ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಗಳಲ್ಲಿ ಭಕ್ತರ ಸಂಖ್ಯೆ ಕ್ಷೀಣ

ಅರ್ಚಕ ವೃತ್ತಿ ನಂಬಿದವರ ಜೀವನ ನಿರ್ವಹಣೆಯೂ ಸಂಕಷ್ಟದಲ್ಲಿ
Last Updated 23 ನವೆಂಬರ್ 2020, 4:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋಟೆನಾಡಿನಲ್ಲಿ ವಿಶೇಷ ವಿನ್ಯಾಸ, ವೈಭವೋಪೇತ ಅಲಂಕಾರದಿಂದಲೇ ಭಕ್ತರನ್ನು ಸೆಳೆಯುವ ಅನೇಕ ದೇಗುಲಗಳಿವೆ. ದೇಗುಲಕ್ಕೆ ಭೇಟಿ ನೀಡಿದರಷ್ಟೇ ದೇವರ ದರ್ಶನ ಎಂಬ ನಂಬಿಕೆಯೂ ಅನೇಕರಲ್ಲಿದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಳವೂ ಆಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಬಹುತೇಕ ದೇಗುಲಗಳಲ್ಲಿ ಶೇ 75ರಷ್ಟು ಭಕ್ತರ ಸಂಖ್ಯೆ ಕ್ಷೀಣಿಸಿದೆ. ಇದಕ್ಕೆ ಬಹುಮುಖ್ಯ ಕಾರಣ ಕೋವಿಡ್.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ‘ಎ’, ‘ಬಿ’ ಮತ್ತು ‘ಸಿ’ ದರ್ಜೆಯ ನೂರಾರು ದೇಗುಲಗಳು, ಸಾವಿರಕ್ಕೂ ಅಧಿಕ ಇತರ ದೇಗುಲಗಳು ಜಿಲ್ಲೆಯಲ್ಲಿವೆ. ಕೊರೊನಾದಿಂದಾಗಿ ಲಾಕ್‌ಡೌನ್ ಜಾರಿಯಾದ ನಂತರ ಮುಚ್ಚಿದ್ದ ದೇಗುಲಗಳು ಜೂನ್ 8ರಿಂದ ಪುನಃ ಬಾಗಿಲು ತೆರೆದವು. ದೇವರ ದರ್ಶನಕ್ಕಾಗಿ ಸರ್ಕಾರ ಭಕ್ತರಿಗೆ ಅವಕಾಶ ಮಾಡಿಕೊಟ್ಟ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇತ್ತು. ಆದರೆ, ಐದು ತಿಂಗಳು ಕಳೆದರೂ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಇದರಿಂದಾಗಿ ಅರ್ಚಕ ವೃತ್ತಿಯನ್ನೇ ನಂಬಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿನ ದೇಗುಲಗಳಿಗೆ 2019ರಲ್ಲಿ ಭೇಟಿ ನೀಡಿದ ಭಕ್ತರ ಸಂಖ್ಯೆಗೆ ಹೋಲಿಕೆ ಮಾಡಿದರೆ, ಶೇ 75ರಷ್ಟು ಭಕ್ತರ ಸಂಖ್ಯೆ ಕ್ಷೀಣಿಸಿದೆ. ಕೋವಿಡ್ ನಿಯಂತ್ರಿಸಲು 65 ವರ್ಷ ಮೇಲ್ಪಟ್ಟ, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಅಸ್ವಸ್ಥರಿಗೆ ಅವಕಾಶ ಇಲ್ಲದಿರುವುದು ಕೂಡ ಇದಕ್ಕೆ ಒಂದು ರೀತಿ ಕಾರಣವಾಗಿದೆ. ಇಚ್ಛೆಯುಳ್ಳ ದೇಗುಲಗಳಿಗೆ ಯುವಸಮೂಹ, ಮಧ್ಯ ವಯಸ್ಕರು ಭೇಟಿ ನೀಡುತ್ತಿದ್ದಾರೆ. ಆದರೂ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ.

ಸೋಮವಾರ ಶಿವನ ದೇಗುಲಗಳು, ಮಂಗಳವಾರ ಮತ್ತು ಶುಕ್ರವಾರ ದೇವಿ ದೇಗುಲಗಳು, ಶನಿವಾರ ಆಂಜನೇಯ ಹಾಗೂ ವೆಂಕಟೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಬೇಕಿತ್ತು. ಆದರೆ, ಅದು ಕೂಡ ಆಗಿಲ್ಲ.

ಕೋಟೆಯೊಳಗಿನ ಮೇಲುದುರ್ಗದ ಏಕನಾಥೇಶ್ವರಿ ದೇಗುಲಕ್ಕೆ ಲಾಕ್‌ಡೌನ್‌ಗೂ ಮುನ್ನ ಪ್ರತಿ ಮಂಗಳವಾರ ಒಂದು ಸಾವಿರ ಭಕ್ತರು ಭೇಟಿ ನೀಡುತ್ತಿದ್ದರು. ಅದೇ ರೀತಿ ಬರಗೇರಮ್ಮ ದೇಗುಲಕ್ಕೆ ಪ್ರತಿ ಶುಕ್ರವಾರ ಎರಡು ಸಾವಿರ ಭಕ್ತರು ದರ್ಶನಕ್ಕಾಗಿ ಬರುತ್ತಿದ್ದರು. ಇನ್ನು ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ ದೇಗುಲಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈಗ ಆ ಸಂಖ್ಯೆ 200ರಿಂದ 500ಕ್ಕೆ ಇಳಿಕೆಯಾಗಿದೆ.

ಕೋವಿಡ್ ಮಾರ್ಗಸೂಚಿಯನ್ನು ಶೇ 50ರಷ್ಟು ದೇಗುಲಗಳ ಆಡಳಿತ ಮಂಡಳಿ ಪಾಲಿಸುತ್ತಿವೆ. ಕೆಲವೆಡೆ ಉಲ್ಲಂಘನೆಯೂ ಆಗುತ್ತಿದೆ. ಸರ್ಕಾರ 50 ಸಂಖ್ಯೆಯ ಮಿತಿಯೊಳಗೆ ಉತ್ಸವ ನಡೆಸಲು ದಸರಾ ವೇಳೆ ಅವಕಾಶ ನೀಡಿತು. ಈ ಸಂದರ್ಭದಲ್ಲಿ ನಡೆದ ಕೆಂಡೋತ್ಸವಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬರಲಿಲ್ಲ.

ಪ್ರತಿ ವಾರ ತಪ್ಪದೇ ದೇಗುಲಕ್ಕೆ ಹೋಗುತ್ತಿದ್ದ ಭಕ್ತರಲ್ಲಿ ಅನೇಕರು ತಿಂಗಳಿಗೆ ಒಮ್ಮೆ ಭೇಟಿ ನೀಡುತ್ತಿದ್ದಾರೆ. ಕೆಲವರಲ್ಲಿ ಕೋವಿಡ್ ಭೀತಿಯೂ ಇದೆ. ಇದರಿಂದಾಗಿ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ.

***

ಸಹಾಯಧನ ಸಿಗಲಿಲ್ಲ; ಗೌರವಧನವೂ ಕಡಿಮೆ

‘ಅರ್ಚಕರ ಬದುಕು ಸಂಕಷ್ಟದಲ್ಲಿದೆ’ ಎಂದು ಕೆಲವರು ಸಹಾಯಧನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದನ ಸಿಕ್ಕಿಲ್ಲ. ಇನ್ನು ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳ ಅರ್ಚಕರಿಗೆ ಪ್ರತಿ ವರ್ಷ ನೀಡುವ ಗೌರವಧನವೂ ಕಡಿಮೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜೀವನ ಸಾಗಿಸುವುದು ಕಷ್ಟವಾಗಿದೆ. ಕೋವಿಡ್ ಕರಿನೆರಳು ಈಗಲೂ ಬಹುತೇಕ ಅರ್ಚಕರನ್ನು ಕಾಡುತ್ತಿದೆ.

‘ಕೋವಿಡ್‌ ಪೆಟ್ಟಿನಿಂದಾಗಿ ಸಾಕಷ್ಟು ನೋವು ಅನುಭವಿಸಿದ್ದೇವೆ. ಅರ್ಚನೆ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ಹೀಗಾಗಿ ನಮ್ಮ ಬದುಕು ಕಷ್ಟಕರವಾಗಿದೆ’ ಎನ್ನುತ್ತಾರೆ ಏಕನಾಥೇಶ್ವರಿ ದೇಗುಲದ ಅರ್ಚಕ ಪೂಜಾರ್ ಉಮೇಶ್.

***

ತಿಪ್ಪೇಶನ ದರ್ಶನಕ್ಕೆ ಭಕ್ತರ ಉತ್ಸಾಹ

ನಾಯಕನಹಟ್ಟಿ: ಲಾಕ್‌ಡೌನ್ ತೆರವಿನ ನಂತರ ನಾಯಕನಹಟ್ಟಿ ಪಟ್ಟಣದ ಕಾಯಕಯೋಗಿ ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ರೈತರಿಂದ ಹಿಡಿದು ಆಧ್ಯಾತ್ಮಿಕ ಚಿಂತಕರು ಸೇರಿ ಸಮಾಜದ ಎಲ್ಲ ವರ್ಗದ ಭಕ್ತರಿಗೂತಿಪ್ಪೇರುದ್ರಸ್ವಾಮಿ ಆರಾಧ್ಯ ದೈವ. ಅದಕ್ಕಾಗಿ ಸ್ವಾಮಿಗೆ ಜಾತ್ಯತೀತ ದೇವರೆಂಬ ಹೆಗ್ಗಳಿಕೆ ಇದೆ. ಇಷ್ಟಾರ್ಥ ಈಡೇರಿಸುವ ಮಹಾಮಹಿಮ ಎಂಬ ನಂಬಿಕೆಯೊಂದಿಗೆ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಮಧ್ಯ ಕರ್ನಾಟಕ ಮಾತ್ರವಲ್ಲ. ನೆರೆಯ ರಾಜ್ಯಗಳಲ್ಲೂ ಅಪಾರ ಭಕ್ತ ಸಮೂಹವಿದೆ.

ರುದ್ರಾಭಿಷೇಕ, ಅರ್ಚನೆ, ದಾಸೋಹಗಳು ದೇಗುಲಕ್ಕೆ ಭೇಟಿ ನೀಡುವ ಭಕ್ತರನ್ನು ಆಕರ್ಷಿಸುತ್ತಿವೆ. ನಿತ್ಯ ಸಾವಿರಾರು ಭಕ್ತರು ಒಳಮಠ ಹಾಗೂ ಹೊರಮಠಗಳಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯಲು ಮೊದಲಿನಂತೆಯೇ ಉತ್ಸುಕರಾಗಿದ್ದಾರೆ.

ಲಾಕ್‌ಡೌನ್ ನಂತರ ದ್ವಿಗುಣ: 2017ರಲ್ಲಿ 15 ಲಕ್ಷ, 2018ರಲ್ಲಿ 19 ಲಕ್ಷ, 2019ರಲ್ಲಿ 24 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. 2020ರ ಮಾರ್ಚ್ 22ರ ವೇಳೆಯೊಳಗೆ 8 ಲಕ್ಷ ಭಕ್ತರು ಭೇಟಿ ನೀಡಿದ್ದರು. ಲಾಕ್‌ಡೌನ್ ನಂತರದಿಂದ ಆಗಸ್ಟ್ 31ರವರೆಗೂ ಬಾಗಿಲು ಮುಚ್ಚಲಾಗಿತ್ತು. ಸೆ. 1ರಂದು ಕೋವಿಡ್ ಮಾರ್ಗಸೂಚಿ ಅನುಸರಿಸುವ ಮೂಲಕ ಬಾಗಿಲು ತೆರೆದ ಬಳಿಕ ದೇಗುಲಕ್ಕೆ 15 ಸಾವಿರ ಭಕ್ತರು ಭೇಟಿ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 38 ಸಾವಿರ, ನವೆಂಬರ್ 20ರ ವೇಳೆಗೆ 52 ಸಾವಿರ ಭಕ್ತರು ಭೇಟಿ ನೀಡಿದ್ದಾರೆ.

***

ನಡೆಯದ ಬಡವರ ಮದುವೆ

ಹಿರಿಯೂರು: ‘ದಕ್ಷಿಣಕಾಶಿ’ ಎಂದೇ ಖ್ಯಾತಿ ಪಡೆದಿರುವ ತೇರುಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಲಾಕ್‌‌ಡೌನ್ ತೆರವಿನ ನಂತರವೂ ಸರಳ ಮದುವೆ, ನಾಮಕರಣ ಸೇರಿ ಶುಭ ಸಮಾರಂಭ ನಡೆಯುತ್ತಿಲ್ಲ.

‘ಲಾಕ್‌ಡೌನ್‌ಗೂ ಮೊದಲು ಸ್ವಾಮಿ ರಥೋತ್ಸವ ಎಂದಿನಂತೆ ಅದ್ಧೂರಿಯಾಗಿ ನೆರವೇರಿತ್ತು. ಶ್ರಾವಣ ಸೋಮವಾರದ ಉತ್ಸವ, ತಿಂಗಳ ಕೊನೆಯ ಸೋಮವಾರದ ಗಣಪತಿ, ಗೌರಿ ಪೂಜೆ, ನವರಾತ್ರಿ, ಕಾರ್ತಿಕ ಮಾಸ, ಹಬ್ಬಗಳಂದು ಕಂಡು ಬರುತ್ತಿದ್ದ ಭಕ್ತರ ದಂಡು, ಸಂಭ್ರಮ ಈ ವರ್ಷ ಇಲ್ಲವಾಗಿದೆ’ ಎನ್ನುತ್ತಾರೆ ದೇಗುಲದ ಪ್ರಧಾನ ಅರ್ಚಕ ವಿಶ್ವನಾಥಾಚಾರ್.

‘ಅನ್‌ಲಾಕ್ ಬಳಿಕ ನಗರದ ಎಂಟು ದೇವತೆಗಳ ಸಮಕ್ಷಮದಲ್ಲಿ ಅಂಬಿನೋತ್ಸವ ಸರಳವಾಗಿ ನಡೆಯಿತು. ಆಯುಧ ಪೂಜೆ, ಅಂಬು, ಸರಪಳಿ ಪವಾಡದಲ್ಲಿ ಭಕ್ತರ ಸಂಖ್ಯೆ 300 ದಾಟಿಲ್ಲ’ ಎನ್ನುತ್ತಾರೆ ಸ್ವಾಮಿಯ ಭಕ್ತ ಕೇಶವಮೂರ್ತಿ.

***

ನಿರ್ಬಂಧ: ದರ್ಶನಕ್ಕೆ ಬಾರದ ಭಕ್ತರು

ಹೊಸದುರ್ಗ: ತಾಲ್ಲೂಕಿನ ‘ದಶರಥರಾಮೇಶ್ವರಸ್ವಾಮಿ’ ಪುಣ್ಯಕ್ಷೇತ್ರದಲ್ಲಿ (ದೊಡ್ಡವಜ್ರ) ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ.

‘ಪುಣ್ಯಕ್ಷೇತ್ರದಲ್ಲಿ ಬಡ ಹಾಗೂ ಮಧ್ಯಮ ವರ್ಗದವರು ಸಮುದಾಯ ಭವನದಲ್ಲಿ ಮದುವೆ, ನಾಮಕರಣ, ಮುಡಿ ತೆಗೆಸುವ ಕಾರ್ಯವನ್ನು ಮುಕ್ತವಾಗಿ ನಡೆಸುತ್ತಿದ್ದರು. ಇದರಿಂದ ಸಾವಿರಾರು ಜನರು ಸೇರುತ್ತಿದ್ದರು. ಆದರೆ, ಈಗ ಹೆಚ್ಚು ಜನರು ಸೇರಿ ನಡೆಸುತ್ತಿದ್ದ ಇಂತಹ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಅನೇಕ ಧಾರ್ಮಿಕ ಕಾರ್ಯ ಸ್ಥಗಿತವಾಗಿವೆ’ ಎನ್ನುತ್ತಾರೆ ನಾಗರಾಜು.

‘ಪುರಾಣ ಪ್ರಸಿದ್ಧ ಹಾಲುರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಇದರಿಂದ ದೇವರನ್ನು ಕಲಾಕರ್ಷಣೆ ಮಾಡಿ ಒಂದೆಡೆ ಇಡಲಾಗಿದೆ. ಮತ್ತೊಂದೆಡೆ ಕೊರೊನಾ ಭೀತಿಯಿಂದ ಗಂಗಾದೇವಿ ಕೊಳದಲ್ಲಿ ಅಪ್ಪಣೆ ಕೇಳುತ್ತಿದ್ದುದನ್ನು ಹಾಗೂ ಪೂಜೆ, ತೀರ್ಥ, ಪ್ರಸಾದ ವಿತರಣೆ ನಿಲ್ಲಿಸಿರುವುದರಿಂದ ಮೊದಲಿನಷ್ಟು ಭಕ್ತರು ಬರುತ್ತಿಲ್ಲ’ ಎನ್ನುತ್ತಾರೆ ಪುರೋಹಿತರು.

***

ಕೋವಿಡ್ ಸಂಖ್ಯೆ ಇಳಿಮುಖವಾಗುತ್ತಿದೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ 5 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ.

ಜೆ.ಪಿ.ರವಿಶಂಕರ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ನಾಯಕನಹಟ್ಟಿ

***

ಶ್ರಾವಣ ಮಾಸ ಹಾಗೂ ಹಬ್ಬದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ಗೌರಿ ಹಬ್ಬ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೆಚ್ಚಾಗಿ ಭಕ್ತರು ಕಂಡುಬಂದಿಲ್ಲ.

ಪೂಜಾರ್ ಮಂಜುನಾಥ್, ಅರ್ಚಕ, ಬರಗೇರಮ್ಮ ದೇಗುಲ

***

ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಆದಾಯವೂ ಕುಸಿದಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ನಿಂತಿವೆ. ಪ್ರತಿ ತಿಂಗಳು ಸಂಕಷ್ಟಿಯಂದು ಸುಮಾರು 15 ಸಾವಿರ ಭಕ್ತರು ಬರುತ್ತಿದ್ದರು. ಆದರೆ, ಈಗ ಅದು ಸಾವಿರ ದಾಟುತ್ತಿಲ್ಲ.

ರಾಘವೇಂದ್ರ ನಾಯಕ, ಗಣಪತಿ ದೇಗುಲದ ವ್ಯವಸ್ಥಾಪಕ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT