ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶಿಸಿದ ಕುಂಚಿಟಿಗರು

ಹೊಸದುರ್ಗದಲ್ಲಿ ನಡೆದ 31ನೇ ವಿಜಯರಾಯ ಸಂಗಮೇಶ್ವರ ಜಯಂತಿ, ರಾಜ್ಯ ಮಟ್ಟದ ಕುಂಚಿಟಿಗರ ಸಮಾವೇಶ
Last Updated 1 ಮಾರ್ಚ್ 2021, 4:38 IST
ಅಕ್ಷರ ಗಾತ್ರ

ಹೊಸದುರ್ಗ: ಕೊರೊನಾ ಕಾರಣ ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಸರಳವಾಗಿ ಆಯೋಜಿಸಿದ್ದ 31ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ರಾಜ್ಯ ಮಟ್ಟದ ಕುಂಚಿಟಿಗರ ಸಮಾವೇಶದಲ್ಲಿ ಸಮಾಜದ ಅಭಿವೃದ್ಧಿಗೆ ಕುಂಚಿಟಿಗರನ್ನು ಪ್ರವರ್ಗ–1ಕ್ಕೆ ಸೇರಿಸಲು ಹಾಗೂ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಲಾಯಿತು.

ಶಾಂತವೀರ ಸ್ವಾಮೀಜಿ, ‘ಕುಂಚಿಟಿಗರಿಗೆ ಮೀಸಲಾತಿ ಹೆಚ್ಚಿಸಬೇಕಾಗಿಯೂ, ಇಳಿಸಬೇಕಾಗಿಯೂ ಅಥವಾ ಬೇರೆಯವರಿಂದ ಕಸಿದುಕೊಳ್ಳ ಬೇಕಾಗಿಯೂ ಇಲ್ಲ. ನಮ್ಮನ್ನು ಪ್ರವರ್ಗ–1ಕ್ಕೆ ಸೇರಿಸಬೇಕು ಎಂದು ಜನಾಂಗದವರು 30 ವರ್ಷಗಳಿಂದ ಕೇಳುತ್ತಿದ್ದಾರೆ. ಆದರೆ, ಅದು ಇನ್ನೂ ಈಡೇರದಿರುವುದು ಬೇಸದ ಸಂಗತಿ’ ಎಂದು ಹೇಳಿದರು.

‘1994ರಲ್ಲಿ ದೊಡ್ಡ ಸಮುದಾಯದ ಮುತ್ಸದ್ಧಿಯೊಬ್ಬರು ನಮಗೆ ಅನ್ಯಾಯ ಮಾಡಿದ್ದರು. ಅಂದು ನಮ್ಮವರು ಕೇವಲ 2 ಶಾಸಕರು ಇದ್ದಿದ್ದನ್ನೇ ಕಾರಣವಾಗಿ ಇಟ್ಟುಕೊಂಡು ಕುಂಚಿಟಿಗರಿಗೆ ಮುಂದುವರಿದ ಸಮಾಜ ಎಂಬ ಪಟ್ಟಕಟ್ಟಿ ಹಿಂದುಳಿದ ವರ್ಗಗಳಿಂದ ನಮ್ಮನ್ನು ತೆಗೆಯಲು ವ್ಯವಸ್ಥಿತವಾಗಿ ಪಿತೂರಿ ನಡೆಸಿದರು. ಅಂದು ಹಿಂದುಳಿದ ವರ್ಗಗಳಿಂದ ನಮ್ಮನ್ನು ತೆಗೆಯಿಸಿದ ಆ ಮುತ್ಸದ್ಧಿ ಸಮುದಾಯದ 17 ಮಂದಿ ಶಾಸಕರು ಹಾಗೂ 3 ಮೆಡಿಕಲ್‌ ಕಾಲೇಜುಗಳು ಇವೆ. ಇದು ಸಾಮಾಜಿಕ ನ್ಯಾಯವೇ’ ಎಂದು ಪ್ರಶ್ನಿಸಿದರು.

‘ಮಠಕ್ಕೆ ಅನುದಾನ ಪಡೆಯಲು, ರಾಜಕಾರಣ ಮಾಡಲು ಮೀಸಲಾತಿ ಕೇಳುತ್ತಿಲ್ಲ. ನಮ್ಮ ಸಮಾಜದ ಮಕ್ಕಳ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಹುದ್ದೆಗೆ ಕಳಿಸಲು ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿ ಕೊಡಿಸಬೇಕಿರುವುದು ನಮ್ಮ ಕರ್ತವ್ಯ. ನಮ್ಮ ಪ್ರತಿಷ್ಠೆಯಿಂದ ಸಮುದಾಯದ ವಿದ್ಯಾರ್ಥಿಗಳು ನೌಕರಿಯಿಂದ ವಂಚಿತರಾಗುತ್ತಿದ್ದಾರೆ. ಕುಂಚಿಟಿಗ ಜಾತಿ ಪ್ರಮಾಣ ಪತ್ರ ಪಡೆಯಬೇಕು. ಪತ್ರ ಚಳವಳಿ ಮೂಲಕ ನಮ್ಮ ನಾಯಕರ ಮನೆಗೆ ಹೋಗಿ ಹಕ್ಕೊತ್ತಾಯ ಮಾಡಬೇಕೇ ಹೊರತು, ಮಠ, ನಾಯಕರಿಗೆ ಅವಮಾನ ಮಾಡುವಂತೆ ನಡೆದುಕೊಳ್ಳಬಾರದು. ನಮ್ಮ ಸಮಾಜದ ಅಭಿವೃದ್ಧಿಗೆ ಇನ್ನುಳಿದ ಸಮುದಾಯದ ಜತೆಗೆ ಸಹೋದರತೆಯಿಂದ ನಡೆದುಕೊಳ್ಳಬೇಕು’ ಎಂದು ಕರೆ ನೀಡಿದರು.

ಶಾಸಕ ಗೂಳಿಹಟ್ಟಿ ಡಿ. ಶೇಖರ್‌, ‘ಶಾಂತವೀರ ಸ್ವಾಮೀಜಿ ಕುಂಚಿಟಿಗ ಸಮಾಜಕ್ಕೆ ಅಷ್ಟೇ ಅಲ್ಲದೆ ಇನ್ನಿತರರಿಗೂ ಜನಪರ, ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ನಾನು 2ನೇ ಬಾರಿ ಶಾಸಕನಾಗಲು ಶಾಂತವೀರಶ್ರೀ ಅವರ ಆಶೀರ್ವಾದ, ಎಸ್‌. ಲಿಂಗಮೂರ್ತಿ ಅವರ ತ್ಯಾಗ ಕಾರಣವಾಗಿದೆ. ಕೋವಿಡ್ ಕಾಲದಲ್ಲೂ ಹೊಸದುರ್ಗದ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದಿದ್ದೇನೆ. ವಾಣಿ ವಿಲಾಸ ಸಾಗರದ ಹಿನ್ನೀರಿನಿಂದ ತೊಂದರೆ ಅನುಭವಿಸುವ ಮತ್ತೋಡು ಹಾಗೂ ಮಾಡದಕೆರೆ ಹೋಬಳಿ ಜನರ ಸಮಸ್ಯೆ ನಿವಾರಣೆಗೆ ಬ್ರಿಡ್ಜ್‌ ನಿರ್ಮಿಸಲು ₹ 85 ಕೋಟಿ ಅನುದಾನ ತಂದಿದ್ದೇನೆ. ಮಠದ ಪಕ್ಕದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗುತ್ತಿದೆ. ಕುಂಚಿಟಿಗ ಗುರುಪೀಠವನ್ನು ಧಾರ್ಮಿಕ ಪುಣ್ಯಕ್ಷೇತ್ರವಾಗಿಸಲು ಇಲ್ಲಿನ ವೆಂಕಟೇಶ್ವರ ದೇವಾಲಯಕ್ಕೆ ಹೆಚ್ಚಿನ ಅನುದಾನ, ನಿವೇಶನ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಹೊಳ್ಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಬೆಂಗಳೂರು ಬಿಬಿಎಂಪಿ ಸದಸ್ಯ ಲಗ್ಗರೆ ನಾರಾಯಣಸ್ವಾಮಿ, ಕೌಶಲ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ, ಪುರಸಭೆ ಅಧ್ಯಕ್ಷ ಎಂ. ಶ್ರೀನಿವಾಸ್‌, ಶಿವಭದ್ರಯ್ಯ ಮಾತನಾಡಿದರು.

‌ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿಜಯಪುರ ಹಡಪದ ಗುರುಪೀಠದ ಅನ್ನದಾನೀ ಭಾರತೀ ಅಪ್ಪಣ್ಣ ಸ್ವಾಮೀಜಿ, ಕೊರಟಗೆರೆ ಮಹಾಲಿಂಗ ಸ್ವಾಮೀಜಿ, ಹಾವೇರಿಯ ಚಂದ್ರಶೇಖರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕುಂಚಿಟಿಗ ಸಮಾಜದ ಮುಖಂಡರಾದ ಕಲ್ಲೇಶಣ್ಣ, ಶಾಂತಗುರೂಜಿ, ರವಿಗೌಡ, ರಂಗೇಗೌಡ, ಶ್ರೀನಿವಾಸ ರೆಡ್ಡಿ, ಬೈರೇಶ್, ರಾಜಪ್ಪ, ಹುಚ್ಚಪ್ಪ ಮಾಸ್ಟರ್, ಶೇಖರಪ್ಪ, ರಂಗನಗೌಡ, ಷಣ್ಮಖಪ್ಪ, ಮಂಜು, ಉಪನ್ಯಾಸಕ ಜಯಣ್ಣ, ಬನುಮಯ್ಯ ವಂಶಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT