ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭದ್ರಾ ಮೇಲ್ದಂಡೆ’ಗೆ ಅನುದಾನದ ಸವಾಲು

ನೂತನ ಸಂಸದ ಕಾರಜೋಳ ಮೇಲಿದೆ ಮತದಾರರ ನಿರೀಕ್ಷೆ
ಜಿ.ಬಿ.ನಾಗರಾಜ್‌
Published 8 ಜೂನ್ 2024, 7:35 IST
Last Updated 8 ಜೂನ್ 2024, 7:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ ₹ 5,300 ಕೋಟಿ ಅನುದಾನ ತರುವ ಸವಾಲು ನೂತನ ಸಂಸದ ಗೋವಿಂದ ಕಾರಜೋಳ ಮೇಲಿದೆ. ನೀರಾವರಿ ಯೋಜನೆಯ ತ್ವರಿತ ಅನುಷ್ಠಾನದ ನಿರೀಕ್ಷೆಯನ್ನು ಸಾಕಾರಗೊಳಿಸುವ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಲ್ಲರು ಎಂಬ ಕಾತುರ ಮತದಾರರಲ್ಲಿದೆ.

ಚಿತ್ರದುರ್ಗದ ಚುನಾವಣಾ ಕಣದಲ್ಲಿ ‘ಭದ್ರಾ ಮೇಲ್ದಂಡೆ ಯೋಜನೆ’ ಪ್ರಮುಖ ರಾಜಕೀಯ ವಿದ್ಯಮಾನವಾಗಿತ್ತು. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಜೆಪಿ– ಕಾಂಗ್ರೆಸ್‌ ನಡುವೆ ಜಟಾಪಟಿ ನಡೆದಿತ್ತು. ‘ರಾಷ್ಟ್ರೀಯ ಯೋಜನೆ’ಯ ಮಾನ್ಯತೆ ಹಾಗೂ ಅಪಾರ ಪ್ರಮಾಣದ ಅನುದಾನದ ಭರವಸೆ ಹುಟ್ಟಿಸಿದ್ದ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನವಿದ್ದರೂ ಮತದಾರರು ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ನೀಡಿದ ಭರವಸೆ ಈಡೇರಿಸುವ ಹೊಣೆಗಾರಿಕೆ ನೂತನ ಸಂಸದರ ಮೇಲಿದೆ.

‘ಭದ್ರಾ ಮೇಲ್ದಂಡೆ’ಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಬಳಿಕ ತಾಂತ್ರಿಕ ನೆಪಗಳನ್ನು ಮುಂದಿಟ್ಟು ತಳ್ಳಿಹಾಕಿತ್ತು. ₹ 5,300 ಕೋಟಿ ಅನುದಾನವನ್ನು 2022–23ರ ಬಜೆಟ್‌ನಲ್ಲಿ ಘೋಷಿಸಿದರೂ ರಾಜ್ಯಕ್ಕೆ ಬರಲಿಲ್ಲ. ಅನುದಾನ ನೀಡದಿರುವುದನ್ನೇ ಕಾಂಗ್ರೆಸ್‌ ಪ್ರಧಾನ ಅಸ್ತ್ರವನ್ನಾಗಿ ಮಾಡಿಕೊಂಡು ಬಿಜೆಪಿ ವಿರುದ್ಧ ಪ್ರಯೋಗಿಸಿತ್ತು. ಅನುದಾನದ ತ್ವರಿತ ಬಿಡುಗಡೆಗೆ ಆಗ್ರಹಿಸಿ ರೈತರು ಬೀದಿಗೆ ಇಳಿದಿದ್ದರು.

ಅನುದಾನ ಬಿಡುಗಡೆಗೆ ವಿಳಂಬ ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಕಾರಣವೆಂದು ಚುನಾವಣಾ ಭಾಷಣದಲ್ಲಿ ಬಿಜೆಪಿ ಮುಗಿಬಿದ್ದಿತ್ತು. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸದಿರುವುದು ಹಾಗೂ ಪ್ರತ್ಯೇಕ ಖಾತೆ ತೆರೆಯುವಲ್ಲಿ ಎಸಗಿದ ಲೋಪವನ್ನು ಎತ್ತಿ ತೋರಿತ್ತು. ಚುನಾವಣೆ ಮುಗಿದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಬಹುದು ಎಂಬ ಕುತೂಹಲ ಮೂಡಿದೆ. ಅನುದಾನ ತರಲು ಬದ್ಧ ಇರುವುದಾಗಿ ಚುನಾವಣಾ ಭಾಷಣದಲ್ಲಿ ಹೇಳಿದ್ದ ಬಿಜೆಪಿ ನಾಯಕರ ಮಾತನ್ನು ನೂತನ ಸಂಸದರು ನಡೆಸಿಕೊಡುವ ಸವಾಲು ಎದುರಾಗಿದೆ.

ನೀರಾವರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಗೋವಿಂದ ಕಾರಜೋಳ ಅವರಿಗೆ ಇದೆ. ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಬಾಗಲಕೋಟೆ ಜಿಲ್ಲೆಯ ನೀರಾವರಿ ಸೌಲಭ್ಯವನ್ನು ಚುನಾವಣಾ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದ ಅವರು, ಇಂತಹದೇ ಸೌಲಭ್ಯವನ್ನು ಬರದ ನಾಡಿನ ರೈತರಿಗೆ ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದರು. ನೀರಾವರಿ ಕನಸು ಕಾಣುತ್ತಿರುವ ರೈತರು ಹಲವು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆಯ ಸಾಕಾರಕ್ಕೆ ಎದುರು ನೋಡುತ್ತಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯ ಅನುದಾನ ತರುವಂತೆ ನೂತನ ಸಂಸದರಿಗೆ ಮನವಿ ಕೊಟ್ಟು ಗಮನ ಸೆಳೆಯುತ್ತೇವೆ. ಅವರು ಒಲವು ತೋರದೇ ಇದ್ದರೆ ಹೋರಾಟ ಮುಂದುವರಿಸುತ್ತೇವೆ

– ಡಿ.ಎಸ್‌.ಹಳ್ಳಿ ಮಲ್ಲಿಕಾರ್ಜುನ್‌ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ

ಪ್ರವಾಸೋದ್ಯಮ ಅಭಿವೃದ್ಧಿ ಚಿತ್ರದುರ್ಗದ ಐತಿಹಾಸಿಕ ಕಲ್ಲಿನಕೋಟೆಯನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಭರವಸೆಯನ್ನು ಪ್ರತಿ ಚುನಾವಣೆಯಲ್ಲಿ ನೀಡಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕೂಡ ಕೋಟೆಯ ವಿಚಾರ ಪ್ರಸ್ತಾಪವಾಗಿತ್ತು. ಇದರತ್ತ ನೂತನ ಸಂಸದರು ಗಮನ ಹರಿಸಬೇಕು ಎಂಬುದು ಜನರ ಒತ್ತಾಯವಾಗಿದೆ. ‘ಮದಕರಿ ನಾಯಕ ಥೀಂ ಪಾರ್ಕ್‌’ ಮಾಡುವುದಾಗಿ ಬಿಜೆಪಿ ನಾಯಕ ಅಮಿತ್‌ ಶಾ ಐದು ವರ್ಷಗಳ ಹಿಂದೆಯೇ ಆಶ್ವಾಸನೆ ನೀಡಿದ್ದರು. ಕೋಟೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಸದ ಎ.ನಾರಾಯಣಸ್ವಾಮಿ ಕೂಡ ಶ್ರಮಿಸಿದ್ದರು. ‘ಹಂಪಿ ಮಾದರಿಯಲ್ಲಿ ಮದಕರಿ ನಾಯಕ ಉತ್ಸವ’ ಮಾಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ನೂತನ ಸಂಸದ ಕಾರಜೋಳ ಇತ್ತ ಒಲವು ತೋರುವರೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

ಕೈಗಾರಿಕೆ ಸ್ಥಾಪನೆ ‘ವಿಮಾನ ನಿಲ್ದಾಣ ಸ್ಥಾಪಿಸಿದರೆ ಉದ್ಯಮಿಗಳಿಗೆ ಅನುಕೂಲವಾಗುತ್ತದೆ. ಆಗ ಚಿತ್ರದುರ್ಗಕ್ಕೆ ಕೈಗಾರಿಕೆಗಳು ಬರುತ್ತವೆ’ ಎಂದು ಗೋವಿಂದ ಕಾರಜೋಳ ಚುನಾವಣಾ ಭಾಷಣದಲ್ಲಿ ಪದೇಪದೇ ಹೇಳಿದ್ದರು. ಕೈಗಾರಿಕಾ ಅಭಿವೃದ್ಧಿಗೆ ವಿಭಿನ್ನ ಆಯಾಮದಲ್ಲಿ ವಿಚಾರ ಮಂಡಿಸಿದ್ದರು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂಬುದು ಜನರ ಕೋರಿಕೆ. ಚಿತ್ರದುರ್ಗದಲ್ಲಿ ದೊಡ್ಡ ಕೈಗಾರಿಕೆಗಳಿಲ್ಲ. ಉದ್ಯೋಗ ಅರಸಿ ಜನರು ಬೆಂಗಳೂರಿಗೆ ತೆರಳುತ್ತಾರೆ. ಕೃಷಿ ಕೂಲಿ ಕಾರ್ಮಿಕರು ಚಿಕ್ಕಮಗಳೂರು ಮಂಡ್ಯ ಶಿವಮೊಗ್ಗದತ್ತ ಗುಳೆ ಹೋಗುತ್ತಾರೆ. ಸ್ಥಳೀಯವಾಗಿ ಉದ್ಯೋಗ ನೀಡಲು ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT