ಶುಕ್ರವಾರ, ಆಗಸ್ಟ್ 12, 2022
23 °C
ಆಶ್ರಯ ಯೋಜನೆಯಲ್ಲೂ ಸಿಕ್ಕಿಲ್ಲ ವಸತಿ; ಅಂಗವಿಕಲ ದಂಪತಿಯ ಮೊರೆ

ಮನೆ ಬೀಳಂಗಾಗೈತಿ; ದಿಕ್ಕೇ ಕಾಣಂಗಿಲ್ಲ

ರವಿಕುಮಾರ್ ಸಿರಿಗೊಂಡನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶ್ರೀರಾಂಪುರ: ‘ಹೊರಗೆ ಹೋಗಿ ದುಡಿಯಲು ಕಣ್ಣು ಸರಿಯಾಗಿ ಕಾಣುವುದಿಲ್ಲ. ಮಡದಿಗೆ ಪೋಲಿಯೊದಿಂದಾಗಿ ಕೆಲಸ ಮಾಡಲಾಗುತ್ತಿಲ್ಲ. ವಾಸವಿರುವ ಮನೆ ಬೀಳಂಗಾಗೈತಿ. ಯಾರಾದರೂ ಸಹಾಯ ಮಾಡಿದರೆ ಶೆಡ್‌ ಆದರೂ ಹಾಕಿಕೊಂಡು ಜೀವನ ಮಾಡುತ್ತೇವೆ...’

ಇದು ಶ್ರೀರಾಂಪುರ ಹೋಬಳಿಯ ನಗರಗೆರೆ ಗ್ರಾಮದ ಅಂಗವಿಕಲ ರವಿಕುಮಾರ್ ಅವರ ಅಳಲು. ಪತಿ, ಪತ್ನಿ ಇಬ್ಬರೂ ಅಂಗವಿಕಲರು. ರವಿಕುಮಾರ್ ಅವರಿಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ಅವರ ಪತ್ನಿ ಶೋಭಾ ಅವರಿಗೆ ಪೋಲಿಯೊದಿಂದ ಬಲಗೈಯಲ್ಲಿ ಏನೂ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಅವರು ಆರೋಗ್ಯವಾಗಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಮಳೆ ಬಂದು ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಆಶ್ರಯ ಮನೆ ಮಂಜೂರು ಮಾಡಿಸಿಕೊಡುವಂತೆ ಎಸ್. ನೇರಲಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಂಗವಿಕಲರ ಕೋಟಾದಲ್ಲಿ ಇದುವರೆಗೂ ಮನೆ ಮಂಜೂರು ಮಾಡಿಲ್ಲ. ಕಳೆದ ವರ್ಷ ಶಾಸಕ ಗೂಳಿಹಟ್ಟಿ ಶೇಖರ್ ಗ್ರಾಮಕ್ಕೆ ಭೇಟಿ ನೀಡಿ ಈ ಕುಟುಂಬಕ್ಕೆ ₹ 1 ಲಕ್ಷ ವೈಯಕ್ತಿಕ ನೆರವು ನೀಡಿ, ಅಂಗವಿಕಲ ವೇತನ ಮಂಜೂರು ಮಾಡಿಸಿದ್ದರು.

ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿಗೆ ಹೋಗುತ್ತಿರುವಾಗಲೇ ದಿನ ಕಳೆದಂತೆ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಾ ಬಂದಿದ್ದರಿಂದ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. 10–15 ಅಡಿ ದೂರದವರೆಗೆ ಮಾತ್ರ ಅಸ್ಪಷ್ಟವಾಗಿ ಕಾಣುತ್ತದೆ ಎಂದರು ರವಿಕುಮಾರ್.

‘ಶಾಸಕರು ನೀಡಿದ್ದ ₹ 1 ಲಕ್ಷಕ್ಕೆ ₹ 20 ಸಾವಿರ ಹೊಂದಿಸಿ, ಮನೆಕಟ್ಟಲು ಅಡಿಪಾಯ ಹಾಕಲಾಗಿದೆ. ಆಶ್ರಯ ಮನೆ ಬರುತ್ತೆ ಅಂತ ಕಾಯುತ್ತಿದ್ದೇವೆ. ಒಂದು ವರ್ಷ ಕಳೆದರೂ ಮನೆ ಮಂಜೂರಾಗಿಲ್ಲ. ಕೇಳಿದರೆ ಮನೆ ಬಂದಿಲ್ಲ ಎನ್ನುತ್ತಾರೆ. ಮಳೆಗಾಲ ಬಂತೆಂದರೆ ಎಲ್ಲಿ ಮನೆಯ ಗೋಡೆ ಕುಸಿಯುವುದೋ ಎನ್ನುವ ಆತಂಕದಲ್ಲಿ ಚಿಕ್ಕ ಮಕ್ಕಳೊಂದಿಗೆ ಜೀವನ ದೂಡುವಂತಾಗಿದೆ. ಯಾರಾದರೂ ಸಹಾಯ ಮಾಡಿದರೆ ತಾತ್ಕಾಲಿಕವಾಗಿ ಒಂದು ಶೆಡ್‍ ಆದರೂ ಹಾಕಿಕೊಂಡು ಜೀವನ ಮಾಡುತ್ತೇವೆ’ ಎನ್ನುತ್ತಾರೆ ರವಿಕುಮಾರ್ ದಂಪತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.