನ್ನಲ್ಲ. ಹೀಗಾಗಿಯೇ ಮುಂದೆ ಮಗು ಕೌಟುಂಬಿಕ ಮೌಲ್ಯಗಳನ್ನು ಗಾಳಿಗೆ ತೂರಿ, ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುವಂತೆ ಮಾಡುವುದು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮದ 3ನೇ ದಿನವಾದ ಗುರುವಾರ ನಡೆದ ಪ್ರಾರ್ಥನೆ, ಧ್ಯಾನ, ಮೌನ, ಚಿಂತನ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದೀಪಾವಳಿ ‌ಸಂದರ್ಭದಲ್ಲಿ ಸಾಮಾನ್ಯ ಜನರು ಮದ್ದು ಸುಡುವ, ಹೊಸ ಬಟ್ಟೆ ತೊಡುವ, ವೈವಿಧ್ಯಮಯ ಆಹಾರ ಸ್ವೀಕರಿಸುವ ಮೂಲಕ ಆಚರಿಸುತ್ತಾರೆ. ಆದರೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಇಂಥ ಸಾಂಪ್ರದಾಯಿಕ ಹಬ್ಬಗಳಿಗೆ 12ನೇ ಶತಮಾನದ ಒಬ್ಬೊಬ್ಬ ಶರಣರ ಜಯಂತಿಯನ್ನು ಜೋಡಿಸಿ ಆಚರಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದರು. ಅದರಂತೆ ಇಂದು ಚನ್ನಬಸವಣ್ಣನವರ ಜಯಂತಿ. ಹೀಗೆ ಮಾಡುವುದರಿಂದ ಮಕ್ಕಳ ಬಾಳು, ಸುಧಾರಿಸುತ್ತದೆ ಎನ್ನುವ ನಿಲುವು ಅವರದ್ದಾಗಿತ್ತು’ ಎಂದು ತಿಳಿಸಿದರು.

‘ಅಂದು ಕುಟುಂಬದ ಸದಸ್ಯರೆಲ್ಲರೂ ಮನೆತನದ ಹಿತವನ್ನು ಬಯಸುತ್ತಿದ್ದರೇ ಹೊರತು ವೈಯಕ್ತಿಕ ಹಿತವನ್ನಲ್ಲ. ಅಲ್ಲಿ ಸೋಮಾರಿತನಕ್ಕೆ ಅವಕಾಶವಿರಲಿಲ್ಲ. ಕುಟುಂಬದ ಸ್ವರೂಪವೇ ಬದಲಾಗಿ ಮನೆ ಮೊದಲ ಪಾಠಶಾಲೆಯಾಗುತ್ತಿಲ್ಲ. ಶಿಶುವಿಹಾರಗಳಿಗೆ, ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳುಹಿಸುವ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.

ಚಿಂತನಗೋಷ್ಠಿಯಲ್ಲಿ ‘ಕೌಟುಂಬಿಕ ಮೌಲ್ಯಗಳು’ ಕುರಿತು ನಿವೃತ್ತ ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ ಮಾತನಾಡಿದರು.

ಸಂಗೀತ ಶಿಕ್ಷಕಿ ಕೆ. ದಾಕ್ಷಾಯಣಿ ಮತ್ತು ಎಚ್‌.ಎಸ್. ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಡಿ.ಎಸ್‌. ಸುಪ್ರಭೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು, ಗ್ರಾಮಸ್ಥರು, ನೌಕರರು ಭಾಗವಹಿಸಿದ್ದರು.

ಎಸ್‌.ಎಸ್‌. ರಂಗಮಂದಿರದಲ್ಲಿ ಮೈಸೂರು ರಂಗಾಯಣ ಕಲಾವಿದರು ‘ಮೂಕನ ಮಕ್ಕಳು’ ನಾಟಕ ಪ್ರದರ್ಶಿಸಿದರು.

ನಾಟಕೋತ್ಸವದಲ್ಲಿ ಇಂದು

ಸಾಣೇಹಳ್ಳಿ ಮಠ: ‘ಪ್ರಾಮಾಣಿಕತೆ’ ವಿಷಯ ಕುರಿತು ಚಿಂತನೆ, ನೇತೃತ್ವ: ಚಿತ್ರದುರ್ಗ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಬೆಳಿಗ್ಗೆ 8ಕ್ಕೆ. ಎಸ್‌.ಎಸ್‌.ರಂಗ ಮಂದಿರದಲ್ಲಿ ಸಾಣೇಹಳ್ಳಿ ಶಿವಕುಮಾರ ಕಲಾವಿದರಿಂದ ‘ವಧೂಟಿ’ ನಾಟಕ ಪ್ರದರ್ಶನ, ಮಧ್ಯಾಹ್ನ 2.30ಕ್ಕೆ. ‘ಕೊರೋನೋತ್ತರ ಬದುಕು' ಕುರಿತು ದಾವಣಗೆರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್‌ ಅವರಿಂದ ಉಪನ್ಯಾಸ, ಸಾನ್ನಿಧ್ಯ: ಮೈಸೂರು ಕುಂದೂರು ಮಠದ ಶರತ್ಚಂದ್ರ ಸ್ವಾಮೀಜಿ, ಉಪಸ್ಥಿತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಎಸ್.ಎ. ರವೀಂದ್ರನಾಥ್, ಕೆ.ಎಂ. ಶಿವಲಿಂಗೇಗೌಡ, ಎನ್. ಲಿಂಗಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ರಾಜಕೀಯ ಮುಖಂಡ ಆನಂದಪ್ಪ, ಸಂಜೆ 6ಕ್ಕೆ. ಎಚ್‌.ಎಸ್‌. ನವೀನ್‌ಕುಮಾರ್‌ ಅವರ ‘ಅಮೃತ ಬಿಂದುಗಳು’ ಕೃತಿ ಲೋಕಾರ್ಪಣೆ. ಭಜನೆ: ಬಸವೇಶ್ವರ ಭಜನಾ ಮಂಡಳಿ ಸಾಣೇಹಳ್ಳಿ, ನೃತ್ಯ ರೂಪಕ:ಮಹಿಳಾ ಸಾಂಸ್ಕೃತಿಕ ಶೈಕ್ಷಣಿಕ ಸಂಸ್ಥೆ ಹೊಸದುರ್ಗ, ನಾಟಕ: ‘ಗಡಿಯಾಂಕ ಕುಡಿಮುದ್ದ’ ರಚನೆ: ಲಿಂಗದೇವರು ಹಳೆಮನೆ, ನಿರ್ದೇಶನ: ಆರ್‌. ಜಗದೀಶ್, ಅಭಿನಯ: ಶಿವಸಂಚಾರ–21 ಕಲಾವಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು